ವಾರಕ್ಕೆ 72 ಗಂಟೆ ಕೆಲಸ: ಚೀನಾದ ನಿದರ್ಶನ ನೀಡಿದ ನಾರಾಯಣಮೂರ್ತಿ
NR Narayana Murthy defends his 70 hour work week idea: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆನ್ನುವ ವಾದ ಸಮರ್ಥಿಸಿಕೊಂಡಿದ್ದಾರೆ. ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮೂರ್ತಿಗಳು ಚೀನಾದ ನಿದರ್ಶನ ನೀಡಿದ್ದಾರೆ. ಚೀನಾದಲ್ಲಿ ವಾರಕ್ಕೆ 6 ದಿನ, ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡಲಾಗುವುದನ್ನು ಉದಾಹರಣೆಯಾಗಿ ನೀಡಿದ್ದಾರೆ.
ಬೆಂಗಳೂರು:
ಪ್ರಯತ್ನದಿಂದ ಮಾತ್ರವೇ ಅಭಿವೃದ್ಧಿ ಬರುವುದು. ಯಾವುದೇ ವ್ಯಕ್ತಿ ಸಮುದಾಯ ಮತ್ತು ದೇಶವಾಗಲೀ ಪರಿಶ್ರಮ ಇಲ್ಲದೇ ಅಭಿವೃದ್ಧಿ ಹೊಂದಿಲ್ಲ ಎಂದು ಇನ್ಫೋಸಿಸ್ ಸಂಸ್ಥಾಪಕರು ಹೇಳಿದ್ದಾರೆ. ಹಾಗೆಯೇ, ಮೊದಲು ಜೀವನ ಪಡೆಯಿರಿ, ಬಳಿಕ ಕೆಲಸ ಮತ್ತು ಜೀವನ ಸಮತೋಲನ ಸಾಧಿಸಿರಿ ಎಂದೂ ಯುವಜನರಿಗೆ ಮೂರ್ತಿಗಳು ಸಲಹೆ ನೀಡಿದ್ದಾರೆ.
ಇವತ್ತಿನ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದ ಇನ್ಫೋಸಿಸ್ನ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಅವರು ತಮ್ಮ ಅನಿಸಿಕೆಯನ್ನು ಪುನರುಚ್ಚರಿಸಿದ್ದಾರೆ. ರಿಪಬ್ಲಿಕ್ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ವೇಳೆ ಅವರು ತಮ್ಮ 70 ಗಂಟೆ ಕೆಲಸದ ಸಲಹೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಮರ್ಥ ಕೆಲಸದ ವ್ಯವಸ್ಥೆಯು ದೇಶದ ಅಭಿವೃದ್ದಿಗೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ್ದಾರೆ.
ನಾರಾಯಣಮೂರ್ತಿಗಳ 72 ಗಂಟೆ ಕೆಲಸದ ವಾದಕ್ಕೆ ನೆಟ್ಟಿಗರ ಪ್ರತಿಕ್ರಿಯೆ:
ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆನ್ನುವ ಎನ್ ಆರ್ ನಾರಾಯಣಮೂರ್ತಿ ಅವರ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಬರುತ್ತಿದೆ. ‘ಯೂರೋಪ್ನಲ್ಲಿ 10, 5, 5 ಎನ್ನುತ್ತಾರೆ. ಅಂದರೆ ಬೆಳಗ್ಗೆ 10ರಿಂದ 5, ವಾರಕ್ಕೆ 5 ದಿನ. ಜನರು ವಾಕ್ ಹೋಗುತ್ತಾರೆ, ಟ್ರೆಕ್ಕಿಂಗ್ ಮಾಡುತ್ತಾರೆ, ಸ್ನೇಹಿತರನ್ನು ಭೇಟಿ ಮಾಡುತ್ತಾರೆ. ಜೀವನ ಅನುಭವಿಸುತ್ತಾರೆ. ನೀವು ಭಾರತವನ್ನು ಸರಿಯಾದ ದಿಕ್ಕಿಗೆ ಮಾರ್ಗದರ್ಶನ ಮಾಡಿ. ನಾವು ಬದುಕಬೇಕು’ ಎಂದು ಒಬ್ಬರು ಕಾಮೆಂಟಿಸಿದ್ದಾರೆ.
ಚೀನಾದ ಹೋಟೆಲ್ ನಿದರ್ಶನ ಕೊಟ್ಟ ಮೂರ್ತಿ:
ಇದೇ ವೇಳೆ ನಾರಾಯಣಮೂರ್ತಿಗಳು ಕೆಲಸ ಮಾಡುವ ವಿಚಾರದಲ್ಲಿ ಯುವಜನರಿಗೆ ಪ್ರಧಾನಿ ಮೋದಿ ಆದರ್ಶರಾಗಿದ್ದಾರೆ. ನರೇಂದ್ರ ಮೋದಿ ಅವರು ವಾರಕ್ಕೆ ಬಹುತೇಕ 100 ಗಂಟೆ ಕೆಲಸ ಮಾಡುತ್ತಾರೆ ಎಂದು ಮೂರ್ತಿಗಳು ಉಲ್ಲೇಖಿಸಿದ್ದಾರೆ.
‘ಕಳೆದ ವರ್ಷ ಕಾಟಮರನ್ನ (ನಾರಾಯಣಮೂರ್ತಿ ಅವರ ಹೂಡಿಕೆ ಸಂಸ್ಥೆ) ಕೆಲ ಹಿರಿಯ ಉದ್ಯೋಗಿಗಳು ಚೀನಾಗೆ ಭೇಟಿ ನೀಡಿದ್ದರು. ಅಲ್ಲಿಯ 1, 2, ಮತ್ತು 3ನೇ ಸ್ತರ ನಗರಗಳಿಗೆ ಭೇಟಿ ನೀಡಿದ್ದರು. ಚೀನಾದ ವಾಸ್ತವ ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ಅವರು ಈ ಮೂರೂ ರೀತಿಯ ನಗರಗಳಲ್ಲಿನ ಹೋಟೆಲ್ಗಳಲ್ಲಿ ಉಳಿದಿದ್ದರು. ಅಲ್ಲಿ 9, 9, 6 ಎನ್ನುವ ಮಾತಿದೆ. ಹಾಗಂದರೆ ಏನು ಗೊತ್ತಾ? ಬೆಳಗ್ಗೆ 9ರಿಂದ ರಾತ್ರಿ 9, ವಾರಕ್ಕೆ 6. ಅಂದರೆ ವಾರಕ್ಕೆ 72 ಗಂಟೆ ಆಯಿತು’ ಎಂದು ಎನ್ ಆರ್ ನಾರಾಯಣಮೂರ್ತಿ ತಿಳಿಸಿದ್ದಾರೆ.
ಇನ್ನಷ್ಟು ಓದಿರಿ:
ಬೆಂಗಳೂರು ಟೆಕ್ ಸಮಿಟ್ 2025ಗೆ ಸ್ಟಾರ್ಟಪ್ ನಗರಿಯಲ್ಲಿ 3 ದಿನ ತಂತ್ರಜ್ಞಾನ ಶಕ್ತಿ ಅನಾವರಣ