Belagavi News:
ಸಿನಿಮಾ ಹಾಗೂ ರಾಜಕೀಯ ಎರಡು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ' ಕೌರವ' ಖ್ಯಾತಿಯ ಮಾಜಿ ಸಚಿವ ಬಿ.ಸಿ. ಪಾಟೀಲ್ ಇದೀಗ ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಜನಪ್ರಿಯ ಭಕ್ತಿ ಪ್ರಧಾನ ಧಾರಾವಾಹಿ ' ಶ್ರೀ ರಾಘವೇಂದ್ರ ಮಹಾತ್ಮೆ' ಮೂಲಕ ಅವರು ಮೊದಲ ಬಾರಿಗೆ ಕಿರುತೆರೆ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಧಾರಾವಾಹಿಯಲ್ಲಿ ಬಿ.ಸಿ. ಪಾಟೀಲ್ ಅವರು 'ದೇಸಾಯಿ' ಎಂಬ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಅವರ ಪಾತ್ರದ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಅವರು ಧಾರಾವಾಹಿಯಲ್ಲಿ ನಟಿಸುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ಧಾರಾವಾಹಿಯಲ್ಲಿ ಬಿ.ಸಿ. ಪಾಟೀಲ್ ಅವರ ಪತ್ನಿಯ ಪಾತ್ರದಲ್ಲಿ ಹಿರಿಯ ನಟಿ ಅರುಣಾ ಬಾಲರಾಜ್ ಅಭಿನಯಿಸಿದ್ದು, ಈ ಜೋಡಿ ಕಥೆಗೆ ಮತ್ತಷ್ಟು ಮೆರಗು ನೀಡಲಿದೆ ಎಂಬ ನಿರೀಕ್ಷೆ ಮೂಡಿದೆ.
ರಾಯರ ಪಾತ್ರದಲ್ಲಿ ಪರೀಕ್ಷಿತ್ ಅವರ ಅಮೋಘ ಅಭಿನಯ:
ಕಳೆದ ವಾರ ಪ್ರಸಾರವಾದ ಸಂಚಿಕೆಯಲ್ಲಿ ಪೂರ್ವಾಶ್ರಮದ ಸರಸ್ವತಿಗೆ ಸದ್ಗತಿ ದೊರಕಿದ ಭಾವನಾತ್ಮಕ ಕಥಾಹಂದರ ಪ್ರೇಕ್ಷಕರ ಮನಸ್ಸನ್ನು ಆಳವಾಗಿ ಸ್ಪರ್ಶಿಸಿತು. ಆರಂಭದಿಂದ ಅಂತ್ಯದವರೆಗೆ ಕಥೆಯ ನಿರೂಪಣೆ ಪ್ರೇಕ್ಷಕರನ್ನು ಪರದೆಯ ಮುಂದೆ ಹಿಡಿದಿಟ್ಟಿತ್ತು. ಈ ಸಂಚಿಕೆಯಲ್ಲಿ ರಾಯರ ಪಾತ್ರದಲ್ಲಿ ಪರೀಕ್ಷಿತ್ ಅವರ ಅಭಿನಯ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಅವರ ಭಾವಾಭಿನಯ, ಗಂಭೀರತೆ ಮತ್ತು ಪಾತ್ರದೊಳಗೆ ಸಂಪೂರ್ಣವಾಗಿ ಲೀನವಾಗಿರುವ ಶೈಲಿ ಅನೇಕ ಪ್ರೇಕ್ಷಕರಿಗೆ " ರಾಯರನ್ನೇ ಕಣ್ತುಂಬಿಕೊಂಡ ಅನುಭವವಾಯಿತು" ಎಂಬ ಅಭಿಪ್ರಾಯ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ಅಭಿನಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಈ ಪಾತ್ರಕ್ಕೆ ಪರೀಕ್ಷಿತ್ ಅವರು ಸಂಪೂರ್ಣ ನ್ಯಾಯ ಒದಗಿಸಿದ್ದಾರೆ ಎಂದು ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮನೆಯ ಪೂಜೆಗೆ ರಾಯರನ್ನು ಆಹ್ವಾನಿಸುವ ಕರಟಗಿರಿಯ ದೇಸಾಯಿ:
ಮೂಲರಾಮನ ದಿವ್ಯಾಜ್ಞೆಯಂತೆ ದೀಕ್ಷೆ ಪಡೆದ ಬಳಿಕ ರಾಯರು ಲೋಕಕಲ್ಯಾಣಕ್ಕಾಗಿ ದಿವ್ಯ ಸಂಚಾರವನ್ನು ಆರಂಭಿಸುತ್ತಾರೆ. ಈ ಪವಿತ್ರ ಯಾತ್ರೆಯಲ್ಲಿ ಭುವನಗಿರಿಯಲ್ಲಿ ಪಾದಪೂಜೆ ಸ್ವೀಕರಿಸಿ ಮುಂದುವರಿದ ರಾಯರು, ಕರಟಗಿರಿಯ ಸಮೀಪ ವನಭೋಜನಕ್ಕೆ ವಿರಮಿಸುತ್ತಾರೆ. ಆ ಸಮಯದಲ್ಲಿ ಕರಟಗಿರಿಯ ದೇಸಾಯಿ ಅವರು ಅಲ್ಲಿಗೆ ಆಗಮಿಸಿ, ತಮ್ಮ ಮನೆಯಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಭಕ್ತಿಪೂರ್ವಕವಾಗಿ ರಾಯರನ್ನು ಆಹ್ವಾನಿಸುತ್ತಾರೆ. ದೇಸಾಯಿಯವರ ವಿನಯ, ಭಕ್ತಿ ಮತ್ತು ನಿರಂತರ ಒತ್ತಾಯವನ್ನು ಮನಗಂಡ ರಾಯರು ಅವರ ಆಹ್ವಾನವನ್ನು ಸ್ವೀಕರಿಸಿ, ಅವರ ಮನೆಗೆ ತೆರಲಿ ಭಕ್ತರಿಗೆ ತಮ್ಮ ದಿವ್ಯ ಅನುಗ್ರಹವನ್ನು ಕರುಣಿಸುತ್ತಾರೆ.
