Belagavi News:
ಹಾವೇರಿ ಜಿಲ್ಲೆಯಲ್ಲಿ ಮುಂದುವರಿದಿರುವ ಮಳೆ ಕೊರತೆ ಮತ್ತು ಬರದ ಆತಂಕದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಆರು ಶಾಸಕರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಜುಲೈ 7ರಿಂದ ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಮೋಡ ಬಿತ್ತನೆ (ಕ್ಲೌಡ್ ಸೀಡಿಂಗ್) ನಡೆಸಲು ತೀರ್ಮಾನಿಸಲಾಗಿದೆ.
ಹಾವೇರಿ ಜಿಲ್ಲಾ ಪಂಚಾಯತ್ ನಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಸುಧೀರ್ಘ ಚರ್ಚೆ ನಡೆದಿದ್ದು, ಮಳೆಯ ಸಾಧ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲು ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.
ವಿಶೇಷವೆಂದರೆ, ಈ ಮೋಡ ಬಿತ್ತನೆ ಕಾರ್ಯಕ್ರಮ ಶಾಸಕರು ತಮ್ಮ ಸ್ವಂತ ವೆಚ್ಚದಲ್ಲೇ ಕೈಗೊಳ್ಳಲು ಮುಂದಾಗಿದ್ದಾರೆ. ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರ ಮಾಲೀಕತ್ವದ ವಿಶೇಷ ವಿಮಾನದ ಮೂಲಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೂರು ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತದೆ.
ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿಸಲು ಈ ಪ್ರಯತ್ನ ಕೈಗೊಳ್ಳಲಾಗುತ್ತಿದ್ದು, ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ತಜ್ಞರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಲಿದೆ. ಈ ಕ್ರಮದಿಂದ ಜಿಲ್ಲೆಯ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ನೀರಿಕ್ಷೆ ವ್ಯಕ್ತವಾಗಿದೆ.
ಮಳೆ ಕೊರತೆಯಿಂದ ಜಿಲ್ಲೆಯ ರೈತರು ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆ (ಕ್ಲೌಡ್ ಸೀಡಿಂಗ್) ನಡೆಸಲು ನಿರ್ಧರಿಸಲಾಗಿದೆ ಎಂದು ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ತಿಳಿಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಅವರು, " ಮಳೆ ಕೊರತೆಯಿಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಈ ಕಾರಣದಿಂದ ಜುಲೈ 7ರಿಂದ ಮೂರು ದಿನಗಳ ಕಾಳ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೋಡ ಬಿತ್ತನೆ ನಡೆಸಲು ತೀರ್ಮಾನಿಸಿದ್ದೇವೆ. ಈ ಪ್ರಯತ್ನದಿಂದ ರೈತರಿಗೆ ಅನುಕೂಲವಾಗಲಿದೆ ಎಂದು ವಿಶ್ವಾಸವಿದೆ" ಎಂದು ಹೇಳಿದರು.
ಮೋಡ ಬಿತ್ತನೆಗೆ ಕೇಂದ್ರದ ವಿಜ್ಞಾನಿಗಳಿಂದ ಅನುಮೋದನೆ ದೊರೆತಿದ್ದು, ಕಾರ್ಯಾಚರಣೆಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿಲಾಗಿದೆ. ವಿಶೇಷ ವಿಮಾನದ ಮೂಲಕ ಮೋಡ ಬಿತ್ತನೆ ನಡೆಸಲಾಗುತ್ತಿದ್ದು, ಪ್ರತಿ ಗಂಟೆಗೆ ಸುಮಾರು 15 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಹಾವೇರಿ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್ , ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ, ಸವಣೂರು- ಶಿಗ್ಗಾಂವಿ ಶಾಸಕ ಯಾಸಿರ್ ಖಾನ್ ಪಠಾಣ್, ಹಿರೇಕೆರೂರು ಶಾಸಕ ಯು.ಬಿ. ಬಣಕಾರ್ ಹಾಗೂ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಸೇರಿದಂತೆ ಜಿಲ್ಲೆಯ ಆರು ಶಾಸಕರು ಉಪಸ್ಥಿತರಿದ್ದರು.
ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಈ ವಿಶೇಷ ಮೋಡ ಬಿತ್ತನೆ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಸಿದ್ಧತೆಗಳು ನಡೆಯುತ್ತಿವೆ.