BELAGAVI NEWS :
ನವದೆಹಲಿ: ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧನೆಯಾಗಿದ್ದು, ದೇಶದ 104 ವಿಮಾನ ನಿಲ್ದಾಣಗಳು ಈಗ ಶೇ.100 ರಷ್ಟು ನವೀಕರಿಸಬಹುದಾದ (ರಿನ್ಯೂವೇಬಲ್) ಇಂಧನದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ. ದೇಶದ ವಾಯುಯಾನ ಮೂಲಸೌಕರ್ಯವನ್ನು ಹೆಚ್ಚು ಸುಸ್ಥಿರ ಹಾಗೂ ಪರಿಸರ ಸ್ನೇಹಿಯನ್ನಾಗಿ ರೂಪಿಸುವ ದಿಸೆಯಲ್ಲಿ ಇದು ಮಹತ್ವದ ಸಾಧನೆಯಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶುದ್ಧ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಆದ್ಯತೆಯ ಪ್ರತಿಫಲವೇ ಈ ಸಾಧನೆ ಎಂದು ಹೇಳಿದ್ದಾರೆ. 2014ರಲ್ಲಿ ದೇಶದ ಯಾವುದೇ ವಿಮಾನ ನಿಲ್ದಾಣವು ಶೇ.100 ರಷ್ಟು ನವೀಕರಿಸಬಹುದಾದ ಇಂಧನ ಬಳಕೆ ಮಾಡುತ್ತಿರಲಿಲ್ಲ. ಆದರೆ ಈಗ 104 ವಿಮಾನ ನಿಲ್ದಾಣಗಳು ಸಂಪೂರ್ಣವಾಗಿ ರಿನ್ಯೂವೇಬಲ್ ಇಂಧನದ ಮೂಲಕ ತಮ್ಮ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
"ಹೊಸ ಭಾರತ ಕೇವಲ ಮಾತಿನಲ್ಲಿ ಅಲ್ಲ, ಕಾರ್ಯದಲ್ಲೂ ಸುಸ್ಥಿರ ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದೆ. 2070 ರ ವೇಳೆಗೆ ' ನೆಟ್ ಜಿಯೋ' (ನಿವ್ವಳ ಶೂನ್ಯ) ಗುರಿ ಸಾಧಿಸುವ ದಿಸೆಯಲ್ಲಿ ದೇಶ ದೃಢ ಹೆಜ್ಜೆ ಇಡುತ್ತಿದೆ" ಎಂದು ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ಈ ಸಾಧನೆಯಡಿ, 104 ವಿಮಾನ ನಿಲ್ದಾಣಗಳು ತಮ್ಮ ಸಂಪೂರ್ಣ ವಿದ್ಯುತ್ ಅಗತ್ಯವನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಪೂರೈಸುತ್ತಿವೆ. ವಿಮಾನ ನಿಲ್ದಾಣಗಳ ಆವರಣದಲ್ಲಿ ಸ್ಥಾಪಿಸಲಾದ ಸೌರ ವಿದ್ಯುತ್ ಘಟಕಗಳಿಂದ ಉತ್ಪಾದನೆಯಾಗುವ ವಿದ್ಯುತ್ ಹಾಗು ಧೀರ್ಘಾವಧಿಯ ಒಪ್ಪಂದಗಳ ಮೂಲಕ ಪಡೆಯುವ ಜಲವಿದ್ಯುತ್ ಸೇರಿದಂತೆ ವಿವಿಧ ಹಸಿರು ಇಂಧನ ಮೂಲಗಳನ್ನು ಬಳಸಲಾಗುತ್ತಿದೆ. ಈ ಕ್ರಮದಿಂದ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಸಹ ಮಹತ್ವದ ಕೊಡುಗೆ ದೊರೆಯಲಿದೆ.
