BELAGAVI NEWS :
ವಾಣಿಜ್ಯ ನಗರಿ, ಹುಬ್ಬಳ್ಳಿಯಲ್ಲಿ ಪಾದಚಾರಿಗಳು ವ್ಯಾಪಾರ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರ ಹೋರಾಟಕ್ಕೆ ತೀವ್ರ ಅಡಚಣೆಯ ಉಂಟಾಯಿತು. ಫುಟ್ಪಾತ್ ಗಳನ್ನು ಅತಿಕ್ರಮಿಸಿಕೊಂಡು ಡಬ್ಬ ಅಂಗಡಿಗಳು ಹಾಗೂ ತಾತ್ಕಾಲಿಕ ವ್ಯಾಪಾರ ಮಳಿಗೆಗಳನ್ನು ಸ್ಥಾಪಿಸಿದ್ದರಿಂದ ಪಾದಚಾರಿಗಳು ರಸ್ತೆ ಮೇಲೆ ಸಂಚರಿಸುವ ಅನಿವಾರ್ಯತೆ ಎದುರಿಸುತ್ತಿದ್ದರು. ಈ ಕುರಿತು ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ "ಆಪರೇಷನ್ ಫುಟ್ ಪಾತ್" ಹೆಸರಿನಲ್ಲಿ ವಿಶೇಷ ತೆರವು ಕಾರ್ಯಾಚರಣೆಯನ್ನು ಆರಂಭಿಸಿದೆ.
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ ಅವರ ನಿರ್ದೇಶನದ ಮೇರೆಗೆ ಪಾಲಿಕೆ ಅಧಿಕಾರಿಗಳು ನಗರ ಪ್ರಮುಖ ರಸ್ತೆಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಅತಿಕ್ರಮ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡು ನಿರ್ಮಿಸಲಾಗಿದ್ದ ಡಬ್ಬ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಫುಟ್ ಪಾತ್ ಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಮುಂದುವರೆಯಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಕೊಪ್ಪಿಕರ್ ರಸ್ತೆ, ಗೋಕುಲ ರಸ್ತೆ, ಬ್ರಾಡ್ ವೇ, ಮರಾಠಾಗಲ್ಲಿ, ದುರ್ಗದ ಬೈಲ್, ಶಹಾ ಬಜಾರ್, ಸಿಬಿಟಿ ಸೇರಿ ವಿವಿಧಡೆ ಪಾದಚಾರಿ ಮಾರ್ಗಗಳನ್ನು ಅಕ್ರಮಿಸಿಕೊಂಡು ಬಟ್ಟೆ, ಅಲಂಕಾರಿಕ ವಸ್ತು, ಚಪ್ಪಲಿ ಹಾಗೂ ಇನ್ನಿತರ ವಸ್ತುಗಳ ಮಾರಾಟಕ್ಕೆ ಇಟ್ಟಿದ್ದ ಗೂಡಂಗಡಿಗಳನ್ನು ತೆರವು ಮಾಡಲಾರಂಭಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸಲಾಗುತ್ತಿದ್ದ ಪರಿಣಾಮ ಸಂಚಾರ ದಟ್ಟಣೆ ಹೆಚ್ಚುವುದರ ಜೊತೆಗೆ ಸಾರ್ವಜನಿಕರು ಹಾಗೂ ಪಾದಚಾರಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ನಗರದಲ್ಲಿ ಫುಟ್ ಪಾತ್ ಗಳ ಮೇಲೆಯೇ ಡಬ್ಬಾ ಅಂಗಡಿಗಳು ಮತ್ತು ತಾತ್ಕಾಲಿಕ ವ್ಯಾಪಾರ ಮಳಿಗೆಗಳು ತಲೆಯೆತ್ತಿದ್ದರಿಂದ ಪಾದ ಚಾರಿಗಳು ರಸ್ತೆ ಗಿಳಿದು ಸಂಚರಿಸುವ ಪರಿಸ್ಥಿತ
ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವ್ಯಾಪಕ ಅತಿಕ್ರಮ ತೆರವು ಕಾರ್ಯಾಚರಣೆಗೆ ಮುಂದಾಗಿದೆ.
ನಗರದ ಎಲ್ಲಾ 12 ವಲಯಗಳ ಕಚೇರಿ ವ್ಯಾಪ್ತಿಗಳಲ್ಲಿಯೂ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಈಗಾಗಲೇ 300ಕ್ಕೂ ಹೆಚ್ಚು ಡಬ್ಬ ಅಂಗಡಿಗಳನ್ನು ತೆರೆವುಗೊಳಿಸಲಾಗಿದೆ. ಸಾರ್ವಜನಿಕರ ಸುಗಮ ಸಂಚಾರ ಹಾಗೂ ಪಾದ ಚಾರಿಗಳ ಸಂರಕ್ಷಣೆಗಾಗಿ ಈ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಲು ಪಾಲಿಕೆ ನಿರ್ಧರಿಸಿದೆ.
