Belagavi News:
ನವದೆಹಲಿ: ಜಂತರ್ ಮಂತರ್ ನಲ್ಲಿ ಕಳೆದ 20ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್ ಚುಕ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ದೆಹಲಿ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಬಿಸಿದ್ದು. ಪ್ರತಿಭಟನೆಗೆ ಹೊಸ ತಿರುವು ಸಿಕ್ಕಿದೆ.
ಜುಲೈ 20 ರಂದು ಸಂಸತ್ ವರೆಗೆ ಮೆರವಣಿಗೆ ನಡೆಸಲು ವಾಂಗ್ ಚುಕ್ ಮತ್ತು ಅವರ ಬೆಂಬಲಿಗರು ಯೋಜನೆ ರೂಪಿಸಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ. ಹೈಕೋರ್ಟ್ ನ ನಿರ್ದೇಶನ ಹಾಗೂ ವಾಂಗ್ ಚುಕ್ ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರು ಅಡಚಣೆ ಉಂಟು ಮಾಡಲು ಯತ್ನಿಸಿದ ಪರಿಣಾಮ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ, ಪೊಲೀಸರು ಸಂಯಮದಿಂದ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದರ ನಡುವೆ, ಶುಕ್ರವಾರ ತಡರಾತ್ರಿ ಜಂತರ್ ಮಂತರ್ ನಲ್ಲಿ ಸೋನಮ್ ವಾಂಗ್ ಚುಕ್ ಮೇಲೆ ದಾಳಿ ನಡೆದಿದೆ ಎಂದು ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ. ಆದರೆ ಈ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ವೈದ್ಯಕೀಯ ಮಾಹಿತಿ ಪ್ರಕಾರ, ವಾಂಗ್ ಚುಕ್ ಅವರ ತೂಕ 56.55 ಕೆಜಿಗೆ ಇಳಿದಿದ್ದು. ಕಳೆದ 24 ಗಂಟೆಗಳಲ್ಲಿ 350 ಗ್ರಾಂ ತೂಕ ಕಡಿಮೆಯಾಗಿದೆ.
ಅವರ ರಕ್ತದೊತ್ತಡ 108/68, ರಕ್ತದಲ್ಲಿನ ಸಕ್ಕರೆ ಪರಿಣಾಮ 70 ಮಿಗ್ರಾಂ/ಡಿಎಲ್ ಹಾಗೂ ನಾಡಿಮಿಡಿತ ನಿಮಿಷಕ್ಕೆ 72 ಎಂದು ವೈದ್ಯರು ತಿಳಿಸಿದ್ದಾರೆ.
ಸೋನಮ್ ವಾಂಗ್ ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ ಅಭಿಜಿತ್ ದೀಪ್ಕೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದ್ದಾರೆ. ವಾಂಗ್ ಚುಕ್ ಆರಂಭಿಸಿದ್ದ ಹೋರಾಟವನ್ನು ಮುಂದುವರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ಶುಕ್ರವಾರ ಜಂತರ್ ಮಂತರ್ ಗೆ ಭೇಟಿ ನೀಡಿದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಎನ್.ಸಿ.ಪಿ (ಶರದ್ ಚಂದ್ರ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ, ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್, ಕಾಂಗ್ರೆಸ್ ನಾಯಕ ಪವನ್ ಖೇರಾ ಹಾಗೂ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸೇರಿದಂತೆ ಹಲವು ಗಣ್ಯರು ವಾಂಗ್ ಚುಕ್ ಅವರ ಆರೋಗ್ಯ ವಿಚಾರಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಇದರ ನಡುವೆ, ವಾಂಗ್ ಚುಕ್ ಅವರ ಆರೋಗ್ಯದ ಮೇಲೆ ಪ್ರತಿದಿನವೂ ನಿಗಾ ವಹಿಸುವಂತೆ ದೆಹಲಿ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿತ್ತು. ಪ್ರತಿಯೊಬ್ಬ ನಾಗರಿಕನ ಜೀವ ಅಮೂಲ್ಯವಾಗಿದ್ದು. ಅದನ್ನು ರಕ್ಷಿಸಲು ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಸರ್ಕಾರಿ ವೈದ್ಯರ ಸಲಹೆಯಂತೆ ಅಗತ್ಯ ವೈದ್ಯಕೀಯ ನೆರವನ್ನು ಕೊಡಲೇ ಒದಗಿಸುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿತ್ತು.
ವಾಂಗ್ ಚುಕ್ ಅವರ ಆರೋಗ್ಯ ಕ್ಷೀಣಿಸುತ್ತಿರುವ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾಯ ಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನಗಳನ್ನು ನೀಡಿತ್ತು.
ಲಡಾಖ್ ನ ಎಂಜಿನಿಯರ್, ಶಿಕ್ಷಣ ಸುಧಾರಕ ಹಾಗೂ ಹವಾಮಾನ ಹೋರಾಟಗಾರರಾಗಿರುವ ಸೋನಮ್ ವಾಂಗ್ ಚುಕ್, ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ದೇಶಾದ್ಯಂತ ನಡೆದ ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಅವರು ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಇದೆ ವೇಳೆ, ಜುಲೈ 20 ರಂದು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸುವುದಾಗಿ ವಾಂಗ್ ಚುಕ್ ಈಗಾಗಲೇ ಘೋಷಿಸಿದ್ದು, ಈ ಬೆಳವಣಿಗೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.