Belagavi news:
ಬೆಳಗಾವಿ: ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಬಡ್ಡಿದರದ ಆಮಿಷ ಒಡ್ಡಿ ಸಾವಿರಾರು ಜನರಿಂದ ಕೋಟ್ಯಾಂತರ ರೂಪಾಯಿ ಠೇವಣಿ ಸಂಗ್ರಹಿಸಿರುವ ಆರೋಪಕ್ಕೆ ಗುರಿಯಾದ ಶಿವಂ ಅಸೋಸಿಯೇಟ್ಸ್ ಪ್ರಕರಣಕ್ಕೆ ಇದೀಗ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಸಂಸ್ಥೆಯ ಪ್ರಮುಖ ವ್ಯಕ್ತಿಯಾಗಿರುವ ಶಿವಾನಂದ ನೀಲಣ್ಣವರ ವಿರುದ್ಧ ಕಾಗವಾಡ ಪೊಲೀಸ್ ಠಾಣೆನಲ್ಲಿ ಖಾಸಗಿ ದೂರು ದಾಖಲಾಗಿದೆ.
ಐನಾಪೂರ ಪಟ್ಟಣದ ನಿವಾಸಿ ಕೃಷ್ಣ ಅಪ್ಪಣ್ಣ ಅಪರಾಜ್ ಅವರು ನೀಡಿರುವ ದೂರಿನಲ್ಲಿ ಶಿವಂ ಅಸೋಸಿಯೇಟ್ಸ್ ಹೆಚ್ಚಿನ ಬಡ್ಡಿ ನೀಡುವುದಾಗಿ ಜಾಹೀರಾತು ನೀಡಿ ಜನರನ್ನು ಆಕರ್ಷಿಸಿತು ಎಂದು ಆರೋಪಿಸಲಾಗಿದೆ. ಜಾಹೀರಾತು ನಂಬಿ ತಾವು ಏಪ್ರಿಲ್ 4ರಿಂದ ಮೇ 8ರವರೆಗೆ ಹಂತ ಹಂತವಾಗಿ ಒಟ್ಟು 5 ಲಕ್ಷ ರೂಪಾಯಿ ಹಣವನ್ನು ಠೇವಣಿ ಇಟ್ಟಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೆ, ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿದಾಗ ತಿಳಿಸಿರುವ ಅವರು, ಹೆಚ್ಚಿನ ಲಾಭದ ಭರವಸೆ ನೀಡಿ ಸಂಸ್ಥೆ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಈಗ ಸಾವಿರಾರು ಠೇವಣಿದಾರರಲ್ಲಿ ಆತಂಕ ಹೆಚ್ಚಾಗಿದ್ದು, ತನಿಖೆ ಮತ್ತಷ್ಟು ತೀವ್ರಗೊಂಡಿದೆ.
ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣದಲ್ಲಿ ಈಗ ಬೆಳಗಾವಿ ಪೊಲೀಸರು ಹಾಗೂ ಜಿಲ್ಲಾಡಳಿತ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡಿದ್ದಾರೆ. ಸುಮಾರು ಮೂರು ದಿನಗಳ ಹಿಂದೆ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮೇಲೆ ದಾಳಿ ನಡೆಸಿ ಅಧಿಕಾರಿಗಳು ವಿಸ್ತೈತ ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯ ವರದಿ ಪ್ರಕಾರ, ಸಂಸ್ಥೆಯು ಕಾನೂನುಬಾಹಿರ ಹಣಕಾಸು ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಕಮಿಷನರ್ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ, ಸಂಸ್ಥೆಯ ವಿರುದ್ಧ ದೂರು ನೀಡಿದ ಕೃಷ್ಣ ಅಪ್ಪಣ್ಣ ಅಪರಾಜ್ ಅವರು, ಹೆಚ್ಚಿನ ಬಡ್ಡಿ ನೀಡುವ ಭರವಸೆ ನೀಡಿ ತಮ್ಮಿಂದ ಹಣ ಸಂಗ್ರಹಿಸಿ ವಂಚಿಸಲಾಗಿದೆ ಎಂದು ಆರೋಪಿಸಿ ಕಾಗವಾಡ ಪೊಲೀಸ್ ಸ್ಟೇಷನ್ ನಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದ ನಂತರ ಸಾವಿರಾರು ಠೇವಣಿದಾರರಲ್ಲಿ ಆತಂಕ ಹೆಚ್ಚಾಗಿದ್ದು, ಪೊಲೀಸರು ಹಣಕಾಸು ವ್ಯವಹಾರಗಳ ಮೂಲ ಹಾಗೂ ವಂಚನೆ ಜಾಲದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಈ ಮೂಲಕ ಶಿವಂ ಅಸೋಸಿಯೇಟ್ಸ್ ಪ್ರಕರಣದಲ್ಲಿ ಸುಮಾರು 35 ಸಾವಿರ ಠೇವಣಿದಾರರ ಪೈಕಿ ಮೊದಲ ಅಧಿಕೃತ ದೂರು ಶಿವಾನಂದ್ ನೀಲಣ್ಣವರ ವಿರುದ್ಧ ದಾಖಲಾಗಿದೆ. ಇದರ ಬೆನ್ನಲ್ಲೇ ಸೋಮವಾರ ನ್ಯಾಯಾಲಯ ನೀಡಿದ ಆದೇಶದಂತೆ, ಸಿಐಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಮಂಗಳವಾರ ಆರೋಪಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ.
Mala Maruti Police Station ನಿಂದ ಹೊರಟ ಸಿಐಡಿ ತಂಡ ಬಿಗಿ ಭದ್ರತೆಯ ನಡುವೆ ಆರೋಪಿಯನ್ನು ಬೆಂಗಳೂರಿನ ಸಿಐಡಿ ಮುಖ್ಯ ಕಚೇರಿಗೆ ಕರೆದುಕೊಂಡು ಹೋಗಿದೆ. ಒಂದು ವಾಹನದಲ್ಲಿ ಆರೋಪಿಯನ್ನು ಕರೆದೊಯ್ಯಲಾಗಿದ್ದರೆ, ಮತ್ತೊಂದು ವಾಹನದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು, ಕಂಪ್ಯೂಟರ್, ಲ್ಯಾಪ್ ಟಾಪ್, ಪೆನ್ ಡ್ರೈವ್ ಹಾಗೂ ಮೊಬೈಲ್ ಫೋನ್ ಸೇರಿದಂತೆ ಹಲವು ವಸ್ತುಗಳನ್ನು ಸಾಗಿಸಲಾಗಿದೆ.
ತನಿಖೆಯ ಭಾಗವಾಗಿ ಈ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುವ ಮೂಲಕ ಹಣಕಾಸು ವ್ಯವಹಾರಗಳ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Also Read:
ನಾರ್ವೆಯ ಇಂಡೋ- ಪೆಸಿಫಿಕ್ ಸ್ಟ್ರಾಟಜಿ: ಜಾಗತಿಕ ಸಮುದ್ರ ರಾಜಕೀಯಕ್ಕೆ ಹೊಸ ತಿರುವು