ಭಾರತದ ವಿಮಾನ ನಿಲ್ದಾಣಗಳಲ್ಲಿ ಹಸಿರು ಇಂಧನ ಬಳಕೆಗೆ ವೇಗ
ಕಳೆದ ಕೆಲವು ವರ್ಷಗಳಲ್ಲಿ ಭಾರತದ ವಿಮಾನ ನಿಲ್ದಾಣ ವಲಯವು ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 2022 ರ ಜೂನ್ ನಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸೌರಶಕ್ತಿ ಮತ್ತು ಜಲ ವಿದ್ಯುತ್ ಸಂಯೋಜನೆಯ ಮೂಲಕ ತನ್ನ ಸಂಪೂರ್ಣ ವಿದ್ಯುತ್ ಅಗತ್ಯವನ್ನು ಪೂರೈಸಲು ಆರಂಭಿಸಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (DIAL) ನೀಡಿರುವ ಮಾಹಿತಿಯ ಪ್ರಕಾರ, ವಿಮಾನ ನಿಲ್ದಾಣದ ಒಟ್ಟು ವಿದ್ಯುತ್ ಬಳಕೆಯ ಸುಮಾರು ಶೇ. 6 ರಷ್ಟು ಭಾಗವನ್ನು ಅಲ್ಲಿಯೇ ಸ್ಥಾಪಿಸುವ ಸೌರ ವಿದ್ಯುತ್ ಘಟಕಗಳಿಂದ ಪಡೆಯಲಾಗುತ್ತಿದೆ. ಉಳಿದ ಶೇ.94 ರಷ್ಟು ವಿದ್ಯುತ್ ಅನ್ನು ದೀರ್ಘಾವಧಿಯ ಜಲವಿದ್ಯುತ್ ಖರೀದಿ ಒಪ್ಪಂದಗಳ ಮೂಲಕ ಪಡೆಯಲಾಗುತ್ತಿದೆ.
ಈ ಕ್ರಮದಿಂದ ಪ್ರತಿವರ್ಷ ಸುಮಾರು 2 ಲಕ್ಷ ಟನ್ ಗಳಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಇದೇ ವೇಳೆ, ಕೇರಳದ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2015ರಲ್ಲಿ ಸಂಪೂರ್ಣವಾಗಿ ಸೌರಶಕ್ತಿಯಿಂದ ಕಾರ್ಯನಿರ್ವಹಿಸಿದ ವಿಶ್ವದ ಮೊದಲ ವಿಮಾನ ನಿಲ್ದಾಣ ಎಂಬ ದಾಖಲೆ ನಿರ್ಮಿಸಿತು. ಬಳಿಕ ವಿಮಾನ ನಿಲ್ದಾಣವು ತನ್ನ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ವಿತ್ತರಿಸಿಕೊಂಡಿದ್ದು, ಪರಿಸರ ಸಂರಕ್ಷಣೆಯ ಪ್ರಯತ್ನಗಳಿಗಾಗಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ.
ಇತ್ತೀಚಿನ ಬೆಳವಣಿಗೆ ಮುನ್ನ ನಾಗರಿಕ ವಿಮಾನಯಾನ ಸಚಿವಾಲಯವು ದೇಶದ 88ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳು ಈಗಾಗಲೇ ಶೇ. 100ರಷ್ಟು ಹಸಿರು ಇಂಧನ ಬಳಕೆಯತ್ತ ಸಾಗಿವೆ ಎಂದು ತಿಳಿಸಿತ್ತು. 2030ರ ವೇಳೆಗೆ ದೇಶದ ಎಲ್ಲಾ ವಿಮಾನ ನಿಲ್ದಾಣಗಳನ್ನು ನಿವ್ವಳ ಶೂನ್ಯ (Net Zero) ಹೊರಸೂಸುವಿಕೆ ಸೌಲಭ್ಯಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಕೇಂದ್ರ ಸರ್ಕಾರ ಬಂದಿದೆ.
ಈ ಯೋಜನೆಯ ಜಾರಿಯಾದರೆ, ಭಾರತದ ವಾಯುಯಾನ ಕೇತ್ರವು ಹೆಚ್ಚು ಪರಿಸರ ಸ್ನೇಹಿ ಮತ್ತು ಸುಸ್ಥಿರ ವ್ಯವಸ್ಥೆಯಾಗಿ ರೂಪುಗೊಳ್ಳಲಿದೆ.