Belagavi News:
ಬೆಂಗಳೂರು: ಮೇ 15 ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಸಾಮಾನ್ಯ ಜನರಿಗೆ ಖಾಸಗಿ ಬಸ್ ಮಾಲೀಕರು ಮತ್ತೊಂದು ಶಾಕ್ ನೀಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಹಿನ್ನೆಲೆ, ಇಂದಿನ ಮಧ್ಯರಾತ್ರಿಯಿಂದಲೇ ಖಾಸಗಿ ಬಸ್ ಟಿಕೆಟ್ ದರಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಶೇಕಡ 20 ರಿಂದ 30ರಷ್ಟು ದರ ಏರಿಕೆ ಮಾಡಲಾಗುವುದು ಎಂದು ತಿಳಿದುಬಂದಿದೆ.
ಬೆಲೆ ಏರಿಕೆಯ ಅಬ್ಬರದಿಂದ ಈಗಾಗಲೇ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಈ ಹೊಸದರ ಹೆಚ್ಚಳ ಮತ್ತಷ್ಟು ಹೊರೆತಂದಿದೆ. ದಿನನಿತ್ಯ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರ ಮೇಲೆ ಇದರ ನೇರ ಪರಿಣಾಮ ಬೀರುವ ಸಾದ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಡೀಸೆಲ್ ಬೆಲೆ ಏರಿಕೆಯಿಂದ ಬಸ್ ಮಾಲೀಕರ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿರುವುದರಿಂದ ಈ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಬಸ್ ಸಂಘಟನೆಗಳು ತಿಳಿಸಿವೆ.
ಈ ಬೆಲೆ ಏರಿಕೆ ಈಗಾಗಲೇ ಜೀವನ ವೆಚ್ಚದಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಮತ್ತೊಮ್ಮೆ ಆರ್ಥಿಕ ಹೊರೆಯಾಗಲಿದೆ. ಕರ್ನಾಟಕದಾದ್ಯಂತ ಲಕ್ಷಾಂತರ ಪ್ರಯಾಣಿಕರ ಮೇಲೆ ಇದರ ನೇರ ಪರಿಣಾಮ ಬೀರುವ ಸಾದ್ಯತೆ ಇದೆ.
ಮುಖ್ಯಾಂಶಗಳು:
ಬೆಲೆ ಏರಿಕೆಯಿಂದ ತತ್ತರಿಸಿಸುವ ಸಾರ್ವಜನಿಕರಿಗೆ ಮತ್ತೊಂದು ಶಾಕ್
ಇಂದು ಮಧ್ಯರಾತ್ರಿಯಿಂದ ಖಾಸಗಿ ಬಸ್ ಗಳ ಟಿಕೆಟ್ ದರವು ಹೆಚ್ಚಳ
ಶೇ.20 - 30ರಷ್ಟು ದರ ಏರಿಕೆ ಬಗ್ಗೆ ಮಾಹಿತಿ ನೀಡಿದ ಬಸ್ ಮಾಲಕರು
ಖಾಸಗಿ ಬಸ್ ಮಾಲೀಕರು ಹೇಳುವುದೇನು ?
ಪ್ರತಿ ಬಸ್ ಗೆ ದಿನಕ್ಕೆ ಕನಿಷ್ಠ 150 ಲೀಟರ್ ಡೀಸೆಲ್ ಹಾಕಲಾಗುತ್ತದೆ. ಇಂಧನ ಬೆಲೆಯಲ್ಲಿ 3 ರೂಪಾಯಿ ಏರಿಕೆಯಾದ ಕಾರಣ ದಿನಕ್ಕೆ ಸುಮಾರು 450 ರೂಪಾಯಿ ಹೆಚ್ಚುವರಿ ವೆಚ್ಚವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಹೆಚ್ಚುವರಿ ವೆಚ್ಚವನ್ನು ಭರಿಸುವುದು ಕಷ್ಟವಾಗಿರುವುದರಿಂದ ಟಿಕೆಟ್ ದರಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ತಿಳಿಸಿದ್ದಾರೆ. ಈ ನಿರ್ಧಾರದ ಪರಿಣಾಮ ನೇರವಾಗಿ ಪ್ರಯಾಣಿಕರ ಮೇಲೆಯೇ ಬೀಳಲಿದೆ ಎಂದು ಅವರು ಹೇಳಿದ್ದಾರೆ.
ಇನ್ನೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕುರಿತು ಇಂದು (ಮೇ 15) ಬೆಳಿಗ್ಗೆಯೇ ತೈಲ ಕಂಪನಿಗಳು ಅಧಿಕೃತವಾಗಿ ಘೋಷಣೆ ಮಾಡಿದ್ದವು.
ಪೆಟ್ರೋಲ್ ಮತ್ತು ಡೀಸೆಲ್ ಎರಡು ಲೀಟರ್ ಗೆ 3 ರೂಪಾಯಿಗೂ ಹೆಚ್ಚು ಏರಿಕೆ ಕಂಡಿದ್ದು, ಅದರಂತೆ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಗೆ 3.27 ರೂಪಾಯಿ ಹೆಚ್ಚಳವಾಗಿದೆ. ಡೀಸೆಲ್ ದರವು ಲೀಟರ್ ಗೆ 3.12 ರೂಪಾಯಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಇದೇ ಬೆನ್ನಲ್ಲೇ ದೇಶಾದ್ಯಂತ ಸಿಎನ್ ಜಿ (CNG) ದರವನ್ನು ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಿರುವುದಾಗಿ ಘೋಷಿಸಲಾಗಿದೆ.
ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಹಾಗೂ ಜಾಗತಿಕ ಸರಬರಾಜು ಸರಪಳಿಯನ್ನು ಅಡಚಣೆ ಉಂಟಾಗಿರುವುದು ಈ ದರ ಏರಿಕೆಗೆ ಪ್ರಮುಖ ಕಾರಣಗಳಾಗಿ ಉಲ್ಲೇಖಿಸಲಾಗಿದೆ.
Also Read:
ಮೋದಿ ಕರೆ ಬಳಿಕ ದೊಡ್ಡ ನಿರ್ಧಾರ : ಬೆಂಗಾವಲು ವಾಹನ ಕೈಬಿಟ್ಟ ಸಚಿವ ವಿ.ಸೋಮಣ್ಣ