Belagavi News:
ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಉದ್ಯಮ ವಲಯದ ಮುಂದೆ ಭಾರತದ ಆರ್ಥಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಒತ್ತಿಹೇಳಿದ್ದಾರೆ. ಗುರುವಾರ ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಜಂಟಿಯಾಗಿ ಆಸ್ಟ್ರೇಲಿಯಾ - ಭಾರತ ಸಿಇಓ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಆಸ್ಟ್ರೇಲಿಯಾದ ಹೂಡಿಕೆದಾರರಿಗೆ ಅತ್ಯಂತ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ತಂದುಕೊಡುವ ಹೂಡಿಕೆ ತಾಣವಾಗಿದೆ ಎಂದು ಹೇಳಿದರು.
ಭಾರತದ ವೇಗದ ಆರ್ಥಿಕ ಬೆಳವಣಿಗೆ, ನೀತಿ ಸ್ಥಿರತೆ ಮತ್ತು ಸುಧಾರಿತ ಉದ್ಯಮ ಸ್ನೇಹಿ ವಾತಾವರಣವು ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಮೂಲಸೌಕರ್ಯ, ಉತ್ಪಾದನೆ, ತಂತ್ರಜ್ಞಾನ, ಹಸಿರು ಇಂಧನ, ಗಣಿಗಾರಿಕೆ ಹಾಗೂ ಡಿಜಿಟಲ್ ಆರ್ಥಿಕತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಸ್ಟ್ರೇಲಿಯಾ ಕಂಪನಿಗಳಿಗೆ ಅಪಾರ ಅವಕಾಶಗಳಿದ್ದು, ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳವಂತೆ ಅವರು ಕರೆ ನೀಡಿದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಆರ್ಥಿಕ ಪಾಲುದಾರಿಕೆ ನಿರಂತರವಾಗಿ ಬಲಗೊಳ್ಳುತ್ತಿದ್ದು, ಉಭಯ ದೇಶಗಳ ಉದ್ಯಮ ಸಮುದಾಯಗಳ ಸಹಭಾಗಿತ್ವವು ಹೊಸ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಜಾಗತಿಕ ಸವಾಲುಗಳ ನಡುವೆಯೂ ವಿಶ್ವಾಸ, ಸ್ಥಿರತೆ ಮತ್ತು ಪರಸ್ಪರ ಸಹಕಾರದ ಆಧಾರದ ಮೇಲೆ ಭಾರತ-ಆಸ್ಟ್ರೇಲಿಯಾ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಲಿವೆ ಎಂದು ಅವರು ಹೇಳಿದರು.
ಭಾರತದ ವಿಶಾಲ ಮಾರುಕಟ್ಟೆ ಮತ್ತು ಆಸ್ಟ್ರೇಲಿಯಾದ ಅತ್ಯಾಧುನಿಕ ತಂತ್ರಜ್ಞಾನ ಪರಿಣತಿ ಒಂದಾದರೆ ಉಭಯ ದೇಶಗಳಿಗೂ ಲಾಭದಾಯಕವಾದ ' ವಿನ್- ವಿನ್ ' ಸಹಭಾಗಿತ್ವ ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತ- ಆಸ್ಟ್ರೇಲಿಯಾ ನಡುವಿನ ಆರ್ಥಿಕ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸಲು ಪ್ರಸ್ತಾವಿತ " ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (CECA)" ವನ್ನು ಶೀಘ್ರದಲ್ಲೇ ಅಂತಿಮಗೊಳಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.
ಉಭಯ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ, ಹೂಡಿಕೆ ಮತ್ತು ನಾವೀನ್ಯತೆಗೆ ಈ ಒಪ್ಪಂದ ಹೊಸ ದಿಕ್ಕು ನೀಡಲಿದ್ದು, ಉದ್ಯಮಗಳಿಗೆ ಮತ್ತಷ್ಟು ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಮೋದಿ ಅಭಿಪ್ರಾಯ ಪಟ್ಟರು.
ಶಿಕ್ಷಣ ಕ್ಷೇತ್ರದಲ್ಲಿನ ಸಹಕಾರವನ್ನು ಪ್ರಸ್ತಾಪಿಸಿದ ಪ್ರಧಾನಿ, ಭಾರತದಲ್ಲಿ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು ಮತ್ತು ಅಂತರಾಷ್ಟ್ರೀಯ ಕ್ಯಾಂಪಸ್ ಗಳನ್ನು ಆರಂಭಿಸುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು. ಉನ್ನತ ಶಿಕ್ಷಣ, ಜಂಟಿ ಸಂಶೋಧನೆ, ಕೌಶಲ್ಯಾಭಿವೃದ್ಧಿ ಹಾಗೂ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳ ಮೂಲಕ ಉಭಯ ದೇಶಗಳ ಯುವ ಪ್ರತಿಭೆಗಳಿಗೆ ಜಾಗತಿಕ ಮಟ್ಟದ ಅವಕಾಶಗಳು ದೊರೆಯಲಿವೆ ಎಂದು ಅವರು ಹೇಳಿದರು.
ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಈ ಸಹಭಾಗಿತ್ವವು ಭಾರತ-ಆಸ್ಟ್ರೇಲಿಯಾ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ, ಭವಿಷ್ಯದ ಜಾಗತಿಕ ಆರ್ಥಿಕತೆಗೆ ಅಗತ್ಯವಿರುವ ನುರಿತ ಮಾನವ ಸಂಪಲ್ಮೂಲವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
Also Read: