BELAGAVI NEWS :
ಟೆಹ್ರಾನ್: ಇರಾನ್ ನಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಸ್ಪೋಟಗಳ ವರದಿಯಾಗಿವೆ. ಚಬಹಾರ್ ಬಂದರು, ಬುಶೆಹರ್ ಪರಮಾಣು ಸಂಕೀರ್ಣ ಹಾಗೂ ಇರಾನಿಶಾಹರ್ ವಿಮಾನ ನಿಲ್ದಾಣದ ಸುತ್ತಮುತ್ತ ಪ್ರಬಲ ಸ್ಪೋಟಗಳು ಸಂಭವಿಸಿರುವುದಾಗಿ ವರದಿಗಳು ತಿಳಿಸಿವೆ.
ಇದೇ ವೇಳೆ, ಯುಎಇ ಮೊದಲ ಬಾರಿಗೆ ಇರಾನ್ ಗುರಿಯಾಗಿಸಿ ದಾಳಿ ನಡೆಸಿದೆ ಎಂಬ ವರದಿಗಳು ಹರಿದಾಡುತ್ತಿದ್ದು, ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. ಆದರೆ ಈ ಕುರಿತಾಗಿ ಸಂಬಂಧಿತ ದೇಶಗಳಿಂದ ಅಧಿಕೃತ ದೃಢೀಕರಣಕ್ಕಾಗಿ ನಿರೀಕ್ಷಿಸಲಾಗಿದೆ.
ದಾಳಿಗಳ ಪರಿಣಾಮವಾಗಿ ರೈಲ್ವೆ ಸೇತುವೆಗಳು, ಪ್ರಮುಖ ರಸ್ತೆಗಳು ಸೇರಿದಂತೆ ಹಲವು ಮೂಲಸೌಕರ್ಯಗಳಿಗೆ ಹಾನಿಯಾಗಿರುವುದಾಗಿ ವರದಿಗಳು ತಿಳಿಸಿವೆ. ಪರಿಸ್ಥಿತಿಯ ಬಗ್ಗೆ ಜಾಗತಿಕ ಸಮುದಾಯವು ನಿಕಟ ನಿಗಾ ವಹಿಸಿದ್ದು ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.
ಮಧ್ಯಪ್ರಾಚ್ಯ ಯುದ್ಧದಲ್ಲಿ ಮತ್ತೊಂದು ಅನರೀಕ್ಷಿತ ತಿರುವು ಎದುರಾಗಿದ್ದು, ಇರಾನ್ -ಯುಎಇ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಯುಎಇ ಮೊದಲ ಬಾರಿಗೆ ಇರಾನ್ ವಿರುದ್ಧ ದಾಳಿ ನಡೆಸಿದೆ ಎಂಬ ವರದಿಗಳ ಬೆನ್ನಲ್ಲೇ, ಅಮೆರಿಕ ನಿರ್ಮಿತ ಡ್ರೋನ್ ಗಳನ್ನು ಬಳಸಿಕೊಂಡು ಬಂದರ್ ಅಬ್ಬಾಸ್ ಬಂದರನ್ನು ಗುರಿಯಾಗಿಸಲಾಗಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಯುಎಇ ಡ್ರೋನ್ ಗಳನ್ನು ಹೊಡೆದುರುಳಿಸಿದೆ ಎಂದು ವರದಿಗಳು ತಿಳಿಸಿವೆ.
ಅಮೆರಿಕದ ನಿರಂತರ ದಾಳಿಗಳಿಂದ ಕೆರಳಿರುವ ಇರಾನ್, ಹಾರ್ಮುಜ್ ಜಲಸಂಧಿ ಪ್ರದೇಶದ ಮೂಲಕ ಸಾಗುವ ಮಾರ್ಗಗಳ ಕುರಿತು ಎಚ್ಚರಿಕೆ ನೀಡಿದ್ದು, ಕೆಂಪು ಸಮುದ್ರದ ಭದ್ರತೆ ಹಾಗೂ ಜಾಗತಿಕ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ.
ಇದೇ ವೇಳೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ, ಅಮೆರಿಕಾದ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಯುದ್ಧಪರಾಧ ಹಾಗೂ ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಎಂದು ತೀವ್ರವಾಗಿ ಖಂಡಿಸಿದ್ದಾರೆ. ಮಧ್ಯಪ್ರಾಚ್ಯದ ಬೆಳವಣಿಗೆಗಳು ಈಗ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದ್ದು, ಮುಂದಿನ ಬೆಳವಣಿಗೆಗಳತ್ತ ವಿಶ್ವದ ಗಮನ ನೆಟ್ಟಿದೆ.