ಸತ್ತ ಮಗುವಿಗೆ ಜೀವದಾನ ನೀಡಿದ ರಾಯರು!
ರಾಯರ ಆಗಮನವನ್ನು ಅದ್ದೂರಿಯಾಗಿ ಆಚರಿಸಲು ಕರಟಗಿರಿಯ ದೇಸಾಯಿ ಅವರು ಮನೆಯಲ್ಲಿ ವಿಶೇಷ ಪೂಜೆಯೊಂದಿಗೆ ಭಕ್ಷ್ಯ ಭೋಜನಗಳ ಸಿದ್ಧತೆಗೆ ಆದೇಶಿಸುತ್ತಾರೆ. ಅದರಂತೆ ಅಡುಗೆ ಮನೆಯಲ್ಲಿ ವೈವಿಧ್ಯಮಯ ತಿನಿಸುಗಳ ತಯಾರಿ ನಡೆಯುತ್ತದೆ. ಇದೇ ವೇಳೆ ಮಾವಿನಕಾಯಿ ಸೀಕರಣೆಯ ರುಚಿ ನೋಡಲು ಹೋದ ದೇಸಾಯಿ ಅವರ ಪುಟ್ಟ ಮಗ ಆ ಪಾತ್ರಯೋಳಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾನೆ. ಈ ದುರ್ಘಟನೆ ಮನೆಯವರನ್ನು ಶೋಕ ಸಾಗರದಲ್ಲಿ ಮುಳುಗಿಸುತ್ತದೆ.
ಆದರೆ ಪೂಜೆಯಲ್ಲಿ ನಿರಂತರಾಗಿದ್ದ ಶ್ರೀ ರಾಘವೇಂದ್ರ ತೀರ್ಥರಿಗೆ ಈ ಘಟನೆ ದಿವ್ಯದೃಷ್ಟಿಯಿಂದ ಅರಿವಾಗುತ್ತದೆ. ಕೂಡಲೇ ಮಗುವನ್ನು ಪೂಜಾ ಸ್ಥಳಕ್ಕೆ ತರಿಸುವಂತೆ ಸೂಚಿಸಿದ ರಾಯರು, ತಮ್ಮ ಪವಿತ್ರ ಮಂತ್ರ ಪ್ರೋಕ್ಷಣೆಯಿಂದ ಮಗುವಿಗೆ ಪುನಃ ಜೀವ ತುಂಬುತ್ತಾರೆ. ಈ ಅದ್ಭುತ ಪವಾಡವನ್ನು ಕಣ್ತುಂಬಿಕೊಂಡ ಭಕ್ತರು ರಾಯರ ಮಹಿಮೆಗೆ ಭಕ್ತಿಭಾವದಿಂದ ನಮನ ಸಲ್ಲಿಸುತ್ತಾರೆ. ಈ ಮನಮುಟ್ಟುವ ಪ್ರಸಂಗ ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿದ್ದು, ಪ್ರೇಕ್ಷಕರಲ್ಲಿ ಅಪಾರ ಭಾವೋದ್ವೇಗ ಮೂಡಿಸಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ' ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಗೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶ್ರೀ ರಾಘವೇಂದ್ರ ತೀರ್ಥರ ಜೀವನದ ಪವಿತ್ರ ಪಯಣ, ಅವರ ದಿವ್ಯ ಮಹಿಮೆ ಹಾಗೂ ಭಕ್ತರ ಮೇಲಿನ ಕರುಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ತೆರೆ ಮೇಲೆ ಮೂಡಿಸುತ್ತಿರುವ ಈ ಧಾರಾವಾಹಿಗೆ ಕರುನಾಡಿನ ಮನೆಮನೆಗಳಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಕ್ತಿ, ನಂಬಿಕೆ ಮತ್ತು ಪವಾಡಗಳ ಸಂಗಮವಾಗಿರುವ ಈ ಧಾರಾವಾಹಿ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಭಕ್ತರನ್ನು ಆಧ್ಯಾತ್ಮಿಕ ಅನುಭವದತ್ತ ಕರೆದೊಯ್ಯುತ್ತಿದೆ.