IND vs SA: ಯಾರಾಗ್ತಾರೆ ಟೀಮ್ ಇಂಡಿಯಾ ನಾಯಕ?
India vs South Africa: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಏಕದಿನ ಸಿರೀಸ್ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯು ನವೆಂಬರ್ 30 ರಿಂದ ಆರಂಭವಾಗಲಿದೆ. ಆದರೆ ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಭಾರತ ಮತ್ತು ಸೌತ್ ಆಫ್ರಿಕಾ (IND vs SA) ನಡುವಣ ಏಕದಿನ ಸರಣಿಯು ನವೆಂಬರ್ 30 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಗೆ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಅಲಭ್ಯರಾಗುವ ಸಾಧ್ಯತೆಯಿದೆ. ಕುತ್ತಿಗೆ ನೋವಿನಿಂದ ಬಳಲುತ್ತಿರುವ ಗಿಲ್ಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದು, ಹೀಗಾಗಿ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ. ಇತ್ತ ಶುಭ್ಮನ್ ಗಿಲ್ ಹೊರಗುಳಿದರೆ ಭಾರತ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಟೀಮ್ ಇಂಡಿಯಾ ಮುಂದೆ ಹಲವು ಆಯ್ಕೆಗಳಿವೆ. ಇವರಲ್ಲಿ ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿರಾಟ್ ಕೊಹ್ಲಿ: ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಮುಂದಾಳತ್ವದಲ್ಲಿ 95 ಏಕದಿನ ಪಂದ್ಯಗಳನ್ನಾಡಿದೆ. ಈ ವೇಳೆ ಬರೋಬ್ಬರಿ 65 ಮ್ಯಾಚ್ಗಳಲ್ಲಿ ಭಾರತ ತಂಡ ಗೆಲುವು ದಾಖಲಿಸಿದೆ. ಹೀಗಾಗಿ ಗಿಲ್ ಸ್ಥಾನಕ್ಕೆ ಕೊಹ್ಲಿಯನ್ನು ತಾತ್ಕಾಲಿಕ ಕ್ಯಾಪ್ಟನ್ ಆಗಿ ಆಯ್ಕೆ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ರೋಹಿತ್ ಶರ್ಮಾ: ಭಾರತ ಏಕದಿನ ತಂಡದ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾ 56 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ವೇಳೆ ಭಾರತ ತಂಡ 42 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಹೀಗಾಗಿ ಸೌತ್ ಆಫ್ರಿಕಾ ಸರಣಿಯಲ್ಲಿ ಹಿಟ್ಮ್ಯಾನ್ಗೆ ಕ್ಯಾಪ್ಟನ್ ಪಟ್ಟ ನೀಡಿದರೂ ಅಚ್ಚರಿಪಡಬೇಕಿಲ್ಲ.
ರಿಷಭ್ ಪಂತ್: ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಶುಭ್ಮನ್ ಗಿಲ್ ಹೊರಗುಳಿದರೆ ರಿಷಭ್ ಪಂತ್ ನಾಯಕನಾಗಿ ಕಾಣಿಸಿಕೊಳ್ಳಬಹುದು. ಏಕೆಂದರೆ ಪಂತ್ ಈಗಾಗಲೇ ಭಾರತ ಟಿ20 ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅಲ್ಲದೆ ಭಾರತ ಟೆಸ್ಟ್ ತಂಡದ ಉಪನಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೆಎಲ್ ರಾಹುಲ್: ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ನಾಯಕನಾಗಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ. ಏಕೆಂದರೆ ರಾಹುಲ್ ಈ ಹಿಂದೆ 12 ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ವೇಳೆ ಭಾರತ ತಂಡ 8 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಹೀಗಾಗಿ ರಾಹುಲ್ ಅವರನ್ನು ನಾಯಕನನ್ನಾಗಿ ನೇಮಿಸುವ ಸಾಧ್ಯತೆ ಕೂಡ ಇದೆ.
ಶ್ರೇಯಸ್ ಅಯ್ಯರ್: ಭಾರತ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳೆ ಗಾಯಗೊಂಡಿದ್ದರು. ಒಂದು ವೇಳೆ ನವೆಂಬರ್ 30 ರೊಳಗೆ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಿ ತಂಡಕ್ಕೆ ಮರಳಿದರೆ, ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.
ಹಾರ್ದಿಕ್ ಪಾಂಡ್ಯ: ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮೂರು ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಒಮ್ಮೆಯೂ ಟೀಮ್ ಇಂಡಿಯಾ ಸೋತಿರಲಿಲ್ಲ. ಇದೀಗ ಗಿಲ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದರೂ ಅಚ್ಚರಿಪಡಬೇಕಿಲ್ಲ.
ಇನ್ನಷ್ಟು ಓದಿರಿ:
ಅಫ್ರಿದಿಯನ್ನೇ ಹಿಂದಿಕ್ಕಿ ಹೀನಾಯ ದಾಖಲೆ ಬರೆದ ಬಾಬರ್ ಆಝಂ