ಟೆಂಬಾ ಬವುಮಾ ನೋಡಿ ಕಲಿತುಕೊಳ್ಳಿ; ಭಾರತೀಯರಿಗೆ ಗವಾಸ್ಕರ್ ಸಲಹೆ
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಸೋತ ಬೆನ್ನಲ್ಲೇ ಭಾರತೀಯ ಆಡಳಿತ ಮಂಡಳಿ ಮತ್ತು ಬ್ಯಾಟರ್ಗಳಿಗೆ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಮಹತ್ವದ ಸಲಹೆ ನೀಡಿದ್ದಾರೆ.
ಹೈದರಾಬಾದ್:
ಈ ಪಂದ್ಯದಲ್ಲಿ ಎರಡೂ ತಂಡಗಳು ಒಮ್ಮೆಯೂ 200 ರನ್ಗಳ ಮೈಲಿಗಲ್ಲನ್ನು ತಲುಪಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ, ಪಿಚ್ ಕುರಿತು ಟೀಕೆಗಳು ಕೇಳಿ ಬಂದವು. ಈ ವಿಷಯಕ್ಕೆ ಸಂಬಂಧಿಸಿದಂತೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.
'ಭಾರತೀಯ ಬ್ಯಾಟ್ಸ್ಮನ್ಗಳು ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅವರಿಂದ ಕಲಿಯಬೇಕು. ಅವರು ಅದ್ಭುತ ಇನ್ನಿಂಗ್ಸ್ ಆಡಿದರು. ಅವರ ಉತ್ತಮ ತಂತ್ರ ಮತ್ತು ಸಮರ್ಪಣೆಯೊಂದಿಗೆ ಕ್ರೀಸ್ನಲ್ಲಿ ನೆಲೆಯೂರಿದ್ದರು. ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳು ಸಹ ಇದೇ ರೀತಿ ಆಡಬೇಕಾಗಿತ್ತು' ಎಂದು ಸುನಿಲ್ ಗವಾಸ್ಕರ್ ಹೇಳಿದರು.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದಿದ್ದ ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 93 ರನ್ಗಳಿಗೆ ಆಲೌಟ್ ಆಗಿ 124 ರನ್ಗಳ ಗುರಿಯನ್ನು ತಲುಪಲು ವಿಫಲವಾಯಿತು.
ಇದರೊಂದಿಗೆ ಸಫಾರಿ ತಂಡ 30 ರನ್ಗಳ ಅಂತರದಿಂದ ಜಯ ಸಾಧಿಸಿತು. ಎರಡೂ ತಂಡಗಳ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಹೆಣಗಾಡಿದರು. ಆದರೆ, ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ (55* ರನ್; 136 ಎಸೆತಗಳು, 4 ಬೌಂಡರಿಗಳು) ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಅರ್ಧಶತಕ ಸಿಡಿಸಿದರು.
ಕ್ಯುರೇಟರ್ಗೆ ಪಿಚ್ ಬಗ್ಗೆ ಕೆಲಸ ಮಾಡುವುದು ಬೇರೆಯವರಿಗಿಂತ ಚೆನ್ನಾಗಿ ತಿಳಿದಿರುತ್ತದೆ. ಅದಕ್ಕಾಗಿಯೇ ಯಾರೂ ಅವರ ಕರ್ತವ್ಯಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಅದನ್ನು ಬಿಟ್ಟು ತಮಗೆ ಬೇಕಾದ ರೀತಿಯಲ್ಲಿ ಪಿಚ್ ಸಿದ್ಧಪಡಿಸಿ ಎಂದು ಕ್ಯುರೇಟರ್ಗೆ ತಿಳಿಸಿದರೇ ಅದು ವಿರುದ್ಧ ಪರಿಣಾಮ ಬೀರಬಹುದು. ಅದಕ್ಕಾಗಿಯೇ ಕ್ಯುರೇಟರ್ಗೆ ಸ್ವಾತಂತ್ರ್ಯ ನೀಡಬೇಕು' ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.
ಪಿಚ್ ಬಗ್ಗೆ ಬರುತ್ತಿರುವ ಟೀಕೆಗಳ ಬಗ್ಗೆ ಮತ್ತು ಭಾರತೀಯ ಶಿಬಿರವು ಪಿಚ್ ತಯಾರಿಕೆಯ ಬಗ್ಗೆ ಕ್ಯುರೇಟರ್ಗೆ ಸೂಚನೆಗಳನ್ನು ನೀಡುತ್ತಿರುವ ಬಗ್ಗೆಯೂ ಅವರು ಮಾತನಾಡಿದರು.
