belagavi news :
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ನಡೆದ ಅಡ್ಡ ಮತದಾನ ಪ್ರಕರಣ ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಘಟನೆಗೆ ಪಕ್ಷದ ಆಂತರಿಕ ಕಲಹವೇ ಪ್ರಮುಖ ಕಾರಣ ಎಂದು ಉಚ್ಛಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ವಿಷಯವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು,ಪಕ್ಷಕ್ಕೆ ದ್ರೋಹ ಬಗೆದವರನ್ನು ಪತ್ತೆಹಚ್ಚಲು ರಾಜ್ಯ ಬಿಜೆಪಿ ಅಧ್ಯಕ್ಷರ ಆದೇಶದ ಮೇರೆಗೆ ಸಿಟಿ ರವಿ ನೇತೃತ್ವದ ಸಮಿತಿ ಮಾಹಿತಿ ಸಂಗ್ರಹ ಆರಂಭಿಸಿದೆ.
ಈ ನಡುವೆ ಎಸ್.ಟಿ.ಸೋಮಶೇಖರ್ ಬಿಜೆಪಿ ನಾಯಕರಾದ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಹೊಸ ಆರೋಪಗಳನ್ನು ಮಾಡಿದ್ದಾರೆ. "ವಿಜಯೇಂದ್ರ ಕಡೆಯ ಅಭ್ಯರ್ಥಿಯನ್ನು ಸೋಲಿಸಲು ಆರ್.ಅಶೋಕ್ ಪ್ರಯತ್ನಿಸಿದ್ದಾರೆ. ಅದೇ ರೀತಿ ಅಶೋಕ್ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಲು ಬಿ.ವೈ.ವಿಜಯೇಂದ್ರ ಬಣದವರು ಅಡ್ಡ ಮತದಾನ ಮಾಡಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.
ಇನ್ನು ಮುಂದುವರೆದು, ಈ ಇಬ್ಬರು ನಾಯಕರು ಧರ್ಮಸ್ಥಳಕ್ಕೆ ತೆರಳಿ ಪ್ರಮಾಣ ಮಾಡಿದರೆ ಸತ್ಯ ಬಹಿರಂಗವಾಗುತ್ತದೆ ಎಂದು ಎಸ್.ಟಿ.ಸೋಮಶೇಖರ್ ಸವಾಲು ಹಾಕಿದ್ದಾರೆ.
ಅದೇ ವೇಳೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೂ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಒಳಗಿನ ಬಣ ರಾಜಕೀಯ ಮತ್ತು ಪರಸ್ಪರ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ತೀವ್ರಗೊಂಡಿವೆ. ವಿಧಾನಪರಿಷ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ತಿರುಗು ಕಂಡಿದ್ದು, ಬಿಜೆಪಿ ಒಳಗಿನ ಸಂಘರ್ಷ ಮತ್ತಷ್ಟು ಬಹಿರಂಗವಾಗಿದೆ.
ನಮ್ಮನ್ನು ಉಚ್ಚಾಟನೆ ಮಾಡಿ ಗೂಬೆಕೂರಿಸಲು ಹೊರಟಿದ್ದಾರೆ ಎಂದು ಉಚ್ಚಾಟಿದ ಶಾಸಕ ಎಸ್.ಟಿ.ಸೋಮಶೇಖರ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನಕ್ಕೆ ಪಕ್ಷದ ಆಂತರಿಕ ಕಲಹವೇ ಕಾರಣ ಎಂದು ಅವರು ಮತ್ತೊಮ್ಮೆ ಆರೋಪಿಸಿದ್ದಾರೆ.
"ಶಾಸಕರನ್ನು ಕರೆದು ಸರಿಯಾಗಿ ಮಾರ್ಗದರ್ಶನ ಮಾಡಬೇಕಿತ್ತು. ಆದರೆ ಬಿಜೆಪಿ ನಾಯಕರು ಅದನ್ನು ಮಾಡಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಶಾಸಕರಿಗೂ ಮುಂಚಿತವಾಗಿ ತರಬೇತಿ ನೀಡಲಾಗುತ್ತದೆ. ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ," ಎಂದು ಸೋಮಶೇಖರ್ ಹೇಳಿದ್ದಾರೆ.
