ಉಡುಪಿ ಶೈಲಿಯ ರುಚಿಕರವಾದ ವೆಜ್ ಪಲಾವ್ ತಯಾರಿಸೋದು ತುಂಬಾ ಸಿಂಪಲ್
ಉಡುಪಿ ಶೈಲಿಯ ಅತ್ಯಂತ ರುಚಿಕರವಾದ ವೆಜ್ ಪಲಾವ್ ಸಿದ್ಧಪಡಿಸುವುದು ಹೇಗೆ ಎಂಬುದನ್ನು ಕಲಿಯೋಣ ಬನ್ನಿ.
How to make Veg Pulao:
ಪಲಾವ್. ಸಾಮಾನ್ಯವಾಗಿ ಎಲ್ಲರೂ ಇಷ್ಟಪಟ್ಟು ತಿನ್ನುವ ತಿನಿಸು. ಸ್ಪೈಸಿಯಾಗಿದ್ದು, ರೈತಾ ಜೊತೆ ಸವಿದರೆ ರುಚಿಯೂ ಅದ್ಭುತ. ಪ್ರತಿದಿನ ಒಂದೇ ಶೈಲಿಯಲ್ಲಿ ಪಲಾವ್ ಮಾಡಿ ತಿನ್ನುವುದು ಬೇಸರವಾಗಬಹುದು. ಹಾಗಾಗಿ, ಉಡುಪಿ ಶೈಲಿಯ ವೆಜ್ ಪಲಾವ್ ರೆಸಿಪಿಯ ಬಗ್ಗೆ ಇಂದು ತಿಳಿಯೋಣ.
ವೆಜ್ ಪಲಾವ್ಗೆ ಬೇಕಾಗುವ ಸಾಮಗ್ರಿ:
ಲವಂಗ - 4
ಏಲಕ್ಕಿ - 3
ದಾಲ್ಚಿನ್ನಿ - ಸ್ವಲ್ಪ
ಸೋಂಪು - 1 ಟೀಸ್ಪೂನ್
ಜೀರಿಗೆ- 1 ಟೀಸ್ಪೂನ್
ಅನಾನಸ್ ಹೂ - 1
ಮೆಣಸು - 1 ಟೀಸ್ಪೂನ್
ಹಸಿ ಮೆಣಸಿನಕಾಯಿ - 3
ಕೊತ್ತಂಬರಿ - 1.5 ಟೀಸ್ಪೂನ್
ಹಸಿ ತೆಂಗಿನಕಾಯಿ - 1/4 ಕಪ್
ವೆಜ್ ಪಲಾವ್ ತಯಾರಿಸುವ ವಿಧಾನ
ಮೊದಲು ಮಸಾಲೆ ಪೇಸ್ಟ್ ಮಾಡಲು ನಾಲ್ಕು ಲವಂಗ, ಮೂರು ಏಲಕ್ಕಿ, ಸ್ವಲ್ಪ ದಾಲ್ಚಿನ್ನಿ, ಒಂದು ಚಮಚ ಸೋಂಪು, ಒಂದು ಚಮಚ ಜೀರಿಗೆ ಮತ್ತು ಒಂದು ಅನಾನಸ್ ಹೂ ಅನ್ನು ಮಿಕ್ಸರ್ ಜಾರ್ನಲ್ಲಿ ಹಾಕಿ.
ಒಂದು ಚಮಚ ಮೆಣಸು, ಮೂರು ಹಸಿ ಮೆಣಸಿನಕಾಯಿ, ಒಂದೂವರೆ ಚಮಚ ಕೊತ್ತಂಬರಿ ಮತ್ತು ಕಾಲು ಕಪ್ ಹಸಿ ತೆಂಗಿನಕಾಯಿ ತುರಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಈ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ.
