Balagavi News:
ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಮಾಜಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಪ್ರಕರಣದ ವಿಚಾರಣೆಯನ್ನು ಬೇಸಿಗೆ ರಜೆ ನಂತರ ನಿಗದಿಪಡಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.
ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ಅಮಾನತ್ತಿನಲ್ಲಿಡಬೇಕು ಎಂದು ಕೋರಿ ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿಯ ರಾಚಯ್ಯ ಅವರಿಂದ ವಿಭಾಗಿಯ ಪೀಠ ನಡೆಸಿತು.
ಇನ್ನು ಇದಕ್ಕೂ ಮುನ್ನ ನಡೆದ ವಾದ ಪ್ರತಿವಾದದಲ್ಲಿ ಅರ್ಜಿದಾರರ ಪರ ವಕೀಲರು, ಸಿಬಿಐ ಪರ ವಕೀಲರು ಇನ್ನೂ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ತಿಳಿಸಿದರು. ಜೊತೆಗೆ, ವಿನಯ್ ಕುಲಕರ್ಣಿಗೆ ಶಿಕ್ಷೆ ಆಗಿರುವ ಹಿನ್ನೆಲೆಯಲ್ಲಿ ಶಾಸಕ ಸ್ಥಾನ ಕಳೆದುಕೊಂಡಿದ್ದು, ಮಧ್ಯಂತರ ಚುನಾವಣೆ ನಡೆಯದಂತೆ ತಡೆ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಬಿಐ ಪರ ವಕೀಲರು, ಆಕ್ಷೇಪಣೆ ಸಿದ್ಧವಾಗಿದ್ದು ಇಂದು ಸಲ್ಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಎರಡು ಪಕ್ಷಗಳ ವಾದಗಳನ್ನು ಆಲಿಸಿದ ಹೈಕೋರ್ಟ್ ಅರ್ಜಿಯ ಮುಂದಿನ ವಿಚಾರಣೆಯನ್ನು ರಜೆ ನಂತರಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: 2016ರಲ್ಲಿ ನಡೆದಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ (ವಿಶೇಷ ನ್ಯಾಯಾಲಯ) ನ್ಯಾಯಾಲಯವು 17 ಮಂದಿ ಆರೋಪಿಗಳನ್ನು 2026ರ ಎ.15ರಂದು ಅಪರಾಧಿಗಳು ಎಂದು ನಿರ್ಧರಿಸಿ, ಏಪ್ರಿಲ್ 17ರಂದು ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ರದ್ದು ಮಾಡಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕೊಲೆ ಪ್ರಕರಣದಲ್ಲಿ ಮಾಜಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಏಪ್ರಿಲ್ 15ರಂದು ಜನಪ್ರತಿನಿಧಿಗಳ ವಿಶೇಷ ಎಲ್ಲವೂ ಜೀವಾವಧಿ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ, ಜನಪ್ರತಿನಿಧಿ ಕಾಯ್ದೆ ಪ್ರಕಾರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಶಿಕ್ಷೆ ಪ್ರಕಟವಾದ ದಿನಾಂಕದಿಂದಲೇ ಅನರ್ಹತೆ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದ್ದು, ಈ ಅನರ್ಹತೆ ಶಿಕ್ಷೆಯ ಅವಧಿ ಮುಗೀತು ಬಿಡುಗಡೆಗೊಂಡ ಬಳಿಕವೂ ಇನ್ನೂ ಆರು ವರ್ಷಗಳವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ವಿನಯ್ ಕುಲಕರ್ಣಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುವುದಿಲ್ಲ.
ಜನಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 8ರ ಪ್ರಕಾರ, ಯಾವುದೇ ಶಾಸಕರಿಗೆ ಅಪರಾಧ ಪ್ರಕರಣದಲ್ಲಿ ಕನಿಷ್ಠ ಎರಡು ವರ್ಷ ಶಿಕ್ಷೆ ವಿಧಿಸಲಾದರೆ ಅವರು ಸ್ವಯಂಚಾಲಿತವಾಗಿ ಅನರ್ಹರಾಗುತ್ತಾರೆ ಆದರೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ , ಈ ಅನರ್ಹತಾ ಆದೇಶವನ್ನು ಮರು ಪರಿಶೀಲಿಸುವ ಸಾಧ್ಯತೆ ಇರುತ್ತದೆ.
Also Read:
7-ಸೀಟರ್ SUV ಕಾರುಗಳ ಹಬ್ಬ: ಕುಟುಂಬಗಳಿಗೆ ದೊಡ್ಡ ಆಫರ್ ಗಳು ಸಿದ್ದ