belagavi news :
ಬಿಡದಿ ಟೌನ್‌ಶಿಪ್ ಯೋಜನೆ ಕೈ ಬಿಡುವಂತೆ ದೇವೇಗೌಡರ ಆಗ್ರಹ
ವಿವಾದಕ್ಕೆ ಕಾರಣವಾಗಿರುವ ಬಿಡದಿ ಟೌನ್ಶಿಪ್ ಯೋಜನೆಯನ್ನು ತಕ್ಷಣವೇ ಕೈಬಿಡುವಂತೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಸರ್ಕಾರ ತಮ್ಮ ಮನವಿಗೆ ಸ್ಪಂದಿಸದಿದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಸತ್ಯಾಗ್ರಹ ನಡೆಸುವುದಾಗಿ ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ. ಯೋಜನೆಗೆ ಒಳಪಡುವ ಪ್ರದೇಶಗಳಲ್ಲಿರುವ 10,580 ಮಂದಿ ಸಣ್ಣ ರೈತರಾಗಿದ್ದು, ಅವರಲ್ಲಿ ಶೇ.82 ರಷ್ಟು ಮಂದಿ ಒಂದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಅತಿ ಸಣ್ಣ ರೈತರು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ದೇವೇಗೌಡರು, ಸರ್ಕಾರ ಯೋಜನೆಯನ್ನು ಕೈ ಬಿಡದಿದ್ದರೆ ಜನತಾದಳ ಪಕ್ಷದ ವತಿಯಿಂದ ರೈತರ ಪರವಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಬಿಡದಿ ಟೌನ್ ಶಿಪ್ ಯೋಜನೆಗೆ ವಿರೋಧ : ದೇವೇಗೌಡರ ಪತ್ರದಲ್ಲಿ ಏನಿದೆ?
ಬಿಡದಿ ಟೌನ್ ಶಿಪ್ ಯೋಜನೆ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲ, ಬನಗಿರಿ, ಹೊಸೂರು, ಕೆ.ಜಿ.ಗೊಲ್ಲರಪಾಳ್ಯ, ಕಂಚುಗಾರಹಳ್ಳಿ,ಅರಳಾಳು ಸಂದ್ರ, ಕೆಂಪಯ್ಯನ ಪಾಳ್ಯ, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ತಾಲೂಕಿನ ಒಡೆರಹಳ್ಳಿ (ಭಾಗಶಃ) ಗ್ರಾಮದಲ್ಲಿರುವ ಒಟ್ಟು7,481ಎಕರೆ 21.0 ಎಂಟು ಗುಂಟೆ ಕೃಷಿ ಜಮೀನನ್ನು ವಶಪಡಿಸಿಕೊಂಡು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸುಮಾರು 18,133 ಕೋಟಿ ಅಂದಾಜು ವೆಚ್ಚದ ಈ ಯೋಜನೆಯಿಂದ ಸಾವಿರಾರು ರೈತ ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ರಾಮನಗರ ಮತ್ತು ಕನಕಪುರ ತಾಲೂಕುಗಳಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ
ಸಾವಿರಾರು ಎಕರೆ ಕೃಷಿ ಭೂಮಿಯನ್ನು ಆಧೀನ ಪಡಿಸಿಕೊಂಡು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಇದರಿಂದ ಈ ಭಾಗದ ರೈತರು ತಮ್ಮ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮತ್ತಷ್ಟು ಕೃಷಿ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಬಿಡದಿ ಟೌನ್ ಶಿಪ್ ಯೋಜನೆಯನ್ನು ಮರುಪರಿಶೀಲಿಸಿ ಕೈ ಬಿಡಬೇಕು ಎಂದು ದೇವೇಗೌಡರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
ಬಿಡದಿ ಟೌನ್ ಶಿಪ್ ಯೋಜನೆಗೆ ವಿರೋಧ : ಸಣ್ಣ ರೈತರ ಭೂಮಿ,ಪರಿಸರದ ಬಗ್ಗೆ ದೇವೇಗೌಡರ ಆತಂಕ
ಬಿಡದಿ ಸಮಗ್ರ ಉಪನಗರ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಸಣ್ಣ ರೈತರು ಮತ್ತು ಪರಿಸರದ ಸಮಸ್ಯೆಗಳ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ದಾಖಲೆಗಳ ಪ್ರಕಾರ ಬಿಡದಿ ಸಮಗ್ರ ಉಪನಗರ ಯೋಜನೆಯ ಅಂತಿಮ ಅಧಿಸೂಚನೆಯಲ್ಲಿ ಒಟ್ಟು 10,580 ಮಂದಿ ಸಣ್ಣ ರೈತರ ಹೆಸರುಗಳು ದಾಖಲಾಗಿವೆ ಎಂದು ದೇವೇಗೌಡರು ಉಲ್ಲೇಖಿಸಿದ್ದಾರೆ. ಇವರಲ್ಲಿ ಶೇ.82 ರಷ್ಟು ರೈತರು ಒಂದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಅತಿ ಸಣ್ಣ ರೈತರಾಗಿದ್ದಾರೆ. ಅಲ್ಲದೆ,ಸುಮಾರು 2,555 ರೈತರು ಕೇವಲ 5 ಗುಂಟೆಗಿಂತಲೂ ಕಡಿಮೆ ಕೃಷಿ ಜಮೀನು ಹೊಂದಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕೃಷಿಯನ್ನು ಅವಲಂಬಿಸಿರುವ ಇಂತಹ ಸಣ್ಣ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವುದರಿಂದ ಅವರ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ದೇವೇಗೌಡರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಸಾವಿರಾರು ಎಕರೆ ವ್ಯಾಪ್ತಿಯ ಬೈರಮಂಗಲ ಕೆರೆಯ ಪರಿಸ್ಥಿತಿಯನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಹಲವು ದಶಕಗಳಿಂದ ಈ ಭಾಗದ ನೀರಾವರಿಗೆ ಪ್ರಮುಖ ಆಧಾರವಾಗಿದ್ದ ಭೈರಮಂಗಲ ಕೆರೆ, ವೃಷಭಾವತಿ ಕಣಿವೆಯಿಂದ ಹರಿದು ಬರುವ ತ್ಯಾಜ್ಯ ನೀರು ಹಾಗೂ ಕೈಗಾರಿಕಾ ಮಾಲಿನ್ಯದಿಂದ ಕಲುಷಿತಗೊಂಡಿದೆ ಎಂದು ಹೇಳಿದ್ದಾರೆ.