ಮತ್ತೊಂದೆಡೆ ಒಲೆ ಆನ್ ಮಾಡಿ ಕಡಾಯಿ ಇಟ್ಟು ಏಳು ಚಮಚ ಎಣ್ಣೆ ಹಾಕಬೇಕು ಎಣ್ಣೆ ಬಿಸಿಯಾದ ಬಳಿಕ ಒಂದು ಬಿರಿಯಾನಿ ಎಲೆ ಮತ್ತು ಒಂದು ಕಪ್ ಈರುಳ್ಳಿ ಹೋಳುಗಳನ್ನು ಸೇರಿಸಿ. ಈರುಳ್ಳಿ ತಿಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಬೇಕು.
ಬಳಿಕ ಸ್ವಲ್ಪ ಪುದೀನಾ ಎಲೆಗಳನ್ನು ಸೇರಿಸಿ ಹುರಿಯಿರಿ. ಇದಕ್ಕೆ ರುಬ್ಬಿದ ಮಸಾಲಾ ಪೇಸ್ಟ್ ಅನ್ನು ಸೇರಿಸಿ ಹುರಿಯಿರಿ.
ಮಸಾಲಾ ಹುರಿದ ಬಳಿಕ ಒಂದೂವರೆ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಹುರಿಯಿರಿ.
8 ಹೂಕೋಸು ತುಂಡುಗಳು, 12 ಕ್ಯಾರೆಟ್ ತುಂಡುಗಳು, ಮೂರು ಚಮಚ ಬೀನ್ಸ್, ಕಾಲು ಕಪ್ ಆಲೂಗಡ್ಡೆ ತುಂಡುಗಳು ಮತ್ತು ಅರ್ಧ ಕಪ್ ನೀರು ಸೇರಿಸಿ. ಈಗ ಉರಿಯನ್ನು ಮಧ್ಯಮ ಉರಿಯಲ್ಲಿ ಇರಿಸಿ 12 ನಿಮಿಷ ಬೇಯಿಸಿಕೊಳ್ಳಿ.
ಬಳಿಕ ಟೊಮೆಟೊ ತುಂಡುಗಳು, ಎರಡು ಟೀಸ್ಪೂನ್ ಬಟಾಣಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ. ಅದೇ ರೀತಿ, ಒಂದು ಟೀಸ್ಪೂನ್ ಸಕ್ಕರೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಟೊಮೆಟೊ ಮೃದುವಾಗುವವರೆಗೆ ಹುರಿಯಿರಿ.
ಟೊಮೆಟೊ ಮತ್ತು ಬಟಾಣಿ ಬೆಂದ ಬಳಿಕ ಒಂದು ಗಂಟೆ ನೆನೆಸಿದ ಒಂದೂವರೆ ಕಪ್ ಬಾಸ್ಮತಿ ಅಕ್ಕಿಯನ್ನು ಸೇರಿಸಿ ಬೆರೆಸಿ ಸುಮಾರು ಐದು ನಿಮಿಷಗಳ ಕಾಲ ಬೇಯಿಸಿ.
ನಂತರ ಎರಡೂವರೆ ಕಪ್ ಬಿಸಿ ನೀರು, ಅರ್ಧ ನಿಂಬೆ ರಸ, ಕೆಲವು ಪುದೀನಾ ಎಲೆಗಳನ್ನು ಸೇರಿಸಿ ಮುಚ್ಚಿ. ಇನ್ನೊಂದು ಐದು ನಿಮಿಷ ಬೇಯಿಸಿ ಹಾಗೂ ಒಲೆ ಆಫ್ ಮಾಡಿ. ಇದೀಗ ರುಚಿಕರವಾದ ಉಡುಪಿ ಶೈಲಿಯ ವೆಜ್ ಪಲಾವ್ ಸವಿಯಲು ಸಿದ್ಧವಾಗಿದೆ.
ಇನ್ನಷ್ಟು ಓದಿರಿ :
ಬೆಂಗಳೂರಿನಲ್ಲಿ ರೋಜ್ಗಾರ್ ಮೇಳ ನೇಮಕಾತಿ ಪತ್ರ ವಿತರಣೆ