ಅಭ್ಯಾಸಕ್ಕೆ ಬಾರದ ಶುಭ್ಮನ್ ಗಿಲ್; ಎರಡನೇ ಪಂದ್ಯದಿಂದ ಔಟ್?
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ವೇಳೆ ಕತ್ತು ಗಾಯಕ್ಕೆ ತುತ್ತಾದ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಎರಡನೇ ಟೆಸ್ಟ್ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.
Shubman Gill Injury Update:
ಅಂದೇ ರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿರಿಸಿ ಪರೀಕ್ಷೆ ನಡೆಸಲಾಗಿದೆ. ಕೆಲಸದ ಹೊರೆಯಿಂದಲ್ಲ, ನಿದ್ರೆಯ ಕೊರತೆಯಿಂದಾಗಿ ಕುತ್ತಿಗೆಯಲ್ಲಿ ಸ್ನಾಯು ಸೆಳೆತ ಕಂಡು ಬಂದಿದೆ ಎಂದು ಬೌಲಿಂಗ್ ಕೋಚ್ ಮೋರ್ನೆ ಮಾರ್ಕೆಲ್ ತಿಳಿಸಿದ್ದರು. ಇದೀಗ ಗಿಲ್ ಆಸ್ಪತ್ರೆಯಿಂದ ಬಿಡುಗಡೆಗೊಂಡರೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಶುಭ್ಮನ್ ಗಿಲ್ ಗಾಯಗೊಂಡಿದ್ದರು. ದಕ್ಷಿಣ ಆಫ್ರಿಕಾದ ಸೈಮನ್ ಹಾರ್ಮರ್ ಅವರ ಬೌಲಿಂಗ್ನಲ್ಲಿ ಸ್ವೀಪ್ ಶಾಟ್ ಆಡುತ್ತಿದ್ದಾಗ ಗಾಯವಾಗಿತ್ತು. ಕುತ್ತಿಗೆಯಲ್ಲಿ ಸ್ನಾಯು ಸೆಳೆತ ಕಂಡುಬಂದು, ಕೂಡಲೇ ಅವರನ್ನು ಮೈದಾನದಿಂದ ಕರೆದುಕೊಂಡು ಹೋಗಲಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 3 ಎಸೆತ ಎದುರಿಸಿದ್ದ ಗಿಲ್ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಬರಲು ಸಾಧ್ಯವಾಗಲಿಲ್ಲ. ಗಿಲ್ ಗಾಯಗೊಂಡಿದ್ದು ತಂಡದ ಮೇಲೂ ಪರಿಣಾಮ ಬೀರಿತು.
ರಿಷಭ್ ಪಂತ್ ಎರಡನೇ ಟೆಸ್ಟ್ನಲ್ಲಿ ತಂಡ ಮುನ್ನಡೆಸುವ ಸಾಧ್ಯತೆಯಿದೆ. ಆದರೆ, ಬಿಸಿಸಿಐ ಇಲ್ಲಿಯವರೆಗೆ ಈ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಎರಡನೇ ಟೆಸ್ಟ್ ಸಂದರ್ಭದಲ್ಲಿ ತಂಡದ ಯುವ ಕ್ರಿಕೆಟಿಗರಾದ ಧ್ರುವ್ ಜುರೆಲ್, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್, ಸಾಯಿ ಸುದರ್ಶನ್ ಮತ್ತು ಇತರರು ನೆಟ್ಸ್ನಲ್ಲಿ ಬೆವರು ಹರಿಸಿದ್ದಾರೆ.
ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಪೇಸ್ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಗಿಲ್ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಗಿಲ್ ಸ್ಥಾನದಲ್ಲಿ ಸಾಯಿ ಸುದರ್ಶನ್ ಬ್ಯಾಟಿಂಗ್ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಟೀಮ್ ಇಂಡಿಯಾ ಮೊದಲ ಪಂದ್ಯವನ್ನು 30 ರನ್ಗಳಿಂದ ಸೋತು ಎರಡು ಟೆಸ್ಟ್ಗಳ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶನಿವಾರ (ನವೆಂಬರ್ 22) ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದೆ. ಟೀಮ್ ಇಂಡಿಯಾ ಕ್ರಿಕೆಟಿಗರು ಈಗಾಗಲೇ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಆದರೆ, ಶುಭಮನ್ ಗಿಲ್ ಅಭ್ಯಾಸದ ಅವಧಿಯಲ್ಲಿ ಭಾಗವಹಿಸಿಲ್ಲ ಎಂದು ವರದಿಗಳಾಗಿವೆ. ಇದರೊಂದಿಗೆ ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ. ತಂಡದೊಂದಿಗೂ ಅವರು ಗುವಾಹಟಿಗೆ ತೆರಳಿಲ್ಲ ಎಂದೂ ಹೇಳಲಾಗುತ್ತಿದೆ.
ಇನ್ನಷ್ಟು ಓದಿರಿ :
ಡಿಸೆಂಬರ್ ತಿಂಗಳಲ್ಲಿ ಡ್ರ್ಯಾಗನ್ ಫ್ರೂಟ್!: ಸೀಸನ್ ಮುಗಿದ ನಂತರವೂ ಫಸಲು ತೆಗೆಯುತ್ತಿರುವ ರೈತ