BELAGAVI NEWS :
ಕಾಫಿ ನಾಡು ಎಂದೇ ಪ್ರಸಿದ್ಧಿಯಾದ ಚಿಕ್ಕಮಂಗಳೂರು ಪ್ರಕೃತಿ ಸೌಂದರ್ಯ, ಮಲೆನಾಡಿನ ಬೆಟ್ಟ ಗುಡ್ಡಗಳು ಹಾಗೂ ಧಾರ್ಮಿಕ ನಂಬಿಕೆಗಳ ಸಂಗಮಕ್ಕೆ ಹೆಸರುವಾಸಿಯಾಗಿದೆ. ಈ ನೆಲದಲ್ಲಿ ನಡೆಯುವ ಪ್ರತಿಯೊಂದು ಜಾತ್ರೆಯೂ ತನ್ನದೇ ಆದ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದ್ದು, ಭಕ್ತರಲ್ಲಿ ವಿಶೇಷ ಭಾವನೆಯನ್ನು ಮೂಡಿಸುತ್ತದೆ. ಇದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಕೋಟೆ ಭಾಗದಲ್ಲಿ ನಡೆದ ಶ್ರೀ ಗಾಳಿಕೆರೆ ಕೆಂಚರಾಯ ಸ್ವಾಮಿಯ ಜಾತ್ರೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ. ಈ ಜಾತ್ರೆಯ ಹಿಂದಿರುವ ವಿಶೇಷ ಕಥೆಗಳು ಜನರಲ್ಲಿ ಕುತೂಹಲವನ್ನು ಹೆಚ್ಚಿಸಿದ್ದು, ಭಕ್ತಿ ಭಾವದ ವಾತಾವರಣವನ್ನು ಮತ್ತಷ್ಟು ಗಾಢಗೊಳಿಸಿದೆ.
ನಗರದ ಕೋಟೆ ಪ್ರದೇಶದಲ್ಲಿ ಐದು ದಿನಗಳ ಕಾಲ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ಇಡೀ ನಗರವೇ ಹಬ್ಬದ ಕಳೆ ಪಡೆದಿತ್ತು. ಎಲ್ಲಿ ನೋಡಿದರೂ ಜನಸಾಗರ, ದೇವರ ಮೆರವಣಿಗೆ, ವರ್ಣ ರಂಜಿತ ದೀಪಾಲಂಕಾರ, ಸಾಂಪ್ರದಾಯಿಕ ವಾದ್ಯಗಳ ಘೋಷ ಹಾಗೂ ಭಕ್ತರ ಜಯ ಘೋಷಗಳು ನಗರವನ್ನು ಸಂಪೂರ್ಣವಾಗಿ ಭಕ್ತಿಮಯಗೊಳಿಸಿತು. ಜಾತ್ರೆಗೆ ಆಗಮಿಸಿದ ಭಕ್ತರು"ಒಮ್ಮೆ ಈ ಜಾತ್ರೆ ನೋಡಿದರೆ ದೇವೇಂದ್ರನ ಭೂಲೋಕಕ್ಕೆ ಬಂದ ಅನುಭವವಾಗುತ್ತದೆ"ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಜಾತ್ರೆಯ ಪ್ರಮುಖ ವಿಶೇಷತೆ ಏನೆಂದರೆ ಮಲೆನಾಡಿನ ಮೂರು ಬೆಟ್ಟದ ದೇವರುಗಳ ಆಶೀರ್ವಾದ ಸಿಕ್ಕ ನಂತರವೇ ಜಾತ್ರಾ ಮಹೋತ್ಸವ ಆರಂಭವಾಗುತ್ತದೆ ಎಂಬ ಭಕ್ತರಾದೃಢ ನಂಬಿಕೆ. ಮುಳ್ಳಯ್ಯನಗಿರಿ ಶಿಖರದ ತುತ್ತ ತುದಿಯಲ್ಲಿ ನೆಲೆಸಿರುವ ಶ್ರೀ ಮುಳ್ಳಯ್ಯಪ್ಪ ಸ್ವಾಮಿಯ ಗದ್ದುಗೆಯಿಂದ ಆಶೀರ್ವಾದ ಪಡೆದ ಬಳಿಕವೇ ಕೆಂಚರಾಯಸ್ವಾಮಿಯ ಜಾತ್ರೆಗೆ ಚಾಲನೆ ನೀಡಲಾಗುತ್ತದೆ ಎಂದು ಪರಂಪರೆಯಿಂದಲೇ ಹೇಳಲಾಗುತ್ತದೆ.
ಇದರ ಜೊತೆಗೆ ಮುಳ್ಳಯ್ಯನಗಿರಿಯ ಕೆಳಭಾಗದಲ್ಲಿರುವ ಶ್ರೀ ಸೀತಾಳಗಿರಿ ಪ್ರದೇಶದ ಸೀತಾಳ ಮಲ್ಲಿಕಾರ್ಜುನ ಸ್ವಾಮಿಯ ಅನುಗ್ರಹವು ಈ ಜಾತ್ರೆಗೆ ಅತ್ಯಂತ ಮುಖ್ಯವಾಗಿದೆ ಎಂದು ಭಕ್ತರು ನಂಬುತ್ತಾರೆ.
ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳ ಮೂಲಕ"ಯಾವುದೇ ವಿಘ್ನವಿಲ್ಲದೆ ಜಾತ್ರೆ ಸುಗಮವಾಗಿ ನೆರವೇರಲಿ"ಎಂದು ಭಕ್ತರು ಪ್ರಾರ್ಥಿಸಿದ ನಂತರವೇ ಜಾತ್ರೆಯ ವಿಧಿ ವಿಧಾನಗಳು ಆರಂಭವಾಗುತ್ತವೆ. ಈ ಆಧ್ಯಾತ್ಮಿಕ ನಂಬಿಕೆಗಳು ಜಾತ್ರೆಗೆ ಮತ್ತಷ್ಟು ಪವಿತ್ರತೆ ಮತ್ತು ಭಕ್ತಿ ಭಾವವನ್ನು ನೀಡುತ್ತವೆ.
ಹಾಗೆಯೇ ಮಲೆನಾಡಿನ ಬೆಟ್ಟದ ದೇವರೆಂದೇ ಪ್ರಸಿದ್ಧಿಯಾಗಿರುವ ಸಿದ್ದೇಶ್ವರ ಸ್ವಾಮಿಯ ಗದ್ದುಗೆ ಇಂದಲು ಆಶೀರ್ವಾದ ಪಡೆದು ಜಾತ್ರೆಯನ್ನು ನಡೆಸುವುದು ಹಲವು ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯವಾಗಿದೆ. ಈ ಮೂರು ದೇವರ ಅನುಮತಿ ಹಾಗೂ ಆಶೀರ್ವಾದದಿಂದಲೇ ಜಾತ್ರೆ ಯಶಸ್ವಿಯಾಗಿ ನಡೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಗಾಢವಾಗಿದೆ.
ಜಾತ್ರೆಯು ಗಂಗೆ ಪೂಜೆಯಿಂದ ಆರಂಭವಾಗಿ ಬಲಿ ಸೇವೆಯೊಂದಿಗೆ ಸಂಪನ್ನಗೊಳ್ಳುತ್ತದೆ ಐದು ದಿನಗಳ ಕಾಲ ನಡೆಯುವ ಮಹೋತ್ಸವದಲ್ಲಿ ರಾಜಬೀದಿ ಉತ್ಸವ, ಮಹಾ ಸುದರ್ಶನ ಯಾಗ, ಓಕುಳಿ ಸೇವೆ ಸೇರಿದಂತೆ ಅನೇಕ ಧಾರ್ಮಿಕ ವಿಧಿ ವಿಧಾನಗಳು ಭಕ್ತಿ ಭಾವದಿಂದ ನೆರವೇರಿಸಲಾಗುತ್ತದೆ.
ಸ್ಥಳೀಯರ ಪ್ರಕಾರ, ಶ್ರೀ ಶಕುನಗಿರಿ ರಂಗನಾಥನ ಭಟ್ಟನಾದ ಶ್ರೀ ಗಾಳಿಕೆರೆ ಕೆಂಚರಾಯ ಸ್ವಾಮಿಯವರು ಕೋಟೆಯ ಭಕ್ತರ ಭಕ್ತಿಗೆ ಮೆಚ್ಚಿ ಇಲ್ಲೇ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಸಾವಿರಾರು ಭಕ್ತರ ಸಂಕಷ್ಟಗಳನ್ನು ನಿವಾರಿಸುತ್ತಾ, ಕಾಮಧೇನು ಸ್ವರೂಪಿಯಾಗಿ ಜನರ ಆರಾಧ್ಯ ದೈವವಾಗಿ ಪೂಜಿಸಲ್ಪಡುತ್ತಿದ್ದಾರೆ.
ಕೊನೆಯ ದಿನ ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪನೆಯ ವ್ಯವಸ್ಥೆ ಮಾಡಲಾಗುತ್ತದೆ. ಸಾವಿರಾರು ಭಕ್ತರು ಒಟ್ಟಾಗಿ ಸೇರಿ ಪ್ರಸಾದ ಸ್ವೀಕರಿಸುವ ಈ ಕ್ಷಣ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುತ್ತದೆ.
ಒಟ್ಟಿನಲ್ಲಿ, ಮಲೆನಾಡಿನ ಮಧ್ಯಭಾಗದಲ್ಲಿ ನಡೆಯುವ ಕೋಟೆಯ ಗಾಳಿಕೆರೆ ಕೆಂಚರಾಯಸ್ವಾಮಿಯ ಜಾತ್ರೆಯು ಕೇವಲ ಧಾರ್ಮಿಕ ಆಚರಣೆ ಅಷ್ಟೇ ಅಲ್ಲದೆ, ಬೆಟ್ಟದ ದೇವರುಗಳ ನಂಬಿಕೆ, ಭಕ್ತಿ ಹಾಗೂ ಮಲೆನಾಡಿನ ಸಾಂಪ್ರದಾಯಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಶಿಷ್ಟ ಮಹೋತ್ಸವವಾಗಿ ಗಮನ ಸೆಳೆಯುತ್ತದೆ.
Also Read:
ಶ್ವೇತಭವನ ಬಳಿ ಭಯಾನಕ ಗುಂಡಿನ ದಾಳಿ: ಶಂಕಿತನನ್ನು ಹೊಡೆದುರುಳಿಸಿದ ಪೊಲೀಸರು