ನವೆಂಬರ್ ಕ್ರಾಂತಿ ಕಿಚ್ಚಿನ ಮಧ್ಯೆ ಹೊಸ ದಾಖಲೆಯತ್ತ ಸಿಎಂ ಸಿದ್ದರಾಮಯ್ಯ ದಾಪುಗಾಲು
ಒಂದೆಡೆ ಸಿಎಂ ಕುರ್ಚಿ ಬದಲಾವಣೆಯ ಗುಸುಗುಸು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದರೆ ಮತ್ತೊಂದೆಡೆ, ‘ಅತ್ಯಧಿಕ ಅವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ’ ಎಂಬ ದಾಖಲೆ ಬರೆಯುವತ್ತ ಸಿದ್ದರಾಮಯ್ಯ ದಾಪುಗಾಲಿಡುತ್ತಿದ್ದಾರೆ. ಜನವರಿ 5ರ ವರೆಗೆ ಸಿಎಂ ಆಗಿ ಮುಂದುವರಿದಿದ್ದೇ ಆದರೆ, ಮಾಜಿ ಸಿಎಂ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಸರಿಗಟ್ಟಲಿದ್ದಾರೆ.
ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ನಲ್ಲಿ (Karnataka Congress) ನವೆಂಬರ್ ಕ್ರಾಂತಿಯ ಕಿಚ್ಚು ಒಂದೆಡೆಯಾದರೆ, ಇದರ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತೊಂದು ಐತಿಹಾಸಿಕ ದಾಖಲೆಯತ್ತ ದಾಪುಗಾಲಿಡುತ್ತಿದ್ದಾರೆ. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ, ಸಿಎಂ ಆಗಿ ಹೆಚ್ಚು ಅವಧಿ ಸೇವೆ ಸಲ್ಲಿಸಿದ ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಮುರಿಯಲಿದ್ದಾರೆ. ಆದರೆ, ಇದು ಸಾಕಾರಗೊಳ್ಳಬೇಕಾದರೆ ಸಿದ್ದರಾಮಯ್ಯ ಅವರು ಜನವರಿ ವರೆಗೂ ಸಿಎಂ ಹುದ್ದೆಯಲ್ಲಿ ಮುಂದುವರಿಯಬೇಕು. ಅಧಿಕಾರ ಹಂಚಿಕೆ ಊಹಾಪೋಹಗಳು ನಿಜವಾಗದೇ ಇದ್ದಲ್ಲಿ ಸಿದ್ದರಾಮಯ್ಯ ದಾಖಲೆ ಬರೆಯುವುದು ಖಾತರಿಯಾಗಿದೆ.
ಜನವರಿಯಲ್ಲಿ ದೇವರಾಜ ಅರಸು ಸರಿಗಟ್ಟಲಿರುವ ಸಿದ್ದರಾಮಯ್ಯ:
ಮೊದಲ ಬಾರಿಗೆ ಪೂರ್ಣಾವಧಿ ಮುಖ್ಯಮಂತ್ರಿ ಸ್ಥಾನದಲ್ಲಿ ಅಧಿಕಾರ ಮುಗಿಸಿದ ಸಿದ್ದರಾಮಯ್ಯ, ಇದೀಗ ಎರಡನೇ ಬಾರಿಗೆ ಅದೇ ಹಾದಿಯಲ್ಲಿ ನಡೆದು ದಾಖಲೆ ನಿರ್ಮಾಣ ಮಾಡುವ ಹಂತದಲ್ಲಿದ್ದಾರೆ. ದೇವರಾಜ ಅರಸು ಅವರೇ ಸಾಟಿ ಎಂದು ಹೇಳಿಕೊಂಡಿದ್ದ ಸಿಎಂ ಸಿದ್ದರಾಮಯ್ಯ, ಈಗ ಅವರ ದಾಖಲೆಯನ್ನೇ ಸರಿಗಟ್ಟಲು ಕೌಂಟ್ಡೌನ್ ಆರಂಭವಾಗಿದೆ.
ಇದೀಗ ಸಿದ್ದರಾಮಯ್ಯ ಕೂಡ ಎರಡು ಅವಧಿಗಳಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದು, 2026ರ ಜನವರಿ 5 ರ ವೇಳೆಗೆ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಲಿದ್ದಾರೆ. ನವೆಂಬರ್ ಕ್ರಾಂತಿ ಹಿನ್ನಲೆಯಲ್ಲಿ ಕಾಂಗ್ರೆಸ್ನೊಳಗೆ ನಾಯಕತ್ವ ಬದಲಾವಣೆ ಆಗದಿದ್ದರೆ, ಕರ್ನಾಟಕದ ಇತಿಹಾಸದಲ್ಲಿ ‘ಅತ್ಯಧಿಕ ಅವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿ’ ಎಂಬ ಕೀರ್ತಿ ಸಿದ್ದರಾಮಯ್ಯ ಅವರದ್ದಾಗಲಿದೆ.
ಎಷ್ಟು ವರ್ಷ ಸಿಎಂ ಆಗಿದ್ದರು ದೇವರಾಜ ಅರಸು:
ದೇವರಾಜ ಅರಸು 7 ವರ್ಷ 7 ತಿಂಗಳು 20 ದಿನಗಳ ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಸೇವೆ ಸಲ್ಲಿಸಿದ್ದರು. ಅವರು 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ ಮತ್ತು ಬಳಿಕ 1978ರ ಫೆಬ್ರವರಿ 28ರಿಂದ 1980ರ ಜನವರಿ 7ರವರೆಗೆ ಎರಡು ಅವಧಿಗಳಲ್ಲಿ ಸಿಎಂ ಆಗಿದ್ದರು.
ಇನ್ನಷ್ಟು ಓದಿರಿ:
ಕೇವಲ ಆರ್ ಎಸ್ಎಸ್ ಅಂತ ನಾವು ಹೇಳಿಲ್ಲ, ಎಲ್ಲ ಸಂಸ್ಥೆಗಳಿಗೂ ಅನ್ವಯಿಸುತ್ತೆ: ಸಿಎಂ ಸಿದ್ದರಾಮಯ್ಯ