BELAGAVI NEWS :
ವಾಷಿಂಗ್ಟನ್ ಡಿಸಿ (ಅಮೆರಿಕ) : ಅಮೆರಿಕದೊಂದಿಗೆ ಇರಾನ್ ಅಂತಿಮ ಒಪ್ಪಂದಕ್ಕೆ ಬರದಿದ್ದರೆ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳ ಮೇಲೆ ಅಮೆರಿಕ ಟೋಲ್ ಅಥವಾ ಸುಂಕ ವಿಧಿಸುವ ಸಾಧ್ಯತೆ ಇದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, "ಪಶ್ಚಿಮ ಏಷ್ಯಾದಲ್ಲಿ ಯುದ್ಧ ಅಂತ್ಯಗೊಳಿಸುವ ಉದ್ದೇಶದಿಂದ ಅಮೆರಿಕ ಮತ್ತು ಇರಾನ್ ನಡುವಿನ ರೂಪುಗೊಂಡಿರುವ 14 ಅಂಶಗಳ ತಿಳುವಳಿಕೆ ಒಪ್ಪಂದದ (MoU) ಭಾಗವಾಗಿ 60 ದಿನಗಳ ಕದನ ವಿರಾಮ ಜಾರಿಯಲ್ಲಿರುವ ಅವಧಿಯಲ್ಲಿ ಯಾವುದೇ ಶುಲ್ಕ ಅಥವಾ ಟೋಲ್ ವಿಧಿಸಲಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಹಾಗೂ ಇರಾನ್ ಅಧ್ಯಕ್ಷ Masoud Pezeshkian ಅವರು ಕಳೆದ ಬುಧವಾರ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಸಂಪೂರ್ಣವಾಗಿ ತೆರೆಯುವ ಹಾಗೂ ಇರಾನ್ ನ ಪರಮಾಣು ಕಾರ್ಯಕ್ರಮದ ಕುರಿತು ಹೊಸ ಮಾತುಕತೆಗಳನ್ನು ಆರಂಭಿಸುವ ಗುರಿಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ಕುರಿತ ಬೆಳವಣಿಗೆಗಳು ವಿಶ್ವದ ಇಂಧನ ಮಾರುಕಟ್ಟೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಮಹತ್ವದ ಪರಿಣಾಮ ಬೀರುವ ಸಾದ್ಯತೆ ಇರುವುದರಿಂದ, ಅಮೆರಿಕ -ಇರಾನ್ ನಡುವಿನ ಈ ಮಾತುಕತೆಗಳ ಮೇಲೆ ಜಗತ್ತಿನ ಗಮನ ಕೇಂದ್ರೀಕೃತವಾಗಿದೆ.
ಇಂದು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಅಮೆರಿಕ -ಇರಾನ್ ಮಹತ್ವದ ಮಾತುಕತೆ:
ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಉದ್ವಿಗ್ನತೆ ಮತ್ತು ಯುದ್ಧದ ಆತಂಕದ ನಡುವೆ ಅಮೆರಿಕ ಹಾಗೂ ಇರಾನ್ ಭಾನುವಾರ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಮಹತ್ವದ ಮಾತುಕತೆ ನಡೆಸಲಿವೆ. ಯುದ್ಧವನ್ನು ನಿಲ್ಲಿಸುವ ಉದ್ದೇಶದಿಂದ ರೂಪಿಸಿರುವ ಮಧ್ಯಂತರ ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಹಾಗೂ ಪ್ರಮುಖ ಅಂಶಗಳನ್ನು ಸೇರಿಸುವ ಕುರಿತು ಉಭಯ ದೇಶಗಳ ಸಮಾಲೋಚಕರು ಸಭೆ ನಡೆಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇರಾನ್ ಉನ್ನತ ಮಟ್ಟದ ನಿಯೋಗಗಳು ಶನಿವಾರವೇ ಸ್ವಿಟ್ಜರ್ ಲ್ಯಾಂಡ್ ಗೆ ಆಗಮಿಸಿವೆ. ಮಾತುಕತೆಯಲ್ಲಿ ಪಾಕಿಸ್ತಾನ ಮತ್ತು ಕತಾರ್ ನ ಮಧ್ಯವರ್ತಿಗಳು ಭಾಗವಹಿಸಲಿದ್ದು, ಪ್ರಾದೇಶಿಕ ಶಾಂತಿ ಸ್ಥಾಪನೆಗೆ ದಾರಿ ಕಂಡುಕೊಳ್ಳುವ ಪ್ರಯತ್ನ ನಡೆಯಲಿದೆ.
