BELAGAVI NEWS :
ಕೊಪ್ಪಳ: ತಾಲೂಕಿನ ಪ್ರಸಿದ್ಧ ಹುಲಿಗೆಮ್ಮ ದೇವಾಲಯದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶಕ್ತಿ ದೇವತೆ ಹುಲಿಗೆಮ್ಮ ದೇವಿಯ ಮಹಾರಥೋತ್ಸವ ಸೋಮವಾರ ಭಕ್ತಿ ಭಾವದಿಂದ ನೆರೆವೇರಿತು. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವವು ಭಕ್ತಿಯ ಸಂಭ್ರಮದಲ್ಲಿ ಮುಳುಗಿತ್ತು.
" ಉಧೋ ಉಧೋ ಹುಲಿಗೆಮ್ಮ" ಎಂಬ ಜಯಘೋಷಗಳ ನಡುವೆ ಭಕ್ತರು ಭವ್ಯ ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ಜಾತ್ರಾ ಮಹೋತ್ಸವದ ವೇಳೆ ದೇವಸ್ಥಾನ ಪರಿಸರ ಭಕ್ತಿ ಭಾವದಿಂದ ತುಂಬಿ ತುಳುಕಿತು.
ರಥೋತ್ಸವದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ ಸೇರಿದಂತೆ ಹಲವು ಜನ ಪ್ರತಿನಿಧಿಗಳು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸಿತ್ತು.
ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗಿನ ಜಾವ 3:30ಕ್ಕೆ ಗಂಗಾದೇವಿ ಪೂಜೆ ಹಾಗೂ ಬಾಳಿದಂಡಿಗೆ ಆರೋಹಣ ಕಾರ್ಯಕ್ರಮಗಳು ನಡೆಯಲಿವೆ ಬಳಿಕ ಭಕ್ತರು ವಿವಿಧ ವಿಶೇಷ ಪೂಜೆಗಳಲ್ಲಿ ಭಾಗವಹಿಸಲಿದ್ದಾರೆ.
ಮೇ 13ರಂದು ನಸುಕಿನ 6: 30ಕ್ಕೆ ಅಗ್ನಿಕುಂಡ ಕಾರ್ಯಕ್ರಮ ಜರುಗಲಿದ್ದು ಸಾವಿರಾರು ಭಕ್ತರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ಕುಡಿಯುವ ನೀರು, ವಸತಿ, ವೈದ್ಯಕೀಯ ಹಾಗೂ ಇತರೆ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಆಡಳಿತ ಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
Also Read:
ಹುಬ್ಬಳಿ ರೈಲು ಪ್ರಯಾಣಿಕರಿಗೆ ಭಾರಿ ಗುಡ್ ನ್ಯೂಸ್ : 3ಹೊಸ ರೈಲುಗಳಿಗೆ ಚಾಲನೆ ನೀಡಿದ ಜೋಶಿ