belagavi news :
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ ಚೊಚ್ಚಲ ಚಿತ್ರ 'ಮ್ಯಾಂಗೋ ಪಚ್ಚ' ತೆರೆ ಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿ ನತ್ತ ಸಾಗುತ್ತಿದ್ದು, ಚಿತ್ರತಂಡವು ಸಂಭ್ರಮಾಚರಣೆ ನಡೆಸಿದೆ.
ಚಿತ್ರದ ಯಶಸ್ಸಿನ ನಡುವೆಯೇ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ನೆಪೋಟಿಸಂ ಚರ್ಚೆ ಗರಿಗೆದರಿದೆ. ತಮ್ಮ ಸ್ವಂತ ಮಗನಂತೆ ಸಂಚಿತ್ ಅವರನ್ನು ಬೆಳೆಸುತ್ತಿರುವ ಸುದೀಪ್, ಚಿತ್ರದ ಪ್ರಮೋಷನ್ ನಿಂದ ಆರಂಭಿಸಿ ರಿಲೀಸ್ ದಿನದವರೆಗೂ ಬಾರಿ ಬೆಂಬಲ ನೀಡಿದ್ದಾರೆ. ಫ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸಂಚಿತ್ ಅವರನ್ನು ಪರಿಚಯಿಸುವುದರಿಂದ ಹಿಡಿದು, ಪ್ರಚಾರ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಕಿಚ್ಚ, ಮೊದಲ ದಿನದ ಮಾರ್ನಿಂಗ್ ಶೋಗೆ ಕುಟುಂಬದೊಂದಿಗೆ ಹಾಜರಾಗುವ ಮೂಲಕ ಸಂಪೂರ್ಣ ಸಾಥ್ ನೀಡಿದ್ದಾರೆ.
ಈ ಬೆಂಬಲದ ಹಿನ್ನೆಲೆಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಸುದೀಪ್ ಅವರಿಗೆ ನೆಪೋಟಿಸಂ ಕುರಿತು ಪ್ರಶ್ನೆ ಎದುರಾಗಿದ್ದು, ಅದಕ್ಕೆ ಅವರು ನೀಡಿದ ಉತ್ತರ ಇದೀಗ ಕರುನಾಡಿನಾದ್ಯಂತ ಚರ್ಚೆಗೆ ಕಾರಣವಾಗಿದೆ. ಕಿಚ್ಚನ ಸ್ಪಷ್ಟ ಮತ್ತು ತೀಕ್ಷ್ಣ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ವಿಷಯ ಮತ್ತೆ ಸಿನಿಮಾ ವಲಯದಲ್ಲಿ ದೊಡ್ಡ ಸಂವಾದಕ್ಕೆ ವೇದಿಕೆ ಕಲ್ಪಿಸಿದೆ.
ನೆಪೋಟಿಸಂ ಬಗ್ಗೆ ಡಾ. ರಾಜಕುಮಾರ್ ಮಕ್ಕಳಿಗೆ ಏಕೆ ಪ್ರಶ್ನೆ ಎತ್ತಲಿಲ್ಲ?" ಎಂದು ಸುದೀಪ್ ಪ್ರಶ್ನಿಸಿದರು. ಈ ಒಂದು ಹೇಳಿಕೆ ಪರ ವಿರೋಧ ಚರ್ಚೆಯನ್ನು ಹುಟ್ಟು ಹಾಕಿತು. ಸಿನಿಮಾ ಮತ್ತು ಕಲಾವಿದರ ಯಶಸ್ಸು ಪ್ರೇಕ್ಷಕರ ಕೈಯಲ್ಲಿದೆ ಅನ್ನೋದು ಗೊತ್ತಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ನೆಪೋಟಿಸಂ ಡಿಬೆಟ್ ಆಗಾಗ್ಗೆ ಸದ್ದು ಮಾಡುತ್ತಲೇ ಇದ್ದು, ಸದ್ಯ ಸುದೀಪ್ ಹೇಳಿಕೆಗೆ ಸ್ವತಃ ಶಿವರಾಜ್ ಕುಮಾರ್ ಉತ್ತರಿಸಿದ್ದಾರೆ.
'ಮ್ಯಾಂಗೋ ಪಚ್ಚ' ಸಿನಿಮಾ ವೀಕ್ಷಿಸಿದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಜೋರಾದ ನೆಪೋಟಿಸಂ ಚರ್ಚೆಯ ಕುರಿತು ನಟ ಶಿವರಾಜ್ ಕುಮಾರ್ ಅವರಿಗೆ ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಶ್ನೆ ಕೇಳುತ್ತಿದ್ದಂತೆ ಅಚ್ಚರಿಗೊಂಡ ಶಿವರಾಜಕುಮಾರ್, "ಈ ಪ್ರಶ್ನೆ ಏಕೆ ಬಂತು?" ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ. ಬಳಿಕ ಅವರು, "ಈ ರೀತಿಯ ಪ್ರಶ್ನೆ ಕೇಳಬೇಕಾದ ಅಗತ್ಯವೇನು? ಎಲ್ಲ ಮನುಷ್ಯನಿಗೂ ಕನಸು ಕಾಣುವ ಹಕ್ಕಿದೆ. ಇವರ ಮಕ್ಕಳು, ಅವರ ಮಕ್ಕಳೆಂದು ಮಾತ್ರ ಕನಸು ಕಾಣಬೇಕು ಅಂತಾ ಅಲ್ಲ,"ಎಂದು ಹೇಳಿದ್ದಾರೆ.
ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಮತ್ತೆ ನೆಪೋಟಿಸಂ ಕುರಿತು ಚರ್ಚೆಗೆ ಕಾರಣವಾಗಿದೆ.
ಇದೇ ವೇಳೆ 'ಮ್ಯಾಂಗೋ ಪಚ್ಚ' ಸಿನಿಮಾ ತೆರೆಕಂಡ ದಿನ ಬೆಂಗಳೂರಿನ ಸಂತೋಷ್ ಥಿಯೇಟರ್ ಗೆ ಕಿಚ್ಚ ಸುದೀಪ್, ಪತ್ನಿ ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿ ಭೇಟಿ ನೀಡಿ ಚಿತ್ರ ತಂಡಕ್ಕೆ ಬೆಂಬಲ ನೀಡಿದ್ದಾರೆ.
ಸಂಚಿತ್ ಸಂಜೀವ್ ಅವರ ಜೊತೆಗೆ ಕಾಜಲ್ ಕುಂದರ್, ಮಯೂರ್ ಪಟೇಲ್, ಮ್ಯಾಕ್ಸ್ ಮಂಜು, ಹರಿಣಿ ಶ್ರೀಕಾಂತ್, ಭಾವನಾ, ವಿಜಯ್ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ಹಂಸ ಹಾಗೂ ಪ್ರಶಾಂತ್ ಹಿರೇಮಠ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣ ವಿಶೇಷತೆ ನೀಡಿದೆ.
ಈ ಸಿನಿಮಾ 2001 ರಿಂದ 2011ರ ನಡುವೆ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಕೆ.ಆರ್.ಜಿ ಸ್ಟುಡಿಯೋಸ್ ಹಾಗೂ ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿದೆ.
Also Read:
23 ಪಕ್ಷಗಳು ಒಂದೇ ವೇದಿಕೆಯಲ್ಲಿ: ಇಂದು INDIA ಕೂಟದ 'ಜನಬಂಧನ್' ಮಹಾಸಭೆ