BELAGAVI NEWS :
ಮುಖ್ಯಾಂಶಗಳು:
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಾದ್ಯಂತ ವರುಣನ ಅಬ್ಬರ
ಚಲಿಸುತ್ತಿದ್ದ ಟ್ರ್ಯಾಕ್ಟರ್ ಒಂದರ ಮೇಲೆ ದೈತ್ಯ ಮರವೊಂದು ಮುರಿದು ಬಿದ್ದಿದೆ
ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಅದೃಷ್ಟವಶಾತ ಪಾರು
ಖಾನಾಪುರ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಭಾರೀ ಮಳೆಯ ಪರಿಣಾಮ ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ದೈತ್ಯ ಮರ ಮುರಿದು ಬಿದ್ದ ಆಘಾತಕಾರಿ ಘಟನೆ ನಡೆದಿದೆ. ಘಟನೆಯ ಮೇಲೆ ಟ್ಯಾಕ್ಟರ್ ಚಾಲಕ ಅದೃಷ್ಟವಶಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಖಾನಾಪುರ್ ತಾಲೂಕಿನ ಶಿವೋಲಿ ಗ್ರಾಮದ ರಸ್ತೆಯಲ್ಲಿ ನಡೆದಿದೆ. ಗ್ರಾಮದ ನಿವಾಸಿ ಪುಂಡಲೀಕ್ ಪಾಟೀಲ್ ಅವರಿಗೆ ಸೇರಿದ ಟ್ರ್ಯಾಕ್ಟರ್ ಎಂದಿನಂತೆ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ, ಹಠಾತ್ ರಸ್ತೆ ಬದಿಯ ದೈತ್ಯ ಮರ ಏಕಾಏಕಿ ಮುರಿದು ನೇರವಾಗಿ ಟ್ರ್ಯಾಕ್ಟರ್ ಮೇಲೆ ಬಿದ್ದಿದೆ.
ಮರ ಬಿದ್ದ ರಭಸಕ್ಕೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ ಎಂದು ತಿಳಿದುಬಂದಿದೆ.
ಮರ ಬಿದ್ದ ರಭಸಕ್ಕೆ ಟ್ರ್ಯಾಕ್ಟರ್ ನ ಮುಂಭಾಗದ ಎಂಜಿನ್ ಸಂಪೂರ್ಣವಾಗಿ ಜಜ್ಜುಗುಜ್ಜಾಗಿದ್ದು, ಭಾರೀ ಪ್ರಮಾಣದ ಆರ್ಥಿಕ ಹಾನಿ ಸಂಭವಿಸಿದೆ. ಇಂಜಿನ್ ಮೇಲೆಯೇ ದೈತ್ಯ ಮರ ಬಿದ್ದಿದ್ದರೂ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಘಟನೆ ನಡೆದ ತಕ್ಷಣವೇ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಕತ್ತರಿಸಿ ತೆರವುಗೊಳಿಸಲಾಗಿದ್ದು, ಬಳಿಕ ಸಂಚಾರ ಸುಗಮಗೊಳಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಇಂತಹ ಅಪಾಯಕಾರಿ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.