belagavi news:
ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಬಿಇಡಿ ಪರೀಕ್ಷಾ ಅಕ್ರಮವನ್ನು ಬಯಲಿಗೆಳೆದ ಬಳಿಕ ಕುಲಪತಿ ಪ್ರೊ. ಶಶಿಕಾಂತ್ ಅವರಿಗೆ ಆ್ಯಸಿಡ್ ದಾಳಿಯ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಮರು ಮೌಲ್ಯಮಾಪನದಲ್ಲಿ ಅಂಕ ಕಡಿಮೆಯಾದರೆ ಆ್ಯಸಿಡ್ ದಾಳಿ ನಡೆಸುವುದಾಗಿ ಅನಾಮಧೇಯ ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ. ಪರೀಕ್ಷಾ ಅಕ್ರಮವನ್ನು ಬಯಲಿಗೆಳೆದಿದ್ದೆ ಇದೀಗ ಕುಲಪತಿಗೆ ಮುಳುವಾಯಿತೇ ಎಂಬ ಪ್ರಶ್ನೆ ಮೂಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೆದರಿಕೆ ಪತ್ರದ ಮೂಲ ಪತ್ತೆಯಾಗಿ ತನಿಖೆ ಮುಂದುವರಿಸಿದ್ದಾರೆ.
ಕಲಬುರಗಿ, ಮೇ 9: ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಆ್ಯಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಪತ್ರ ಬರೆದಿದ್ದಾನೆ.
2024ರಲ್ಲಿ ನಡೆದ ಬಿಇಡಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ನಡೆದಿದ್ದ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಕುಲಪತಿಗಳು ಪತ್ತೆಹಚ್ಚಿ ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಈ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಕುಲಪತಿಗಳ ವಿರುದ್ಧ ಈ ಮಟ್ಟದ ಬೆದರಿಕೆ ಬಂದಿರುವುದು ಇದೇ ಮೊದಲ ಬಾರಿಗೆ ಆಗಿದ್ದು ಈ ಘಟನೆಗೆ ಆತಂಕಕ್ಕೆ ಕಾರಣವಾಗಿದೆ.
ಮುಖ್ಯಾಂಶಗಳು:
• 2024ರ ಬಿಇಡಿ ಮೌಲ್ಯಮಾಪನ ಅಕ್ರಮ ಪತ್ತೆ ಹಚ್ಚಿದ ಕುಲಪತಿ ಪ್ರೊ. ಶಶಿಕಾಂತ್.
• ಅಂಕ ತಿದ್ದುಪಡಿ ಹಗರಣದ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ.
• ಮರು ಮೌಲ್ಯಮಾಪನದಲ್ಲಿ ಫೇಲ್ ಆದರೆ ಮುಖಕ್ಕೆ ಆ್ಯಸಿಡ್ ಹಾಕುವೂದಾಗಿ ಅನಾಮದೇಯ ಬೆದರಿಕೆ.
ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಬೀದಿ ಪರೀಕ್ಷಾ ಅಕ್ರಮಕ್ಕೆ ತಡೆಯೊಡ್ಡಿದ್ದೇ ಇದೀಗ ಕುಲಪತಿ ಪ್ರೊ. ಶಶಿಕಾಂತ್ ಅವರಿಗೆ ಮುಳುವಾಯಿತೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕಳೆದ ಬಿಇಡಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ದೊಡ್ಡಮಟ್ಟದ ಅಕ್ರಮ ನಡೆದಿರುವುದು ವಿವಿಯ ಆಂತರಿಕ ಸಮಿತಿಯ ವರದಿಯಿಂದ ದೃಢಪಟ್ಟಿತ್ತು. ಈ ವಿಷಯವನ್ನು ಕುಲಪತಿಗಳು ತಕ್ಷಣವೇ ಸರ್ಕಾರ ಹಾಗೂ ರಾಜ್ಯಪಾಲರ ಗಮನಕ್ಕೆ ತಂದಿದ್ದರು. ಬಳಿಕ ರಾಜ್ಯಪಾಲರ ಆದೇಶದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆಯಾಗಿದ್ದು, ಸಮಿತಿಯ ಸೂಚನೆಯ ಮೇರೆಗೆ ಸದ್ಯ ಮರುಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ.
ಈ ಮರು ಮೌಲ್ಯಮಾಪನದಿಂದ ಅಕ್ರಮವಾಗಿ ಅಂಕಪಡೆದವರಿಗೆ ಸಂಕಷ್ಟ ಎದುರಾಗಿರುವ ಹಿನ್ನೆಲೆ ಇದೇ ಕಾರಣಕ್ಕೆ ಕುಲಪತಿಗಳಿಗೆ ಬೆದರಿಕೆ ಬಂದಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.
ಬೆದರಿಕೆ ಪತ್ರದಲ್ಲೇನಿತ್ತು?
ಪತ್ರದಲ್ಲಿ '2 ಲಕ್ಷ ರೂಪಾಯಿ ನೀಡಿ ಬಿಇಡಿ ಪ್ರವೇಶ ಪಡೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ವಿವಿಯ ಸತ್ಯಶೋಧನಾ ಸಮಿತಿಯ ನಿರ್ಧಾರ ನಮಗೆ ಇಷ್ಟವಾಗಿಲ್ಲ ಒಂದು ವೇಳೆ ಮರುಮೌಲ್ಯಮಾಪನದಿಂದಾಗಿ ಅಂಕಗಳು ಕಡಿಮೆಯಾದರೆ ಅಥವಾ ನಾವು ಅನುತ್ತೀರ್ಣರಾದರೆ, ನಿಮ್ಮ ಮುಖಕ್ಕೆ ಆ್ಯಸಿಡ್ ಹಾಕಿ ನರಳಿ ಬದುಕುವಂತೆ ಮಾಡುತ್ತೇವೆ' ಎಂದು ಉಲ್ಲೇಖಿಸಲಾಗಿದೆ.
ಈ ಅನಾಮದೇಯ ಪತ್ರದಿಂದ ಆತಂಕಗೊಂಡ ಕುಲಪತಿಗಳು ನ್ಯಾಯಾಲಯದ ಮೊರೆ ಹೋಗಿದ್ದು ಈಗ ಕೋರ್ಟ್ ನಿರ್ದೇಶನದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Also Read:
Tamil Nadu politics: ವಿಜಯ್ ಮುಖ್ಯಮಂತ್ರಿ ಆಗ್ತಾರಾ? ಇಂದು ಪ್ರಮಾಣ ವಚನ ಸಾಧ್ಯತೆ