ಈ ಕುರಿತು ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಸಿದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ, ಪಾದಚಾರಿ ರಸ್ತೆ ತೆರವು ಕಾರ್ಯಾಚರಣೆ ಜೋನಲ್ ಕಮಿಷನರ್ ಗಳ ನೇತೃತ್ವದಲ್ಲಿ ನಡೆಯಲಿದ್ದು, ಮೊದಲ ನಾಲ್ಕು ತಿಂಗಳುಗಳ ಕಾಲ ಪ್ರತಿ ವಾರ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ನಂತರ 15 ದಿನಗಳಿಗೊಮ್ಮೆ ನಿರಂತರವಾಗಿ ತೆರವು ಕಾರ್ಯಚರಣೆಯ ಮುಂದುವರಿಸಲಾಗುವುದು ಎಂದರು. ಕೆಲವೇಡೆ ವ್ಯಾಪಾರಸ್ಥರಿಂದ ವಿರೋಧ ವ್ಯಕ್ತವಾಗುತ್ತಿರುವುದು ಗಮನಕ್ಕೆ ಬಂದಿದ್ದು, ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ಯಾವುದೇ ಅಡಚಣೆ ಇಲ್ಲದೆ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ನಗರದ ಪಾದಾಚಾರಿ ಮಾರ್ಗಗಳನ್ನು ಸಾರ್ವಜನಿಕರ ಬಳಕೆಗೆ ಮರಳಿ ಒದಗಿಸುವ ಉದ್ದೇಶದಿಂದ ಆರಂಭಗೊಂಡಿರುವ ಆಪರೇಷನ್ ಫುಟ್ ಪಾತ್ ಅಭಿಯಾನವು ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯಾಪಕವಾಗಿ ಜಾರಿಯಾಗಲಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕೈಗೊಂಡಿರುವ ಪುಟ್ ಪಾತ್ ಅತಿಕ್ರಮಣ ಸಾರ್ವಜನಿಕರಿಂದ ವ್ಯಾಪಕ ಮೆಚ್ಚಿಗೆ ವ್ಯಕ್ತವಾಗಿದೆ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡು ನಡೆಯುತ್ತಿದ್ದ ವ್ಯಾಪಾರ ಚಟುವಟಿಕೆಗಳಿಂದ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಇದೀಗ ಪಾಲಿಕೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮದಿಂದ ಸಾರ್ವಜನಿಕರಲ್ಲಿ ಸಂತಸ ಮೂಡಿದೆ.
ಸ್ಥಳೀಯ ನಿವಾಸಿ ಅಪ್ಪಣ್ಣ ನದಾಫ್ ಮಾತನಾಡಿ, ಪುಟ್ ಪಾತ್ ಅತಿಕ್ರಮಣ ತೆರವುಗೊಳಿಸುವುದು ಮಹಾನಗರ ಪಾಲಿಕೆಯ ಅತ್ಯುತ್ತಮ ನಿರ್ಧಾರವಾಗಿದೆ ಎಂದು ಅಭಿಪ್ರಾಯಪಟ್ಟರು. ವ್ಯಾಪಾರಸ್ಥರಿಗೆ ವ್ಯವಹಾರ ನಡೆಸಲು ಪಾಲಿಕೆಯಿಂದ ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸಲಾಗಿದ್ದರು, ಕೆಲವರು ಪಾದ ಚಾರಿಮಾರ್ಗಗಳ ಮೇಲೆ ಅಂಗಡಿಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದರು ಎಂದು ಹೇಳಿದರು.
ವಾರಕೊಮ್ಮೆ ನಿಯಮಿತವಾಗಿ ತೆರವು ಕಾರ್ಯಾಚರಣೆ ನಡೆಸುವ ನಿರ್ಧಾರ ಸ್ವಾಗತರವಾಗಿದ್ದು, ಇದರಿಂದ ನಗರದ ಸೌಂದರ್ಯ ಹೆಚ್ಚುವುದರ ಜೊತೆಗೆ ಸ್ವಚ್ಛತೆ ಮತ್ತು ಸುಗಮ ಸಂಚಾರಕ್ಕೂ ನೆರವಾಗಲಿದೆ ಎಂದು ಅವರು ತಿಳಿಸಿದರು. ಈ ಹಿಂದೆ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಮಣಿವಣ್ಣನ್ ಅವರ ಅವಧಿಯಲ್ಲಿಯೂ ಇಂತಹ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಆಯುಕ್ತ ಡಾ. ರುದ್ರೇಶ್ ಘಾಳಿ ಅವರ ನೇತೃತ್ವದಲ್ಲಿ ಮತ್ತೆ ಪರಿಣಾಮಕಾರಿ ಕಾರ್ಯಾಚರಣೆ ನಡೆಸುತ್ತಿರುವುದು ಶ್ಲಾಘನೀಯ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.