ದೆಹಲಿ ಸ್ಫೋಟದ ರೂವಾರಿಗಳನ್ನು ನಾವು ಬಿಡುವುದಿಲ್ಲ: ಮೋದಿ
ದೆಹಲಿ ಕಾರು ಸ್ಪೋಟದ ಮರುದಿನವಾದ ಇಂದು ಭೂತಾನ್ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಈ ಸಂಚಿನ ರೂವಾರಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಥಿಂಪು(ಭೂತಾನ್):
ಎರಡು ದಿನದ ಪ್ರವಾಸಕ್ಕಾಗಿ ಭೂತಾನ್ಗೆ ಬಂದಿಳಿದ ಬಳಿಕ ಮಾತನಾಡಿದ ಅವರು, "ಇಂದು ನಾನು ಇಲ್ಲಿಗೆ ಭಾರವಾದ ಹೃದಯದಿಂದ ಆಗಮಿಸಿದ್ದೇನೆ. ನಿನ್ನೆ ಸಂಜೆ ದೆಹಲಿಯಲ್ಲಿ ಭೀಕರ ಘಟನೆ ನಡೆದಿದೆ. ಇದು ಎಲ್ಲರಲ್ಲೂ ದುಃಖ ತಂದಿದೆ. ಸಂತ್ರಸ್ತ ಕುಟುಂಬಗಳ ನೋವು ನನಗೆ ಅರ್ಥವಾಗುತ್ತದೆ. ಇಂದು ಇಡೀ ದೇಶವೇ ಅವರ ಪರ ನಿಂತಿದೆ. ರಾತ್ರಿಪೂರ್ತಿ ಈ ಘಟನೆ ಸಂಬಂಧ ಎಲ್ಲ ತನಿಖಾ ಸಂಸ್ಥೆಯೊಂದಿಗೆ ನಾನು ಸಂಪರ್ಕದಲ್ಲಿದ್ದೆ. ನಮ್ಮ ತನಿಖಾ ಸಂಸ್ಥೆಗಳು ಈ ಪಿತೂರಿಯನ್ನು ಭೇದಿಸಲಿವೆ. ಸಂಚಿನ ರೂವಾರಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ" ಎಂದು ಗುಡುಗಿದ್ದಾರೆ.
ದೆಹಲಿ ಕಾರು ಸ್ಪೋಟದ ಘಟನೆಯನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ದಾಳಿಯ ರೂವಾರಿಗಳನ್ನು ತಕ್ಕ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೃತಪಟ್ಟವರ ಕುಟುಂಬಕ್ಕೆ ಸಂತಾಪ ತಿಳಿಸಿದ ಅವರು, ನೋವು ಭರಿಸುವ ಧೈರ್ಯ ಮತ್ತು ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಕೆಂಪು ಕೋಟೆ ಸಮೀಪ ಸೋಮವಾರ ಸಂಜೆ 7ರ ಸುಮಾರಿಗೆ ನಿಧಾನವಾಗಿ ಚಲಿಸುತ್ತಿದ್ದ ಹುಂಡೈ ಐ20 ಕಾರು ಸ್ಫೋಟಗೊಂಡಿದ್ದು, ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಪೋಟದ ತೀವ್ರತೆಗೆ ಹಲವು ವಾಹನಗಳು ಜಖಂಗೊಂಡಿವೆ.
ದೆಹಲಿ ಪೊಲೀಸರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ), ಸ್ಫೋಟಕ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಫೋಟದ ಹಿಂದಿನ ಕಾರಣಗಳು ಮತ್ತು ಉದ್ದೇಶವನ್ನು ಕಂಡುಹಿಡಿಯಲು ಹಲವು ಸಂಸ್ಥೆಗಳು ಜಂಟಿಯಾಗಿ ತನಿಖೆ ನಡೆಸುತ್ತಿವೆ.
ಈ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದು, ಇಂದು ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆ ನಡೆದಿದೆ.
ಪುಲ್ವಾಮಾ ವೈದ್ಯನಿಂದ ಕಾರು ಡ್ರೈವ್:
ಫರಿದಾಬಾದ್ನಲ್ಲಿ ಪತ್ತೆಯಾದ ಭಾರಿ ಸ್ಫೋಟಕ ಪ್ರಕರಣ ಮತ್ತು ಕೆಂಪು ಕೋಟೆ ಬಳಿ ಕಾರು ಸ್ಫೋಟಕ್ಕೂ ಸಂಬಂಧವಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಫೋಟಗೊಂಡ ಕಾರನ್ನು ಪುಲ್ವಾಮಾ ನಿವಾಸಿಯಾದ ವೈದ್ಯ ಉಮರ್ ಮೊಹಮ್ಮದ್ ಎಂಬಾತ ಚಲಾಯಿಸುತ್ತಿದ್ದ. ಸ್ಫೋಟದಲ್ಲಿ ಅಮೋನಿಯಮ್ ನೈಟ್ರೇಟ್, ಡಿಟೊನೇಟರ್ಸ್ ಬಳಕೆಯಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ.
ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದು, "ದೇಶದ ಪ್ರಮುಖ ತನಿಖಾ ಸಂಸ್ಥೆಗಳು ದೆಹಲಿ ಸ್ಫೋಟ ಪ್ರಕರಣದ ಬಗ್ಗೆ ತ್ವರಿತ ಮತ್ತು ಸಂಪೂರ್ಣ ತನಿಖೆ ನಡೆಸುತ್ತಿವೆ. ಇದರ ಹೊಣೆಗಾರರನ್ನು ನಾವು ಬಿಡುವುದಿಲ್ಲ. ಶೀಘ್ರದಲ್ಲೇ ತನಿಖಾ ಸಂಸ್ಥೆಗಳು ಸಂಚಿನ ಕುರಿತು ಬಹಿರಂಗಪಡಿಸಲಿವೆ" ಎಂದು ಹೇಳಿದ್ದಾರೆ.
ಇನ್ನಷ್ಟು ಓದಿರಿ :
ಇಸ್ಲಾಮಾಬಾದ್ ಜಿಲ್ಲಾ ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟ: 12 ಮಂದಿ ಸಾವು