Belagavi News:
ಮಹಾಮಳೆಗೆ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ: ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ, ಜಮೀನುಗಳಿಗೆ ನುಗ್ಗಿದ ನೀರು
ಬೆಳಗಾವಿ ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪರಿಣಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ನದಿಗೆ ಪ್ರಸ್ತುತ "ಒಂದು ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು" ಹರಿದು ಬರುತ್ತಿದ್ದು, ಹಲವು ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ನೀರಿನ ಹರಿವು ಹೆಚ್ಚಾಗಿರುವ ಕಾರಣ ಕೃಷ್ಣಾ ನದಿ ತನ್ನ ದಂಡೆಯನ್ನು ಮೀರಿ ಹರಿಯತೊಡಗಿದೆ, ಚಿಕ್ಕೋಡಿ ತಾಲೂಕಿನ "ಮಾಂಜರಿ" ಹಾಗೂ "ಅಂಕಲಿ" ಗ್ರಾಮದ ಸುತ್ತಮುತ್ತಲಿನ ಕೃಷಿ ಜಮೀನುಗಳಿಗೆ ಪ್ರವಾಹ ನೀರು ನುಗ್ಗಿದ್ದು, ರೈತರಿಗೆ ಆತಂಕ ಮನೆ ಮಾಡಿದೆ.
ಕೇವಲ ಐದು ದಿನಗಳ ಹಿಂದೆ ಬರಡಾಗಿದ್ದ ಈ ಪ್ರದೇಶಗಳು ಈಗ ಸಂಪೂರ್ಣ ಜಲಾವೃತವಾಗಿವೆ. ನಿರಂತರ ಮಳೆಯ ಪರಿಣಾಮ ನದಿಯ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ನದಿ ತೀರದ ಗ್ರಾಮಗಳ ನಿವಾಸಿಗಳು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚಿಸಿದೆ.
ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿಯೂ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಇದರ ಪರಿಣಾಮ ಕೃಷ್ಣಾ ನದಿಯ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಪ್ರವಾಹ ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಭಾರೀ ಮಳೆಯ ಪರಿಣಾಮ ಚಿಕ್ಕೋಡಿ ಭಾಗದ ನದಿ ತೀರದ ಕೃಷಿ ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿದ್ದು, " ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ನೀರಿನಲ್ಲಿ ಮುಳುಗಿ ಹಾನಿಯಾಗುವ ಭೀತಿ" ಎದುರಾಗಿದೆ. ಈಗಾಗಲೇ ಜಮೀನುಗಳು ಜಲಾವೃತವಾಗಿರುವುದರಿಂದ ರೈತರು ಅಪಾರ ನಷ್ಟದ ಆತಂಕದಲ್ಲಿದ್ದಾರೆ.
ಇದರ ಜೊತೆಗೆ ಘಟಪ್ರಭಾ ನದಿಗೆ ಸುಮಾರು 22,000 ಕ್ಯೂಸೆಕ್ ಹಾಗೂ ಮಲಪ್ರಭಾ ನದಿಗೆ 5,000 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಪರಿಣಾಮವಾಗಿ ಹಿಡಕಲ್ ಹಾಗೂ ನವಿಲುತೀರ್ಥ ಜಲಾಶಯಗಳ ನೀರಿನ ಮಟ್ಟವು ಏರಿಕೆಯಾಗುತ್ತಿದ್ದು, ಜಲಾಶಯಗಳ ಒಳಹರಿವು ನಿರಂತರವಾಗಿ ಹೆಚ್ಚುತ್ತಿದೆ.
ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆಯ ತೀವ್ರತೆ ಮುಂದುವರಿದರೆ ಕೃಷ್ಣಾ ನದಿಗೆ ಇನ್ನಷ್ಟು ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹೀಗಾಗಿ ಕೃಷ್ಣಾ ನದಿ ಪಾತ್ರದ ಗ್ರಾಮಗಳು ಹಾಗೂ ರೈತರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.