ಅಮೆರಿಕ ಉಪಾಧ್ಯಕ್ಷ J.D. Vance ಶನಿವಾರ ಸಂಜೆ ಸ್ವಿಟ್ಜರ್ ಲ್ಯಾಂಡ್ ಗೆ ಆಗಮಿಸಿದ್ದು, "ಒಂದು ಅಥವಾ ಎರಡು ದಿನ ಇಲ್ಲಿ ತಂಗಲಿದ್ದೇನೆ . ಇರಾನ್ ನ ಪರಮಾಣು ಕಾರ್ಯಕ್ರಮದ ಕುರಿತು ನಡೆಯುವ ಚರ್ಚೆಗಳು ಹಾಗೂ ದಕ್ಷಿಣ ಲೆಬನಾನ್ ನಲ್ಲಿ ಕದನ ವಿರಾಮ ಸಾಧಿಸುವ ನಿಟ್ಟಿನಲ್ಲಿ ಪ್ರಗತಿ ಕಾಣುವ ವಿಶ್ವಾಸವಿದೆ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅವರು ಈಗಾಗಲೇ ಅಮೆರಿಕದ ಉನ್ನತ ಸಮಾಲೋಚಕರಾದ Jared Kushner ಮತ್ತು Steve Witkoff ಸ್ವಿಟ್ಜರ್ ಲ್ಯಾಂಡ್ ನಲ್ಲಿ ಇದ್ದಾರೆ ಎಂದು ಹೇಳಿದ್ದರು.
ಇರಾನ್ ನಿಯೋಗದ ನೇತೃತ್ವವನ್ನು Mohammad Bagher Ghalibaf ವಹಿಸಿದ್ದು, ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಕೇಂದ್ರ ಬ್ಯಾಂಕ್ ಹಾಗೂ ತೈಲ ಇಲಾಖೆಯ ಹಿರಿಯ ಅಧಿಕಾರಿಗಳು ಸಹ ನಿಯೋಗದಲ್ಲಿ ಭಾಗಿಯಾಗಿದ್ದಾರೆ.
ಇನ್ನೊಂದೆಡೆ, Shehbaz Sharif ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥ Asim Munir ಕೂಡ ಶನಿವಾರ ತಡರಾತ್ರಿ ಸ್ವಿಟ್ಜರ್ ಲ್ಯಾಂಡ್ ಗೆ ಆಗಮಿಸಿದ್ದು, ಮಾತುಕತೆಗಳ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.
ಅಮೆರಿಕ ಇರಾನ್ ನಡುವಿನ ಈ ಸಂವಾದವು ಮಧ್ಯಪ್ರಾಚ್ಯದ ಭದ್ರತೆ, ಪರಮಾಣು ಕಾರ್ಯಕ್ರಮ ಮತ್ತು ಪ್ರಾದೇಶಿಕ ಸ್ಥಿರತೆ ಕುರಿತು ಪ್ರಮುಖ ಬೆಳವಣಿಗೆಗಳಿಗೆ ಕಾರಣವಾಗಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ.
Also Read:
ಜೈಲಿನಲ್ಲಿ ಯೋಗ ಮಾಡಿದ ದರ್ಶನ್ : ಪರಪ್ಪನ ಅಗ್ರಹಾರದಿಂದ ವೈರಲ್ ಆಯ್ತು ಹೊಸ ಫೋಟೋ