ರೂಲ್ಸ್ ಗೊತ್ತಿಲ್ದೆ ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಟೀಮ್ ಇಂಡಿಯಾ
India A vs Pakistan A: ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿಯ 6ನೇ ಪಂದ್ಯದಲ್ಲಿ ಪಾಕಿಸ್ತಾನ್ ಎ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು 19 ಓವರ್ಗಳಲ್ಲಿ 136 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು 13.2 ಓವರ್ಗಳಲ್ಲಿ ಚೇಸ್ ಮಾಡಿ ಪಾಕಿಸ್ತಾನ್ ಎ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ದೋಹಾದಲ್ಲಿ ನಡೆದ ಭಾರತ ಎ ಮತ್ತು ಪಾಕಿಸ್ತಾನ್ ಎ ನಡುವಣ ಟಿ20 ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪೊಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದ ಹುಟ್ಟಿಕೊಳ್ಳಲು ಮುಖ್ಯ ಕಾರಣ ಹೊಸ ನಿಯಮ. ಈಸ್ಟ್ ಎಂಡ್ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 19 ಓವರ್ಗಳಲ್ಲಿ 136 ರನ್ಗಳಿಸಿ ಆಲೌಟ್ ಆಗಿತ್ತು.
ಸುಯಶ್ ಶರ್ಮಾ ಎಸೆದ 10ನೇ ಓವರ್ನ ಮೊದಲ ಎಸೆತವನ್ನು ಮಾಝ್ ಸದಾಖತ್ ಲಾಂಗ್ ಆಫ್ನತ್ತ ಬಾರಿಸಿದ್ದರು. ಆದರೆ ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ನೆಹಾಲ್ ವಧೇರಾ ಅದ್ಭುತವಾಗಿ ಚೆಂಡನ್ನು ಹಿಡಿದರು.
137 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ ಎ ತಂಡಕ್ಕೆ ಮಾಝ್ ಸದಾಖತ್ ಭರ್ಜರಿ ಆರಂಭ ಒದಗಿಸಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮಾಝ್ ವಿಕೆಟ್ ಪಡೆಯುವಲ್ಲಿ ಕೊನೆಗೂ ಸುಯಶ್ ಶರ್ಮಾ ಯಶಸ್ವಿಯಾಗಿದ್ದರು.
ಇದಾಗ್ಯೂ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಫೀಲ್ಡ್ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಈ ವೇಳೆ ಅಂಪೈರ್ ಭಾರತೀಯ ಆಟಗಾರರಿಗೆ ಹೊಸ ನಿಯಮದ ಬಗ್ಗೆ ಪಾಠ ಮಾಡಿದ್ದಾರೆ.
ಕ್ಯಾಚ್ ಹಿಡಿದ ಬಳಿಕ ನಿಯಂತ್ರಣ ಕಳೆದುಕೊಂಡ ವಧೇರಾ ಬೌಂಡರಿ ಲೈನ್ ದಾಟಿದರು. ಅಷ್ಟರಲ್ಲಾಗಲೇ ಸಹ ಆಟಗಾರ ನಮನ್ ಧೀರ್ಗೆ ನೇಹಾಲ್ ವಧೇರಾ ಚೆಂಡನ್ನು ನೀಡಿದ್ದಾರೆ. ಇತ್ತ ಬೌಂಡರಿ ಲೈನ್ ಕ್ಯಾಚ್ನೊಂದಿಗೆ ಮಾಝ್ ಸದಾಖತ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದರು. ಟೀಮ್ ಇಂಡಿಯಾ ಆಟಗಾರರು ಕೂಡ ಸಂಭ್ರಮಿಸಿದರು.
ಆದರೆ ಕ್ಯಾಚ್ ಪರಿಶೀಲಿಸಿದ ಮೂರನೇ ಅಂಪೈರ್ ನಾಟೌಟ್ ಎಂದಿದ್ದಾರೆ. ಇತ್ತ ನೆಹಾಲ್ ವಧೇರಾ ತನ್ನ ಕಾಲು ಬೌಂಡರಿ ಲೈನ್ಗೆ ತಾಗಿಲ್ಲ ಎಂಬ ವಾದವನ್ನು ಫೀಲ್ಡ್ ಅಂಪೈರ್ ಮುಂದಿಟ್ಟಿದ್ದರು. ಬೌಂಡರಿ ಲೈನ್ ಚೆಕ್ಕಿಂಗ್ ವೇಳೆಯೂ ವಧೇರಾ ಅವರ ಕಾಲು ಲೈನ್ಗೆ ತಾಗಿಲ್ಲ ಎಂಬುದು ಸ್ಪಷ್ಟವಾಗಿತ್ತು.
ಐಸಿಸಿಯ ಹೊಸ ನಿಯಮವೇನು?
ಹಾಗೆಯೇ ರಿಲೇ ಕ್ಯಾಚ್ ಹಿಡಿದಾಗ ಬೌಂಡರಿ ಲೈನ್ ದಾಟಿದ ಫೀಲ್ಡರ್ ತನ್ನ ಸಹ ಆಟಗಾರನಿಗೆ ಚೆಂಡು ನೀಡಿದ ಬೆನ್ನಲ್ಲೇ ಮೈದಾನದ ಒಳಕ್ಕೆ ಬರಬೇಕು. ಅಂದರೆ ಬೌಂಡರಿ ಲೈನ್ ದಾಟುತ್ತಿದ್ದಂತೆ ಚೆಂಡನ್ನು ಮತ್ತೋರ್ವ ಫೀಲ್ಡರ್ಗೆ ನೀಡಿದ್ದರೆ ಆತನು ಕ್ಯಾಚ್ ಹಿಡಿಯುವಷ್ಟರಲ್ಲಿ ಬೌಂಡರಿ ಲೈನ್ ದಾಟಿದ ಆಟಗಾರ ಮತ್ತೆ ಮೈದಾನದ ಒಳಗಿರಬೇಕು.
ಐಸಿಸಿಯ ಹೊಸ ನಿಯಮದ ಪ್ರಕಾರ, ಬನ್ನಿ ಹಾಪ್ ಕ್ಯಾಚ್ಗಳನ್ನು ಔಟ್ ಎಂದು ಪರಿಗಣಿಸುವುದಿಲ್ಲ. ಅಂದರೆ ಬೌಂಡರಿ ಲೈನ್ ದಾಟಿ ಚೆಂಡನ್ನು ತಡೆದು ಕ್ಯಾಚ್ ಹಿಡಿಯಲು ಪ್ರಯತ್ನಿಸಿದಾಗ, ಫೀಲ್ಡರ್ನ ಮೊದಲ ಸ್ಪರ್ಶವು ಬೌಂಡರಿಯ ಹೊರಗಿದ್ದರೆ, ಅವರ ಎರಡನೇ ಸ್ಪರ್ಶವು ಅವರನ್ನು ಮತ್ತೆ ಮೈದಾನದ ಒಳಗೆ ಕೊಂಡೊಯ್ಯಬೇಕು. ಇದರ ಹೊರತಾಗಿ ಬೌಂಡರಿ ಲೈನ್ನ ಹೊರಗೆ ನಿಂತು ಗಾಳಿಯಲ್ಲಿ ಜಂಪ್ ಮಾಡಿ ಚೆಂಡನ್ನು ಮೈದಾನದ ಒಳಕ್ಕೆ ಎಸೆಯುವಂತಿಲ್ಲ.
ಈ ನಿಯಮವು ಜೂನ್ ತಿಂಗಳಿಂದ ಜಾರಿಯಲ್ಲಿದ್ದರೂ ಟೀಮ್ ಇಂಡಿಯಾ ಆಟಗಾರರಿಗೆ ಈ ರೂಲ್ಸ್ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ಅಂಪೈರ್ ಜೊತೆ ವಾಗ್ವಾದಕ್ಕಿಳಿದಿದ್ದರು. ಇದಾದ ಬಳಿಕ ಹೊಸ ನಿಯಮದ ಬಗ್ಗೆ ಫೀಲ್ಡ್ ಅಂಪೈರ್ ಭಾರತ ಎ ತಂಡದ ನಾಯಕ ಜಿತೇಶ್ ಶರ್ಮಾ ಹಾಗೂ ಇತರೆ ಆಟಗಾರರಿಗೆ ತಿಳಿಸಿದ್ದಾರೆ. ಆ ಬಳಿಕ ಟೀಮ್ ಇಂಡಿಯಾ ಆಟಗಾರರು ತಮ್ಮ ವಾದವನ್ನು ನಿಲ್ಲಿಸಿ ಆಟ ಮುಂದುವರೆಸಿದರು.
ಇಲ್ಲಿ ನೇಹಾಲ್ ವಧೇರಾ ಬೌಂಡರಿ ಲೈನ್ ದಾಟುತ್ತಿದ್ದಂತೆ ಚೆಂಡನ್ನು ನಮನ್ಧೀರ್ಗೆ ನೀಡಿದ್ದರು. ಇದಾಗ್ಯೂ ನಮನ್ಧೀರ್ ಕ್ಯಾಚ್ ಹಿಡಿಯುವಷ್ಟರಲ್ಲಿ ನೇಹಾಲ್ ವಧೇರಾ ಮೈದಾನಕ್ಕೆ ಹಿಂತಿರುಗಿರಲಿಲ್ಲ. ಹೀಗಾಗಿಯೇ ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದಾರೆ.
ಇನ್ನಷ್ಟು ಓದಿರಿ:
ಕೊಪ್ಪಳ: ಹಣ ಕೊಂಡೊಯ್ಯಲು ಬಂದಾಕೆಗೆ ಮತ್ತು ಬರಿಸುವ ಜ್ಯೂಸ್ ಕುಡಿಸಿ ನಾಲ್ವರಿಂದ ಅತ್ಯಾಚಾರ