Belagavi News:
ವಯನಾಡು ಭೂಕುಸಿತ: ಮೂವರು ಸಾವು, ನಾಪತ್ತೆಯಾದವರಿಗೆ ಮುಂದುವರೆದ ಶೋಧ
ಕೇರಳದ ವಯನಾಡು ಜಿಲ್ಲೆಯ ಕೆಲಾಡಿ (ಕಲ್ಲಾಡಿ) ಪ್ರದೇಶದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೂವರು ಮೃತಪಟ್ಟಿದ್ದು, ಇನ್ನು ಐವರು ನಾಪತ್ತೆಯಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಸ್ಥಳೀಯ ಸಿಬ್ಬಂದಿ ತೀವ್ರ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ನಿರಂತರ ಮಳೆ, ಕೆಸರು ಮಿಶ್ರಿತ ಮಣ್ಣು ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಸುರಂಗ ಕಾಮಗಾರಿ ನಡೆಯುತ್ತಿದ್ದ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಭೂಕುಸಿತದಿಂದ ರಸ್ತೆ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಿ ಹೋಗಿತ್ತು.
ಎನ್.ಡಿ.ಆರ್.ಎಫ್ ಸಿಬ್ಬಂದಿ ಹಾಗೂ ಸ್ಥಳೀಯ ತಂಡಗಳು ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ ರಸ್ತೆ ತೆರವುಗೊಳಿಸಿದ್ದು, ಇದೀಗ ರಕ್ಷಣಾ ವಾಹನಗಳ ಸಂಚಾರಕ್ಕೆ ಅನುಕೂಲವಾಗಿದೆ. ನಾಪತ್ತೆಯಾಗಿರುವವರು ಪತ್ತೆಗಾಗಿ ಜೆಸಿಬಿ ಯಂತ್ರಗಳ ಸಹಾಯದಿಂದ ಮಣ್ಣು ತೆರವು ಕಾರ್ಯ ಮುಂದುವರೆದಿದೆ.
ಭೂಕುಸಿತ ಸಂಭವಿಸಿದ ವೇಳೆ ಸುರಂಗ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಆದರೆ ಕಾಮಗಾರಿ ಸ್ಥಳದ ಸಮೀಪದ ತಾತ್ಕಾಲಿಕ ಶೆಡ್ ಗಳಲ್ಲಿ ಹಲವು ಕಾರ್ಮಿಕರು ವಾಸವಾಗಿದ್ದರು ಎನ್ನಲಾಗಿದೆ. ಕಾಮಗಾರಿ ವೇಳೆ ತೆಗೆದ ಮಣ್ಣನ್ನು ಬೆಟ್ಟದ ಮುಂಭಾಗದಲ್ಲಿ ಅವೈಜ್ಞಾನಿಕವಾಗಿ ಸಂಗ್ರಹಿಸುವುದು ಭೂಕುಸಿತದ ತೀವ್ರತೆಗೆ ಕಾರಣವಾಗಿರಬಹುದು ಎಂಬ ಪ್ರಾರ್ಥಮಿಕ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಭೂಕುಸಿತಕ್ಕೆ ಗಂಭೀರ ಕಾರಣ ತಿಳಿಯಲು ಹೆಚ್ಚಿನ ತನಿಖೆ ಮುಂದುವರೆದಿದೆ.
“ವಯನಾಡು ದುರಂತದ ಬಗ್ಗೆ ಕಣ್ಣಾರೆ ಕಂಡ ಘಟನೆಗಳನ್ನು ಎಳೆ ಎಳೆಯಾಗಿ ವಿವರಿಸಿದ ಪ್ರತ್ಯಕ್ಷ ಸಾಕ್ಷಿಯ”
ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿಯ ಸೇತುವೆ ಸಮೀಪ ನಡೆದ ಈ ದುರಂತದ ಗಂಭೀರತೆಯನ್ನು ಸ್ಥಳೀಯ ಹೋಟೆಲ್ ಮಾಲೀಕರೊಬ್ಬರು ಕಣ್ಣಾರೆ ಕಂಡಿದ್ದಾರೆ.
ಭೂಕುಸಿತದ ವೇಳೆ ನೀರು ಮತ್ತು ಮಣ್ಣು ಮಿಶ್ರಿತ ರಭಸಕ್ಕೆ ಸಿಲುಕಿದ ಬೃಹತ್ ಟ್ಯಾಕ್ಟರ್ ಒಂದು ಕೊಚ್ಚಿಕೊಂಡು ಬಂದಿದ್ದು, ಹೋಟೆಲ್ ಸಮೀಪದವರೆಗೆ ತಲುಪಿದೆ. ಈ ಭಯಾನಕ ದೃಶ್ಯಗಳು ಹೋಟೆಲ್ ನ ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ.
