ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್ ವಿವಾದ: ಮೌನ ಮುರಿದ ಕ್ಯುರೇಟರ್
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡ ಬೆನ್ನಲ್ಲೇ ಈಡನ್ ಗಾರ್ಡನ್ಸ್ ಪಿಚ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿದ್ದವು. ಇದೀಗ ಕ್ಯುರೇಟರ್ ಮಾತನಾಡಿದ್ದಾರೆ.
ಎರಡೂ ತಂಡಗಳ ಸ್ಕೋರ್ ಕನಿಷ್ಠ 200 ರನ್ಗಳನ್ನೂ ದಾಟಲಿಲ್ಲ. ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ (55*) ಮಾತ್ರ ಈ ಪಿಚ್ನಲ್ಲಿ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಈಡನ್ ಗಾರ್ಡನ್ಸ್ ಪಿಚ್ ವಿರುದ್ಧ ಗಂಭೀರ ಟೀಕೆಗಳು ಕೇಳಿ ಬರಲಾರಂಭಿಸಿವೆ.
ಇವುಗಳಿಗೆ ಇದೀಗ ಕ್ಯುರೇಟರ್ ಸುಜನ್ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ. ತಾವು ಸೂಚಿಸಿದಂತೆ ಪಿಚ್ ಸಿದ್ಧಪಡಿಸಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ. ಇದಕ್ಕಾಗಿ ಸಂಪೂರ್ಣ ಸಮರ್ಪಣಾಭಾವದಿಂದ ಕೆಲಸ ಮಾಡಿದ್ದಾಗಿಯೂ ಹೇಳಿದ್ದಾರೆ. ಅಲ್ಲದೆ ಎಲ್ಲರಿಗೂ ಎಲ್ಲ ವಿಷಯ ತಿಳಿದಿಲ್ಲ ಎಂದಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ಕೇವಲ ಮೂರೇ ದಿನಗಳಲ್ಲಿ ಕೊನೆಗೊಂಡಿತ್ತು. ಭಾರೀ ನಿರೀಕ್ಷೆ ಹೊಂದಿದ್ದ ಈ ಪಂದ್ಯದಲ್ಲಿ ಬ್ಯಾಟರ್ಗಳು ರನ್ ಗಳಿಸಲು ಸಂಪೂರ್ಣ ವಿಫಲರಾಗಿದ್ದರು.
ಇದಕ್ಕೂ ಮೊದಲು, ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಅವರು ಕ್ಯುರೇಟರ್ ಮುಖರ್ಜಿ ಅವರನ್ನು ಬೆಂಬಲಿಸಿ ಮಾತನಾಡಿದ್ದರು.
"ಭಾರತೀಯ ಶಿಬಿರದ ಕೋರಿಕೆಯ ಮೇರೆಗೆ ನಾವು ಪಿಚ್ ಸಿದ್ಧಪಡಿಸಿದ್ದೇವೆ. ಪಂದ್ಯಕ್ಕೂ
ನಾಲ್ಕು ದಿನಗಳ ಮೊದಲು ಪಿಚ್ಗೆ ನೀರು ಹಾಕಲಾಗಿಲ್ಲ. ಅದಕ್ಕಾಗಿಯೇ ಅದು ಈ ರೀತಿ ಪ್ರತಿಕ್ರಿಯಿಸಿತು. ಈ ವಿಷಯದಲ್ಲಿ ಕ್ಯುರೇಟರ್ ಮುಖರ್ಜಿಯನ್ನು ದೂಷಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದರು.
"ಈಡನ್ ಗಾರ್ಡನ್ಸ್ ಪಿಚ್ ತುಂಬಾ ಕಳಪೆಯಾಗಿಲ್ಲ. ಎಲ್ಲರೂ ಪಿಚ್ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ನಿಜ ಹೇಳಬೇಕೆಂದರೆ, ಟೆಸ್ಟ್ ಪಂದ್ಯಕ್ಕೆ ಯಾವ ರೀತಿಯ ಪಿಚ್ ಸಿದ್ಧಪಡಿಸಬೇಕೆಂದು ನನಗೆ ಗೊತ್ತಿದೆ. ಟೀಮ್ ಇಂಡಿಯಾ ಶಿಬಿರದಲ್ಲಿ ಹೇಳಿದಂತೆ ಪಿಚ್ ತಯಾರಿಸಲಾಗಿದೆ. ಇತರರ ಕಾಮೆಂಟ್ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ನನ್ನ ಕೆಲಸವನ್ನು ಶ್ರದ್ಧಾಭಾವದಿಂದ ಮಾಡಿದ್ದೇನೆ. ಭವಿಷ್ಯದಲ್ಲೂ ಇದನ್ನೇ ಮುಂದುವರಿಸುತ್ತೇನೆ" ಎಂದು ಮುಖರ್ಜಿ ಸಂದರ್ಶನವೊಂದರಲ್ಲಿ ಹೇಳಿದರು.
ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಕೂಡ ಪಂದ್ಯದ ಬಳಿಕ ಪಿಚ್ ಬಗ್ಗೆ ಮಾತನಾಡಿದ್ದರು. "ಈಡನ್ ಗಾರ್ಡನ್ಸ್ ಪಿಚ್ ಅನ್ನು ನಮ್ಮ ಸೂಚನೆಗಳ ಪ್ರಕಾರ ರೆಡಿ ಮಾಡಲಾಗಿದೆ. ಇದು ಬ್ಯಾಟರ್ಗಳಿಗೆ ತುಂಬಾ ಕಠಿಣವಾದ ಪಿಚ್ ಅಲ್ಲ. ಇಂತಹ ಪಿಚ್ಗಳಲ್ಲಿ ರಕ್ಷಣಾತ್ಮಕವಾಗಿ ಆಡಬೇಕು. ನೀವು ತಾಳ್ಮೆಯಿಂದ ಆಡಿದರೆ ರನ್ಗಳು ಸಿಗುತ್ತವೆ" ಎಂದು ತಿಳಿಸಿದ್ದರು.
ಮೊದಲ ಟೆಸ್ಟ್ ಪಂದ್ಯ:
ದ.ಆಪ್ರಿಕಾ ನೀಡಿದ 124 ರನ್ಗಳ ಸಾಮಾನ್ಯ ಗುರಿ ಬೆನ್ನಟ್ಟಿದ ಭಾರತ ಕೇವಲ 93 ರನ್ಗಳಿಗೆ ತನ್ನ ಆಟ ಮುಗಿಸಿತ್ತು.
ಎರಡನೇ ಟೆಸ್ಟ್ ಪಂದ್ಯ ಶನಿವಾರ (ನವೆಂಬರ್ 22) ಗುವಾಹಟಿಯಲ್ಲಿ ಆರಂಭವಾಗಲಿದೆ. ಸರಣಿ ಸಮಬಲಗೊಳಿಸಲು ಟೀಮ್ ಇಂಡಿಯಾಗೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಇನ್ನಷ್ಟು ಓದಿರಿ :
ಅಭ್ಯಾಸಕ್ಕೆ ಬಾರದ ಶುಭ್ಮನ್ ಗಿಲ್; ಎರಡನೇ ಪಂದ್ಯದಿಂದ ಔಟ್?