'ಐಪಿಎಲ್ನಲ್ಲಿ, ಯಾವುದೇ ಫ್ರಾಂಚೈಸಿ ಕ್ಯುರೇಟರ್ ಬಳಿ ಹಸ್ತಕ್ಷೇಪ ಮಾಡುವುದಿಲ್ಲ. ಅವರಿಗೆ ಯಾವ ರೀತಿಯ ಪಿಚ್ ಅನ್ನು ಸಿದ್ಧಪಡಿಸಬೇಕು ಎಂದು ಸೂಚಿಸುವುದಿಲ್ಲ. ಕ್ಯುರೇಟರ್ ಸ್ವತಂತ್ರವಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಅವರು ಹೋಮ್ ಫ್ರಾಂಚೈಸಿಯ ಅಭಿಮಾನಿಯಾಗಿದ್ದರೆ, ಅವರಿಗೆ ಅನಿಸಿದ್ದ ರೀತಿಯಲ್ಲಿ ಪಿಚ್ ಸಿದ್ಧಪಡಿಸುತ್ತಾರೆ. ಅದು ಅವರ ಇಚ್ಛೆಯ ಪ್ರಕಾರದಿಂದ ಕೂಡಿರುತ್ತದೆ' ಎಂದು ಸುನಿಲ್ ಗವಾಸ್ಕರ್ ಹೇಳಿದರು.
ಇರ್ಫಾನ್ ಪಠಾಣ್ ಸಹ ಇದರ ಬಗ್ಗೆ ಧ್ವನಿ ಎತ್ತಿದ್ದರು, "ಆರಂಭದಲ್ಲಿ, ಭಾರತೀಯ ತಂಡದ ಆಡಳಿತ ಮಂಡಳಿ ಸ್ಪಿನ್ ಸ್ನೇಹಿ ಪಿಚ್ ಬಯಸಿರಲಿಲ್ಲ ಎಂಬ ವರದಿಗಳು ಬಂದಿದ್ದವು. ನಂತರ ಇದು ಅವರೇ ಬಯಸಿದ ಪಿಚ್ ಎಂದು ಕೋಚ್ ಸ್ಪಷ್ಟನೆ ನೀಡಿದರು. ಆದರೆ, ಏನೇ ಇರಲಿ ಇದೆಲ್ಲವನ್ನೂ ಬದಿಗಿಟ್ಟು, ಯಾವುದೇ ಪಿಚ್ನಲ್ಲಿ ಆಡುವಂತೆ ಆಟಗಾರರು ತಯಾರಿರಬೇಕು.
ಒಂದು ಕಾಲದಲ್ಲಿ ನಾವು ಸ್ಪಿನ್ ಆಡುವುದರಲ್ಲಿ ನಿಪುಣರಾಗಿದ್ದೆವು. ಈಗ ನಮ್ಮ ಬ್ಯಾಟ್ಸ್ಮನ್ಗಳು ಸ್ಪಿನ್ ಬೌಲಿಂಗ್ ಅನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ವೈಟ್ - ಬಾಲ್ ಪಂದ್ಯಗಳ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ಸಾಕಷ್ಟು ಪೇಸ್ ಬೌಲಿಂಗ್ ಇದೆ. ಇದರಿಂದಾಗಿ, ನಮ್ಮ ಬ್ಯಾಟ್ಸ್ಮನ್ಗಳ ಗುಣಮಟ್ಟದ ಸ್ಪಿನ್ ಆಡುವ ಸಾಮರ್ಥ್ಯ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದಿದ್ದರು.
ಏತನ್ಮಧ್ಯೆ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಯಸಿದ್ದ ಹಾಗೆ ಪಿಚ್ ಅನ್ನು ಸಿದ್ಧ ಪಡಿಸಲಾಗಿತ್ತು. ಆದರೆ, ಇದು ಪಂದ್ಯದ ಸೋಲಿಗೆ ಕಾರಣವಾಯ್ತು. ಪಂದ್ಯ ಬಳಿಕ ಪಿಚ್ ಮತ್ತು ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ಕೆಲ ಹಿರಿಯ ಆಟಗಾರರು ಅಸಮಾಧಾನ ಹೊರಹಾಕಿದ್ದಾರೆ.
ಇನ್ನಷ್ಟು ಓದಿರಿ :
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್ ವಿವಾದ: ಮೌನ ಮುರಿದ ಕ್ಯುರೇಟರ್