ಟ್ಯಾಕ್ಟರ್ ಹೋಟೆಲ್ ಗೆ ಅತಿ ಸಮೀಪದಲ್ಲಿ ನಿಂತಿದ್ದರಿಂದ ಬಾರಿ ಅನಾಹುತ ತಪ್ಪಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ಭೂಕುಸಿತದ ಸಂದರ್ಭದಲ್ಲಿ ಎದುರಾದ ಭೀಕರ ಪರಿಸ್ಥಿತಿ ಹಾಗೂ ಕಣ್ಣೆದುರೇ ನಡೆದ ಘಟನೆಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ವಯನಾಡು ಭೂಕುಸಿತದ ಬಗ್ಗೆ ಮಾಹಿತಿ ನೀಡಿದ ಸ್ಥಳೀಯ ಹೋಟೆಲ್ ಮಾಲೀಕರ ಪ್ರಕಾರ, ನಿರಂತರ ಬಾರಿ ಮಳೆಯಿಂದಾಗಿ ಮಣ್ಣು ಕುಸಿದು ನೀರಿನೊಂದಿಗೆ ರಭಸವಾಗಿ ಹರಿದು ಬಂದಿದೆ. ಈ ವೇಳೆ ಮಣ್ಣಿನ ಪ್ರವಾಹಕ್ಕೆ ಸಿಲುಕಿದ ಮಹಿಳೆಯೊಬ್ಬರು ಮಣ್ಣಿ ನಡಿ ಸಿಲುಕಿಕೊಂಡಿದ್ದು, ಸ್ಥಳೀಯರ ಸಮಯಪ್ರಜ್ಞೆ ಹಾಗೂ ನೆರವಿನಿಂದ ಸುರಕ್ಷಿತವಾಗಿ ಪಾರಾಗಿದ್ದಾರೆ.
ದುರಂತದ ಸಮಯದಲ್ಲಿ ಹೋಟೆಲ್ ಮಾಲೀಕರು ಹಾಗೂ ಅವರ ಸುಮಾರು 10 ಮಂದಿ ಸಿಬ್ಬಂದಿ ಜೀವ ಭಯದಿಂದ ಸ್ಥಳದಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ನಿರಂತರ ಮಳೆ ಈ ಭೂ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಘಟನೆಯ ಭೀಕರತೆ ಹೋಟೆಲ್ ನ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಕೆಸರು ಮಿಶ್ರಿತ ನೀರಿನ ರಭಸಕ್ಕೆ ಬಸ್ ಒಂದು ಉರುಳಿ ಬೀಳುವ ದೃಶ್ಯ ಹಾಗೂ ಬೃಹತ್ ಟ್ಯಾಂಕರ್ ಒಂದು ಕೊಚ್ಚಿಕೊಂಡು ಬರುವ ದೃಶ್ಯಗಳು ದಾಖಲಾಗಿವೆ.
ಅದೃಷ್ಟವಶಾತ್ ಟ್ಯಾಂಕರ್ ಹೋಟೆಲ್ ಸಮೀಪದಲ್ಲೇ ಬಂದು ನಿಂತಿದ್ದು, ಬಾರಿ ಅನಾಹುತ ತಪ್ಪಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.ವಯನಾಡು ಭೂಕುಸಿತದ ಬಳಿಕ ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದು, ನಾಪತ್ತೆಯಾಗಿರುವವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.
“ಕೇರಳ ವಯನಾಡು ದುರಂತ :3 ಸಾವು,ಐವರು ನಾಪತ್ತೆ;ಜಿಲ್ಲಾಧಿಕಾರಿ ಮೇಘಶ್ರೀ ಹೇಳಿದ್ದೇನು?”
ಕೇರಳದ ವಯನಾಡು ಜಿಲ್ಲೆಯ ಕಲ್ಲಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು,ಐವರು ನಾಪತ್ತೆಯಾಗಿದ್ದಾರೆ ಎಂದು ವಯನಾಡು ಜಿಲ್ಲಾಧಿಕಾರಿ ಮೇಘಶ್ರೀ ಮಾಹಿತಿ ನೀಡಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಅಗ್ನಿಶಾಮಕ ದಳ, ನಾಗರಿಕ ರಕ್ಷಣಾ ಸ್ವಯಂಸೇವಕರು ಸೇರಿದಂತೆ ಒಟ್ಟು 167 ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಜೂನ್ 27ರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಮೇಲ್ವಿಚಾರಣೆಗೆ ಅಗತ್ಯವಿದ್ದ ಕೆಲವೇ ಸಿಬ್ಬಂದಿ ಮಾತ್ರ ಸ್ಥಳದಲ್ಲಿದ್ದರು. ಇದರಿಂದ ಹೆಚ್ಚಿನ ಪ್ರಮಾಣದ ಜೀವ ಹಾನಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಐವರು ನಾಪತ್ತೆಯಾಗಿದ್ದಾರೆ.
ಸದ್ಯ ನಾಪತ್ತೆಯಾಗಿರುವ ಕಾರ್ಮಿಕರ ಪತ್ತೆ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರಕ್ಷಣಾ ತಂಡಗಳು ಶೋಧ ಕಾರ್ಯವನ್ನು ತೀವ್ರಗೊಳಿಸಿವೆ. ಸ್ನಿಫರ್ ಡಾಗ್ ಗಳು, ಜೆಸಿಬಿ ಯಂತ್ರಗಳು ಹಾಗೂ ಅಗತ್ಯ ತಾಂತ್ರಿಕ ಸಲಕರಣೆಗಳ ನೆರವಿನಿಂದ ಪ್ರದೇಶವನ್ನು ನಾಲ್ಕು ವಲಯಗಳಾಗಿ ವಿಂಗಡಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮೆಪ್ಪಾಡಿಹಾಗೂ ನಾಲ್ಕು ವಾರ್ಡ್ ಗಳ ನಡುವಿನ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯ ಸ್ಥಿರತೆಯನ್ನು ಪರಿಶೀಲಿಸಿ, ಸಾರಿಗೆ ಸಂಚಾರ ಪುನಃ ಆರಂಭಿಸಲು ಅಧಿಕಾರಿಗಳು ರಾತ್ರಿಯಿಡೀ ಶ್ರಮಿಸಿದ್ದಾರೆ. ವಯನಾಡು ಭೂಕುಸಿತ ದುರಂತದ ಹಿನ್ನೆಲೆಯಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಮುಂದುವರೆದಿದೆ.