Belagavi News :
ನವದೆಹಲಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ದಾಳಿ ಅಫ್ಘಾನಿಸ್ತಾನದ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆ ಮಾತ್ರವಲ್ಲದೇ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಗಂಭೀರ ಬೆದರಿಕೆ ಎಂದು ಭಾರತ ಸ್ಪಷ್ಟಪಡಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನದ ಈ ಕ್ರಮವೂ ಅದರ ನಿರಂತರ ಅಜಾಗರೂಕ ವರ್ತನೆ ಮಾದರಿಯನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದೆ. ಇಸ್ಲಾಮಾಬಾದ್ ತನ್ನ ಆಂತರಿಕ ಸವಾಲುಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂಬುದಾಗಿ ಭಾರತ ಹೇಳಿದೆ.
ಪಾಕಿಸ್ತಾನವು ಅಫ್ಘಾನಿಸ್ತಾನದ ಭೂಪ್ರದೇಶದ ಮೇಲೆ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಲಭ್ಯವಾಗಿವೆ. ಈ ಘಟನೆ ಅತ್ಯಂತ ದುಃಖಕರವಾಗಿದ್ದು, ಇದು ಅಫ್ಘಾನಿಸ್ತಾನದ ಸಾರ್ವಭೌಮತ್ವದ ಮೇಲಿನ ನೇರ ದಾಳಿ ಮತ್ತು ಪ್ರಾದೇಶಿಕ ಶಾಂತಿಗೆ ಗಂಭೀರ ಬೆದರಿಕೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತರ್ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಭಾರತ ಸಂತಾಪ ಸೂಚಿಸಿದ್ದು, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ. ಜೊತೆಗೆ ಅಫ್ಘಾನಿಸ್ತಾನದ ಸಾರ್ವಭೌಮತ್ವದ ಮತ್ತು ಪ್ರಾದೇಶಿಕ ಸಮಗ್ರತೆಗೆ ಭಾರತದ ಅಚಲ ಬೆಂಬಲವನ್ನು ಪುನರುಚ್ಚರಿಸಿದೆ.
ಕಾಬೂಲ್/ ಅಫ್ಘಾನಿಸ್ತಾನದ ಪಕ್ತಿಯಾ, ಪಕ್ತಿಕಾ ಮತ್ತು ಕುನಾರ್ ಪ್ರಾಂತ್ಯಗಳಲ್ಲಿ ಪಾಕಿಸ್ತಾನಿ ಮಿಲಿಟರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಟ 36 ನಾಗರಿಕರು ಸಾವನ್ನಪ್ಪಿದ್ದು, 163 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಉಪ ವಕ್ತಾರ ಹಮ್ದುಲ್ಲಾ ಫಿತ್ರಾತ್ ತಿಳಿಸಿದ್ದಾರೆ.
ತ್ಸಾಮ್ಕಾನಿ ಜಿಲ್ಲೆಯ ಮಂಡೋಖೈಲ್ ಗ್ರಾಮದಲ್ಲಿ ಪಾಕಿಸ್ತಾನಿ ಯುದ್ಧವಿಮಾನಗಳು ನಾಗರಿಕ ವಸತಿ ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸಿದ ಪರಿಣಾಮ ಒಬ್ಬ ಹಾಗೂ ಒಂದು ಮಗು ಸಾವನ್ನಪ್ಪಿದ್ದು, ಹಲವು ಕುಟುಂಬ ಸದಸ್ಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದೇ ಪ್ರದೇಶದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಹೆಚ್ಚುವರಿಯಾಗಿ 28 ಜನರು ಸಾವನ್ನಪ್ಪಿದ್ದು, 158 ಜನರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದಕ್ಕೂ ಮುನ್ನ ತಾಲಿಬಾನ್ ವಕ್ತಾರ್ ಜಬಿವುಲ್ಲಾ ಮುಜಾಹಿದ್ ಈ ದಾಳಿಗಳನ್ನು ತೀವ್ರವಾಗಿ ಖಂಡಿಸಿ,ಅವುಗಳನ್ನು " ಹೇಡಿತನದ ಆಕ್ರಮಣಕಾರಿ ಕೃತ್ಯ "ಎಂದು ಹೇಳಿದ್ದಾರೆ.
ಈ ನಡುವೆ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ವಿದೇಶಾಂಗ ಸಚಿವಾಲಯವು ಕಾಬೂಲ್ ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಚಾರ್ಜ್ ಡಿ' ಅಫೇರ್ಸ್ ಅವರನ್ನು ಕರೆಸಿ, ಕುನಾರ್, ಪಕ್ತಿಯಾ ಮತ್ತು ಪತ್ರಿಕಾ ಪ್ರಾಂತ್ಯಗಳಲ್ಲಿ ನಡೆದ ವಾಯುಪ್ರದೇಶ ಉಲ್ಲಂಘನೆ ಹಾಗೂ ನಾಗರಿಕ ಮನೆಗಳ ಮೇಲೆ ನಡೆದ ಬಾಂಬ್ ದಾಳಿಗೆ ಅಧಿಕೃತವಾಗಿ ತೀವ್ರ ಪ್ರತಿಭಟನೆ ದಾಖಲಿಸಿದೆ.