belagavi news :
ಕೇರಳದ ಕೊಟ್ಟಿಯೂರು ದೇವಾಲಯದಲ್ಲಿ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪಗಳು ಭಾರಿ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, ಕಣ್ಣೂರು ವಲಯದ ಡಿಐಜಿ ಯತೀಶ್ ಚಂದ್ರ ಕನ್ನಡದಲ್ಲೇ ವಿಡಿಯೋ ಸಂದೇಶ ಬಿಡುಗಡೆ ಮಾಡಿ ಕನ್ನಡಿಗರ ಮನ ಗೆದ್ದಿದ್ದಾರೆ. ಮೂಲತಃ ದಾವಣಗೆರೆಯವರಾದ ಯತೀಶ್ ಚಂದ್ರ, "ಕನ್ನಡಿಗರೇ ಯಾವುದೇ ಆತಂಕವಿಲ್ಲದೆ ಕೊಟ್ಟಿಯೂರಿಗೆ ಬನ್ನಿ. ನಿಮ್ಮ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಭರವಸೆ ನೀಡಿದ್ದಾರೆ.
ದೇವಾಲಯಕ್ಕೆ ಆಗಮಿಸುವ ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ಕನ್ನಡ ಭಾಷೆಯ ಸೂಚನಾ ಫಲಕಗಳು ಹಾಗೂ ಅನೌನ್ಸ್ ಮೆಂಟ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚಿನ ಕೆಲವು ಕನ್ನಡಿಗ ಯಾತ್ರಿಕರು ದೇವಸ್ಥಾನದ ವ್ಯವಸ್ಥೆ ಹಾಗೂ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದರು.ಈ ಬೆಳವಣಿಗೆಯ ಬೆನ್ನಲ್ಲೇ ಡಿಐಜಿ ಯತೀಶ್ ಚಂದ್ರ ಅವರ ಕನ್ನಡ ಸಂದೇಶ ಗಮನ ಸೆಳೆದಿದೆ.
ಕನ್ನಡದಲ್ಲೇ ಮಾತನಾಡಿ ಭಕ್ತರನ್ನು ಸ್ವಾಗತಿಸಿದ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಕ್ತರ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಕೇರಳ ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದು, ಕೊಟ್ಟಿಯೂರು ಯಾತ್ರೆಗೆ ತೆರಳುವ ಕನ್ನಡಿಗರಿಗೆ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದ್ದಾರೆ.
ವೀಡಿಯೋದಲ್ಲಿ ಮಾತನಾಡಿರುವ ಯತೀಶ್ ಚಂದ್ರ,ಕೊಟ್ಟಿಯೂರು ದೇವಸ್ಥಾನ ಆಡಳಿಯ ಮಂಡಳಿ ಹಾಗೂ ಪಂಚಾಯತ್ ವತಿಯಿಂದ ವೈಶಾಖ ಮಹೋತ್ಸವದ ಹಿನ್ನೆಲೆಯಲ್ಲಿ ವ್ಯಾಪಕ ಸಿದ್ಧತೆಗಳನ್ನು ಎಂದು ತಿಳಿಸಿದ್ದಾರೆ.ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದ್ದು,ಭಕ್ತರ ಅನುಕೂಲಕ್ಕಾಗಿ ವಾಹನ ನಿಲುಗಡೆ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ವಿಶೇಷವಾಗಿ ಕರ್ನಾಟಕದಿಂದ ಆಗಮಿಸುವ ಭಕ್ತರಿಗಾಗಿ ದೇವಸ್ಥಾನದ ಆವರಣದಲ್ಲಿ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಲಾಗಿದೆ. ಅಲ್ಲದೆ,ಕನ್ನಡದಲ್ಲೇ ಧ್ವನಿವರ್ಧಕಗಳ ಮೂಲಕ ಪ್ರಕಟಣೆಗಳನ್ನು ನೀಡುವ ವ್ಯವಸ್ತೆಯನ್ನು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ ಇದರಿಂದ ಕನ್ನಡಿಗ ಭಕ್ತರು ಯಾವುದೇ ತೊಂದರೆ ಗೊಂದಲವಿಲ್ಲದೆ ದೇವಾಲಯದ ಸೇವೆಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ಕೆಲ ಕರ್ನಾಟಕದ ಯಾತ್ರಿಕರು ದೇವಸ್ಥಾನದಲ್ಲಿ ತಮಗೆ ಸೂಕ್ತ ವ್ಯವಸ್ಥೆ ದೊರಕಿಲ್ಲ ಎಂದು ಆರೋಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆ, ಡಿಐಜಿಯುವರ ಕನ್ನಡ ಸಂದೇಶಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ. "ಕನ್ನಡಿಗರೇ ಯಾವುದೇ ಆತಂಕವಿಲ್ಲದೆ ಕೊಟ್ಟಿಯೂರಿಗೆ ಬನ್ನಿ,ನಿಮ್ಮ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ" ಎಂಬ ಸಂದೇಶದ ಮೂಲಕ ಅವರು ಭಕ್ತರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಮೂಲತಃ ಕರ್ನಾಟಕದ ದಾವಣಗೆರೆ ಜಿಲ್ಲೆಯವರಾದ ಯತೀಶ್ ಚಂದ್ರ ಕನ್ನಡದಲ್ಲೇ ಮಾತನಾಡಿರುವುದು ವಿಶೇಷವಾಗಿದ್ದು,ಅವರ ಸರಳ ಮತ್ತು ಆತ್ಮೀಯ ಮನವಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡಿಗ ಭಕ್ತರಿಗಾಗಿ ಭಾಷಾ ಸೌಲಭ್ಯಗಳನ್ನು ಕಲ್ಪಿಸಿರುವ ಕ್ರಮವೂ ಗಮನ ಸೆಳೆಯುತ್ತಿದೆ.
ಅಲ್ಲದೆ,ಪವಿತ್ರವಾದ ಈ ಕಾಡಿನ ಸನ್ನಿಧಿಗೆ ಬರುವಾಗ ಪರಿಸರವನ್ನು ಸ್ವಚ್ಛವಾಗಿಡುವಂತೆ ಮತ್ತು ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸಹಕರಿಸುವಂತೆ ಕನ್ನಡಿಗರಲ್ಲಿ ಅತ್ಯಂತ ಆಪ್ತವಾಗಿ ವಿನಂತಿಸಿಕೊಂಡಿದ್ದಾರೆ. ಕ್ಯೂನಲ್ಲಿ ಆರಾಮವಾಗಿ ಬಂದು ದೇವರ ದರ್ಶನ ಮಾಡಿ.ನಾವು ಪೊಲೀಸರು ಭದ್ರತೆಗೆ ಎಲ್ಲಾ ತಯಾರಿ ಮಾಡಿದ್ದೇವೆ.ತಾವೆಲ್ಲರೂ ಇಲ್ಲಿಗೆ ಬಂದು ದರ್ಶನ ಮಾಡಿ, 26 ದಿನಗಳ ಈ ಮಹೋತ್ಸವವನ್ನು ಯಶಸ್ವಿಯಾಗಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಕೇರಳ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಯತೀಶ್ ಚಂದ್ರ ಅವರು ಕನ್ನಡದಲ್ಲೇ ಕೊಟ್ಟಿಯೂರು ಯಾತ್ರಿಕರಿಗೆ ಸಂದೇಶ ನೀಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇದರೊಂದಿಗೆ "ಯಾರು ಈ ಯತೀಶ್ ಚಂದ್ರ?" ಎಂಬ ಕುತೂಹಲವು ಜನರಲ್ಲಿ ಹೆಚ್ಚಾಗಿದೆ.
