Belagavi News :
ನವದೆಹಲಿ: ಮೂರು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸುವ ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರಿಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಹಾಗೂ ಅದ್ದೂರಿ ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ತಕೈಚಿ ಅವರು ತಮ್ಮ ತಮ್ಮ ದೇಶಗಳ ಕೇಂದ್ರ ಸಚಿವರು ಹಾಗೂ ರಾಜತಾಂತ್ರಿಕ ನಿಯೋಗದ ಪ್ರಮುಖ ಸದಸ್ಯರನ್ನು ಪರಸ್ಪರ ಅತ್ಯಂತ ಗೌರವಪೂರ್ವಕವಾಗಿ ಪರಿಚಯಿಸಿಕೊಂಡರು. ಉಭಯ ನಾಯಕರ ನಡುವಿನ ಈ ಆತ್ಮೀಯ ವಿನಿಮಯವು ಭಾರತ- ಜಪಾನ್ ದ್ವಿಪಕ್ಷೀಯ ಸಂಬಂಧಗಳಿಗೆ ಮತ್ತಷ್ಟು ಬಲ ನೀಡುವ ಕ್ಷಣವಾಗಿ ಗುರುತಿಸಲಾಗಿದೆ.
ಭೇಟಿಯ ವೇಳೆ ವಾಣಿಜ್ಯ, ಹೂಡಿಕೆ, ತಂತ್ರಜ್ಞಾನ ಮತ್ತು ಭದ್ರತಾ ಸಹಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಕುರಿತು ಪ್ರಾಥಮಿಕ ಚರ್ಚೆಗಳು ನಡೆದಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇಬ್ಬರು ನಾಯಕರು 16ನೇ ಭಾರತ- ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ರಕ್ಷಣೆ, ತಂತ್ರಜ್ಞಾನ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಈ ಮಹತ್ವದ ಶೃಂಗಸಭೆಯಲ್ಲಿ ಉಭಯ ದೇಶಗಳ ನಡುವೆ ಹೊಸ ಸಹಕಾರ ಯೋಜನೆಗಳು ಹಾಗೂ ಹೂಡಿಕೆ ಅವಕಾಶಗಳ ಕುರಿತು ವಿಸ್ತೃತ ಚರ್ಚೆ ನಡೆಯುವ ನಿರೀಕ್ಷೆಯಿದೆ. ರಕ್ಷಣಾ ಕೇಂದ್ರದಲ್ಲಿ ಸಹಕಾರ, ಉನ್ನತ ತಂತ್ರಜ್ಞಾನ ವಿನಿಮಯ ಹಾಗೂ ಆರ್ಥಿಕ ಸಂಬಂಧಗಳನ್ನು ಗಟ್ಟಿಗೊಳಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ.
ಈ ಐತಿಹಾಸಿಕ ಭೇಟಿ ಭಾರತ -ಜಪಾನ್ ನಡುವಿನ ವಿಶೇಷ ಜಾಗತಿಕ ಕಾರ್ಯತಂತ್ರದ ಸಂಬಂಧವನ್ನು ಮತ್ತಷ್ಟು ಬಲಪಡಿಸಿ, ಮುಂದಿನ ವರ್ಷಗಳಲ್ಲಿ ಉಭಯ ರಾಷ್ಟ್ರಗಳ ಸಹಕಾರಕ್ಕೆ ಹೊಸ ದಿಕ್ಕು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.