IND vs SA: 62.2 ಓವರ್ಗಳಲ್ಲಿ ಟೀಮ್ ಇಂಡಿಯಾ ಆಲೌಟ್
India vs South Africa, 1st Test: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ಮುಗಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 159 ರನ್ಗಳಿಸಿದರೆ, ಟೀಮ್ ಇಂಡಿಯಾ 189 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ ಪ್ರಥಮ ಇನಿಂಗ್ಸ್ನಲ್ಲಿ ಕೇವಲ 30 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಭಾರತ ತಂಡವು 189 ರನ್ಗಳಿಸಿ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ತತ್ತರಿಸಿತ್ತು.
ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ 12 ರನ್ಗಳಿಸಿ ಔಟಾದರೆ, ಕೆಎಲ್ ರಾಹುಲ್ 39 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಾಷಿಂಗ್ಟನ್ ಸುಂದರ್ ಕಲೆಹಾಕಿದ್ದು 29 ರನ್ಗಳು ಮಾತ್ರ.
ಬೃಹತ್ ಮೊತ್ತ ಪೇರಿಸುವ ಇರಾದೆಯೊಂದಿಗೆ ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡಕ್ಕೆ ಬುಮ್ರಾ ಆಘಾತದ ಮೇಲೆ ಆಘಾತ ನೀಡಿದ್ದರು. ಪರಿಣಾಮ ಸೌತ್ ಆಫ್ರಿಕಾ ತಂಡವು ಕೇವಲ 159 ರನ್ಗಳಿಸಿ ಆಲೌಟ್ ಆಯಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ ಕೇವಲ 27 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.
ಇನ್ನು ಧ್ರುವ್ ಜುರೆಲ್ ಕಲೆಹಾಕಿದ್ದು ಕೇವಲ 14 ರನ್ ಮಾತ್ರ. ಇದರ ಬೆನ್ನಲ್ಲೇ ಅಕ್ಷರ್ ಪಟೇಲ್ (16) ಕೂಡ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ರನ್ ಕಲೆಹಾಕಲಷ್ಟೇ ಶಕ್ತರಾದರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶುಭ್ಮನ್ ಗಿಲ್ ಕೇವಲ 4 ರನ್ಗಳಿಸಿ ಗಾಯಗೊಂಡು ಹೊರ ನಡೆದರು. ಆ ಬಳಿಕ ಬಂದ ರಿಷಭ್ ಪಂತ್ 27 ರನ್ಗಳಿಸಿದರೆ, ರವೀಂದ್ರ ಜಡೇಜಾ 27 ರನ್ ಬಾರಿಸಿದರು.
ಈ ಮೂಲಕ ಟೀಮ್ ಇಂಡಿಯಾ 62.2 ಓವರ್ಗಳಲ್ಲಿ 189 ರನ್ಗಳಿಸಿ ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿದೆ. ಸೌತ್ ಆಫ್ರಿಕಾ ಪರ ಸೈಮನ್ ಹರ್ಮರ್ 4 ವಿಕೆಟ್ ಪಡೆದರೆ, ಮಾರ್ಕೊ ಯಾನ್ಸೆನ್ 3 ವಿಕೆಟ್ ಕಬಳಿಸಿ ಮಿಂಚಿದರು.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ರಯಾನ್ ರಿಕಲ್ಟನ್ , ವಿಯಾನ್ ಮುಲ್ಡರ್ , ಟೆಂಬಾ ಬವುಮಾ (ನಾಯಕ) , ಟೋನಿ ಡಿ ಝೋರ್ಝಿ , ಟ್ರಿಸ್ಟನ್ ಸ್ಟಬ್ಸ್ , ಕೈಲ್ ವೆರ್ರೆನ್ (ವಿಕೆಟ್ ಕೀಪರ್ ), ಮಾರ್ಕೊ ಯಾನ್ಸೆನ್ , ಕಾರ್ಬಿನ್ ಬಾಷ್ , ಸೈಮನ್ ಹಾರ್ಮರ್ , ಕೇಶವ ಮಹಾರಾಜ್
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಯಶಸ್ವಿ ಜೈಸ್ವಾಲ್, ವಾಷಿಂಗ್ಟನ್ ಸುಂದರ್ , ಶುಭ್ಮನ್ ಗಿಲ್ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ಧ್ರುವ್ ಜುರೆಲ್ , ಅಕ್ಷರ್ ಪಟೇಲ್ , ಕುಲ್ದೀಪ್ ಯಾದವ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್.
ಇನ್ನಷ್ಟು ಓದಿರಿ:
IPL 2026: KKR ತಂಡದಿಂದ ಆ್ಯಂಡ್ರೆ ರಸೆಲ್ ರಿಲೀಸ್