ಅವರು ಮುಂದುವರೆದು, "ಬಿಜೆಪಿಯಲ್ಲಿ ಶಾಸಕರಿಗೆ ಸರಿಯಾದ ವಿಪ್ ಕೂಡ ಜಾರಿ ಮಾಡಲಿಲ್ಲ. ಬೆಳಗ್ಗೆ 9 ಗಂಟೆಗೆ ಚುನಾವಣೆ ಇದ್ದರೆ ಎಂಟು ಗಂಟೆಗೆ ಮಾತ್ರ ಮಾಹಿತಿ ನೀಡಲಾಯಿತು.ಹೀಗಾಗಿ ಸಂಘಟನಾ ಕೊರತೆ ಅಡ್ಡ ಮತದಾನಕ್ಕೆ ಕಾರಣ"ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಆಂತರಿಕ ನಿರ್ವಹಣೆ ಮತ್ತು ಶಾಸಕರ ಮೇಲಿನ ನಿಯಂತ್ರಣ ಕುರಿತು ಹೊಸ ಚರ್ಚೆ ಆರಂಭವಾಗಿದ್ದು, ರಾಜ್ಯ ರಾಜಕೀಯದಲ್ಲಿ ಈ ವಿಚಾರ ಮತ್ತಷ್ಟು ಕಾವು ಪಡೆದುಕೊಂಡಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ರಾಜೀನಾಮೆ ಸಂಬಂಧಿಸಿದ ಹೇಳಿಕೆಗೆ ಉಚ್ಛಾಟಿತ ಶಾಸಕ ಎಸ್.ಟಿ. ಸೋಮಶೇಖರ್ ತೀವ್ರ ತಿರುಗೇಟು ನೀಡಿದ್ದಾರೆ. ಬಿಜೆಪಿಯ ಒಳಗಿನ ಅಸಮಾಧಾನ ಮತ್ತು ಅಡ್ಡ ಮತದಾನ ವಿವಾದದ ನಡುವೆ ಈ ಮಾತಿನ ಸಮರ ಮತ್ತಷ್ಟು ತೀವ್ರಗೊಂಡಿದೆ.
"ಶೋಭಾ ಕರಂದ್ಲಾಜೆ ಅವರಿಗೆ ಆರ್.ಅಶೋಕ್ ಮತ್ತು ವಿಜಯೇಂದ್ರ ಇಬ್ಬರನ್ನು ಇಷ್ಟವಿಲ್ಲ. ಬಿಜೆಪಿಯಲ್ಲಿನ ಇಷ್ಟೆಲ್ಲ ಅಸ್ಥಿರತೆಗೆ ಅವರದ್ದೇ ಕಾರಣ. ಮೊದಲು ಅವರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿ," ಎಂದು ಸೋಮಶೇಖರ್ ಆರೋಪಿಸಿದ್ದಾರೆ.
ಅವರು ಮುಂದುವರೆದು, "ಕ್ಷೇತ್ರಕ್ಕೆ ಅವರು ಅನುದಾನ ನೀಡಿದ್ದಾರೆ, ನಾವು ಅವರಿಗೆ ಮತ ಹಾಕಿದ್ದೇವೆ ಎಂಬುದನ್ನು ನಾವು ಓಪನ್ ಆಗಿ ಹೇಳಿದ್ದೇವೆ. ಆದರೆ ಬಿಜೆಪಿಯಲ್ಲಿ ಅಡ್ಡ ಮತದಾನ ಮಾಡಿದವರು ಯಾರು ಎಂಬುದನ್ನು ಮೊದಲು ಪತ್ತೆ ಹಚ್ಚಲಿ. ಅದನ್ನು ಬಿಟ್ಟು ನನ್ನನ್ನು ಕೆಣಕಬೇಡಿ. ಕೆಣಕಿದರೆ ನಾವು ಕೂಡ ತಕ್ಕ ಉತ್ತರ ಕೊಡುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹೇಳಿಕೆಗಳ ಬಳಿಕ ಬಿಜೆಪಿ ಒಳಗಿನ ಬಣ ರಾಜಕೀಯ ಮತ್ತು ಪರಸ್ಪರ ಆರೋಪ -ಪ್ರತ್ಯಾರೋಪಗಳು ಮತ್ತಷ್ಟು ತೀವ್ರಗೊಂಡಿದ್ದು,ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
Also Read:
NCERT ಪಠ್ಯ ಕ್ರಮ ವಿವಾದ ತೀವ್ರ : ಮಧು ಬಂಗಾರಪ್ಪರಿಂದ ಬಿಜೆಪಿ ವಿರುದ್ಧ ವಾಗ್ದಾಳಿ