ಕೆರೆ ಅಂಗಳದಲ್ಲಿ ನೊರೆ ಮತ್ತು ಕಳೆ ತುಂಬಿಕೊಂಡಿದ್ದು,ಸುತ್ತಮುತ್ತಲಿನ ಗ್ರಾಮಗಳ ಜನರು ಹಾಗೂ ಜಾನುವಾರುಗಳು ಕಲುಷಿತ ನೀರು ಮತ್ತು ದುರ್ವಾಸನೆಯಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ದೇವೇಗೌಡರು ಉಲ್ಲೇಖಿಸಿದ್ದಾರೆ.
ರೈತರ ಹಿತಾಸಕ್ತಿ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಬಿಡದಿ ಟೌನ್ ಶಿಪ್ ಯೋಜನೆಯನ್ನು ಮರು ಪರಿಶೀಲಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೈರಮಂಗಲ ಕೆರೆ ಪರಿಸ್ಥಿತಿ ಉಲ್ಲೇಖಿಸಿ ಸರ್ಕಾರಕ್ಕೆ ದೇವೇಗೌಡರ ಎಚ್ಚರಿಕೆ
ಬಿಡದಿ ಸಮಗ್ರ ಉಪನಗರ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು,ಬೈರಮಂಗಲ ಕೆರೆಯ ಪರಿಸರದ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಹಲವು ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸುಮಾರು ₹300 ಕೋಟಿ ವೆಚ್ಚದಲ್ಲಿ ಬೈರಮಂಗಲ ಕೆರೆಯ ಪುನಶ್ಚೇತನಕ್ಕೆ ಯೋಜನೆಗಳನ್ನು ರೂಪಿಸಲಾಗಿದ್ದರು, ಅವು ದಶಕಗಳಿಂದ ಪ್ರಗತಿ ಕಾಣದೆ ಬಾಕಿ ಉಳಿದಿವೆ ಎಂದು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಬೈರಮಂಗಲ ಕೆರೆಯ ಪಕ್ಕದಲ್ಲಿ ಸಮಗ್ರ ಉಪನಗರ ಯೋಜನೆ ಕೈಗೆತ್ತಿಕೊಳ್ಳುವುದರಿಂದ ಸುತ್ತಮುತ್ತಲಿನ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಯೋಜನೆ ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ತಮ್ಮ ಏಳು ದಶಕಗಳ ಸಾರ್ವಜನಿಕ ಜೀವನದಲ್ಲಿ ರಾಜ್ಯ ಮತ್ತು ದೇಶದ ರೈತರ ಹಿತಕ್ಕಾಗಿ ಹೋರಾಡಿಕೊಂಡು ಬಂದಿರುವುದಾಗಿ ತಿಳಿಸಿರುವ ದೇವೇಗೌಡರು, ರೈತರ ಹಿತಕ್ಕಾಗಿ ಅಧಿಕಾರವನ್ನು ತ್ಯಾಗ ಮಾಡಿರುವುದಾಗಿ ಪತ್ರದಲ್ಲಿ ಹೇಳಿದ್ದಾರೆ.
ರಾಜ್ಯ ಸರ್ಕಾರ ತಮ್ಮ ಮನವಿಯನ್ನು ಪರಿಗಣಿಸದೆ ಯೋಜನೆಯನ್ನು ಮುಂದುವರೆಸಿದರೆ, ವಿಧಾನಸೌಧದ ಆವರಣದಲ್ಲಿರುವ ಗಾಂಧೀಜಿ ಪ್ರತಿಮೆ ಎದುರು ಕುಳಿತು ಸತ್ಯಾಗ್ರಹ ನಡೆಸುವುದಾಗಿ ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ.