BELAGAVI NEWS :
ರಾಯಚೂರಿನಲ್ಲಿ ಕ್ಷೀರಭಾಗ್ಯ ಯೋಜನೆ ಹಾಲಿನ ಪುಡಿ ಅಕ್ರಮ ಸಂಗ್ರಹ ಪತ್ತೆ : 760 ಕೆಜಿ ನಂದಿನಿ ಹಾಲಿನ ಪುಡಿ ವಶ
ಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕ್ಷೀರಭಾಗ್ಯ ಯೋಜನೆಗೆ ಸಂಬಂಧಿಸಿದೆ ನಂದಿನಿ ಕೆನೆಭರಿತ ಹಾಲಿನ ಪುಡಿ ಅಕ್ರಮ ಸಂಗ್ರಹ ಪ್ರಕರಣ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.
ದೇವದುರ್ಗ ಮಾರ್ಗದಲ್ಲಿರುವ ಖಾಸಗಿ ಶೆಡ್ ಒಂದರಲ್ಲಿ ಸುಮಾರು 760 ಕೆಜಿಗು ಅಧಿಕ ನಂದಿನಿ ಕೆನೆ ಭರಿತ ಹಾಲಿನ ಪುಡಿ ಸಂಗ್ರಹಿಸಿರುವುದು ಪತ್ತೆಯಾಗಿದೆ. ಒಟ್ಟು 38 ಚೀಲಗಳಷ್ಟು ಹಾಲಿನ ಪುಡಿ ಸ್ಥಳದಲ್ಲಿ ದೊರೆತಿದ್ದು, ಈ ಬಗ್ಗೆ ಸ್ಥಳೀಯ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕ್ಷೀರಭಾಗ್ಯ ಯೋಜನೆ ಅಡಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಬಳಸುವ ಹಾಲಿನ ಪುಡಿ ಅಕ್ರಮವಾಗಿ ಸಂಗ್ರಹವಾಗಿರುವ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ವಶಪಡಿಸಿಕೊಂಡ ಹಾಲಿನ ಪುಡಿಯ ಮೂಲ, ಸಂಗ್ರಹದ ಉದ್ದೇಶ ಹಾಗೂ ಇದರಲ್ಲಿ ಭಾಗಿಯಾಗಿರುವವರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಕ್ಕಳ ಪೌಷ್ಠಿಕತೆಗೆ ಮೀಸಲಾದ ಸರ್ಕಾರಿ ಯೋಜನೆಯ ಸಾಮಾಗ್ರಿಗಳು ದುರುಪಯೋಗವಾಗದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳು ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಯಚೂರಿನಲ್ಲಿ ಕ್ಷೀರ ಭಾಗ್ಯ ಹಾಲಿನ ಪುಡಿ ದುರುಪಯೋಗ ಆರೋಪ : ಮಕ್ಕಳಿಗೆ ನೀಡಬೇಕಿದ್ದ ಪುಡಿ ದನದ ಕೊಟ್ಟಿಗೆ ಬಳಿ ಪತ್ತೆ
ಮಕ್ಕಳಿಗೆ ಉಚಿತವಾಗಿ ವಿತರಿಸಬೇಕಾಗಿದ್ದ ಕ್ಷೀರ ಭಾಗ್ಯ ಯೋಜನೆಯ ನಂದಿನಿ ಕೆನ್ನೆ ಭರಿತ ಹಾಲಿನ ಪುಡಿ ಅಕ್ರಮವಾಗಿ ಸಂಗ್ರಹಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವಾಗಿ ನೀಡಬೇಕಿದ್ದ ಹಾಲಿನ ಪುಡಿ, ರಾಯಚೂರಿನ ದೇವದುರ್ಗ ಮಾರ್ಗದಲ್ಲಿರುವ ಶೆಡ್ ಒಂದರ ಬಳಿ ದನದ ಕೊಟ್ಟಿಗೆಯ ಪಕ್ಕದಲ್ಲಿ ಅವ್ಯವಸ್ಥಿತವಾಗಿ ಬಿದ್ದಿರುವುದು ಕಂಡುಬಂದಿದೆ. ಮಕ್ಕಳ ಬಳಕೆಗೆ ಮೀಸಲಾದ ಸರ್ಕಾರಿ ಯೋಜನೆಯ ಸಾಮಗ್ರಿಗಳು ಈ ರೀತಿ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಅಕ್ಷರ ದಾಸೋಹ ಅಧಿಕಾರಿಗಳು ಹಾಲಿನ ಪುಡಿ ಸಂಗ್ರಹದ ಕುರಿತು ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದ ಆರೋಪ ಕೇಳಿ ಬಂದಿದೆ. ಈ ಬೆಳವಣಿಗೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಹಾಲಿನ ಪುಡಿ ಅಲ್ಲಿಗೆ ಹೇಗೆ ತಲುಪಿತು ಎಂಬುದರ ಬಗ್ಗೆ ತನಿಖೆ ಅಗತ್ಯವಾಗಿದೆ.
ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶವಿದ್ದು, ಯೋಜನೆಯ ಸಾಮಗ್ರಿಗಳ ದುರುಪಯೋಗ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಕ್ಷೀರ ಭಾಗ್ಯ ಹಾಲಿನ ಪುಡಿ ಅಕ್ರಮ ಸಂಗ್ರಹ ಪ್ರಕರಣ : ಕೆಎಂಎಫ್, ಶಿಕ್ಷಣ ಇಲಾಖೆ ವಿರುದ್ಧ ಸ್ಥಳೀಯ ಅಕ್ರೋಶ ರಾಯಚೂರು, ಜುಲೈ 18 : ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸಬೇಕಿದ್ದ ನಂದಿನಿ ಹಾಲಿನ ಪುಡಿ ಅಕ್ರಮವಾಗಿ ಸಂಗ್ರಹವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಂಎಫ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ ಮತ್ತು ಬೇಜವಾಬ್ದಾರಿತನವೇ ಈ ಅವಿಭಾಜ್ಯ ಕಾರಣ ಎಂದು ಆರೋಪಿಸಿರುವ ಸಾರ್ವಜನಿಕರು, ಸರ್ಕಾರಿ ಯೋಜನೆಯಡಿ ಮಕ್ಕಳಿಗೆ ತಲುಪಬೇಕಿದ್ದ ಪೌಷ್ಠಿಕ ಆಹಾರ ಸಾಮಗ್ರಿಗಳು ದುರುಪಯೋಗವಾಗಿರುವ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ರಾಯಚೂರಿನಲ್ಲಿ 760 ಕೆಜಿಗೆ ಅಧಿಕ ನಂದಿನಿ ಕೆನೆ ಭರಿತ ಹಾಲಿನ ಪುಡಿ ಅಕ್ರಮವಾಗಿ ಸಂಗ್ರಹವಾಗಿರುವುದು ಪತ್ತೆಯಾದ ಬೆನ್ನಲ್ಲೇ, ಕಳೆದ ವಾರ ಕೊಪ್ಪಳದಲ್ಲೂ ಇದೇ ರೀತಿಯ ಘಟನೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಷೀರ ಭಾಗ್ಯ ಯೋಜನೆಯ ನಿರ್ವಹಣೆ ಮತ್ತು ವಿತರಣಾ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ.
ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಗೆ ಮೀರಿಸಲಾದ ಯೋಜನೆಯ ಸಾಮಗ್ರಿಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ತನಿಖೆ ನಡೆಸಿ, ಹಾಲಿನ ಪುಡಿ ಸಂಗ್ರಹದ ಹಿಂದಿರುವ ಕಾರಣಗಳು ಹಾಗೂ ಹೊಣೆಗಾರರ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕೆಂಬ ಆಗ್ರಹ ಹೆಚ್ಚಾಗಿದೆ.