ದಾವಣಗೆರೆ ಜಿಲ್ಲೆಯವರಾದ ಯತೀಶ್ ಚಂದ್ರ ಅವರು ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಉತ್ತಮ ವೃತ್ತಿಜೀವನದ ಅವಕಾಶಗಳಿದ್ದರೂ ಸಮಾಜ ಸೇವೆ ಮಾಡುವ ಉದ್ದೇಶದಿಂದ ಯುಪಿಎಸ್ ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದರೂ. ತಮ್ಮ ಶಿಸ್ತು, ಕಠಿಣ ಕಾರ್ಯ ವೈಕರಿ ಹಾಗೂ ದಕ್ಷ ಆಡಳಿತದಿಂದ ಅವರು ಪೊಲೀಸ್ ಇಲಾಖೆಯಲ್ಲಿ ವಿಶೇಷ ಗುರುತನ್ನು ಸಂಪಾದಿಸಿದ್ದಾರೆ.
ಫಿಟ್ನೆಸ್ ಗೆ ಹೆಚ್ಚಿನ ಮಹತ್ವ ನೀಡುವ ಯತೀಶ್ ಚಂದ್ರ ಅವರು ಈ ಹಿಂದೆ ಪ್ರಧಾನ ಮಂತ್ರಿಯವರ ಚಾಲೆಂಜ್ ಸ್ವೀಕರಿಸಿ ತಮ್ಮ ವ್ಯಾಯಾಮದ ವಿಡಿಯೋಗಳ ಮೂಲಕ ದೇಶದಾದ್ಯಂತ ಗಮನ ಸೆಳೆದಿದ್ದರು. ಅವರ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯಕರ ಜೀವನಶೈಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ಪಡೆದಿತ್ತು.
2021 ರಲ್ಲಿ ಡೆಪ್ಯುಟೇಷನ್ ಆಧಾರದ ಮೇಲೆ ಕರ್ನಾಟಕಕ್ಕೆ ಬಂದಿದ್ದವರು, ಬೆಂಗಳೂರು ಸಿಟಿ ಪೊಲೀಸ್ ನಲ್ಲಿ ಡೆಪ್ಯೂಟಿ ಕಮಿಷನರ್ ಆಫ್ ಪೋಲಿಸ್ ಆಗಿ ಸೇವಿ ಸಲ್ಲಿಸಿ ಜನಮನ ಗಳಿಸಿದ್ದರು. ನಂತರ ಕರ್ನಾಟಕದಲ್ಲಿನ ಸೇವಾವದಿ ಪೂರ್ಣಗೊಳಿಸಿ ಮರಳಿ ಕೇರಳಕ್ಕೆ ತೆರಳಿದ ಅವರನ್ನು ಮಾಹಿತಿ, ತಂತ್ರಜ್ಞಾನ ವಿಭಾಗದ ಎಸ್ ಪಿ ಯಾಗಿ ನೇಮಿಸಲಾಯಿತು.
ಪ್ರಸ್ತುತ ಕಣ್ಣೂರು ರೇಂಜ್ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿರುವ ಯತೀಶ್ ಚಂದ್ರ ಅವರು, ಕೊಟ್ಟಿಯೂರು ಟೆಂಪಲ್ ಗೆ ಆಗಮಿಸುವ ಕರ್ನಾಟಕದ ಭಕ್ತರಿಗಾಗಿ ಕನ್ನಡದಲ್ಲಿ ಸಂದೇಶ ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕನ್ನಡ ನಾಮಪಲಕಗಳು, ಕನ್ನಡ ಪ್ರಕಟಣೆಗಳು ಹಾಗೂ ಭಕ್ತರ ಸುರಕ್ಷತೆ ಕುರಿತು ನೀಡಿದ ಭರವಸೆ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ತಮ್ಮ ಮಾತೃಭಾಷೆಯ ಮೂಲಕ ಜನರೊಂದಿಗೆ ಬೆಸೆದುಕೊಳ್ಳುವ ಅವರ ನಡೆ ವ್ಯಾಪಕ ಪ್ರಶಂಸಿಗೆ ಕಾರಣವಾಗಿದೆ.
Also Read:
ರೈಲಿನಲ್ಲಿ ಅಪರೂಪದ ಘಟನೆ: ಪ್ರಯಾಣದ ಮಧ್ಯೆ ಮಗುವಿನ ಜನ್ಮ ನೀಡಿದ ಮಹಿಳೆ