ಸಚಿವ ಸಂಪುಟ ಸರ್ಕಸ್ ನಡುವೆ ಡಿಕೆ ಬ್ರದರ್ಸ್ ನಡೆ ಸಸ್ಪೆನ್ಸ್
ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಸಂಪುಟ ಪುನಾರಚನೆಗೆ ಸಿಎಂ ಒಲವು ತೋರಿದರೆ, ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಖಾಲಿ ಸ್ಥಾನಗಳ ಭರ್ತಿ, ಪರಿಷತ್ ಸ್ಥಾನಗಳ ಬಗ್ಗೆಯೂ ಚರ್ಚೆಯಾಗಿದ್ದು, ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ ಎನ್ನಲಾಗಿದೆ. ಈ ನಡುವೆ ಮಾಜಿ ಸಂಸದ ಡಿ.ಕೆ. ಸುರೇಶ್ ಕೂಡ ದೆಹಲಿಗೆ ಪ್ರಯಾಣ ಬೆಳೆಸಿರೋದು ಭಾರಿ ಕುತೂಹಲ ಮೂಡಿಸಿದೆ.
ಬೆಂಗಳೂರು:
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರ್ನಾಟಕದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇಂದಿನ ಹೈದರಾಬಾದ್ ಪ್ರವಾಸ ರದ್ದುಪಡಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ದೆಹಲಿಯಲ್ಲೇ ತಂಗಲಿದ್ದಾರೆ. ಇತ್ತ ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ಬೆಂಗಳೂರಿನಿಂದ ದೆಹಲಿಗೆ ಹೊರಟಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ಸಚಿವ ಸಂಪುಟ ಪುನಾರಚನೆ ಬದಲಾಗಿ 4 ಪ್ರಮುಖ ಸ್ಥಾನಗಳ ಬಗ್ಗೆ ಚರ್ಚೆ ನಡೆದಿದೆ. ಬಿ.ನಾಗೇಂದ್ರ, ರಾಜಣ್ಣರಿಂದ ಖಾಲಿಯಾದ ಸ್ಥಾನ ತುಂಬಲು ನಿರ್ಧಾರಿಸಲಾಗಿದ್ದು, ಪರಿಷತ್ ಸಭಾಪತಿ ಮತ್ತು ಉಪಸಭಾಪತಿ ಆಯ್ಕೆ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ವಿಧಾನಪರಿಷತ್ನಲ್ಲಿ ಕಾಂಗ್ರೆಸ್ಗೆ ಹೆಚ್ಚು ಸ್ಥಾನ ಸಿಕ್ಕಿರುವ ಹಿನ್ನೆಲೆ, ಸಭಾಪತಿ ಸ್ಥಾನದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಇನ್ನೊಂದೆಡೆ ಹೊಸಬರಿಗೆ ಅವಕಾಶ ನೀಡಬೇಕಿರುವ ಕಾರಣ ದೊಡ್ಡ ಪ್ರಮಾಣದಲ್ಲಿ ಪುನಾರಚನೆಗೆ ಹೈಕಮಾಂಡ್ ನಾಯಕರೊಬ್ಬರಿಂದ ಸಲಹೆ ವ್ಯಕ್ತವಾಗಿದೆ ಎನ್ನಲಾಗಿದೆ.
ಹಾಲಿ ಸಚಿವರಿಗೆ ಪಕ್ಷದ ಕೆಲಸ ನೀಡಿ ಎಂದು AICC ಪ್ರಧಾನ ಕಾರ್ಯದರ್ಶಿ ಹೇಳಿದ್ದು, ಎಲ್ಲಾ ಆಯ್ಕೆಗಳನ್ನು ಕಾಂಗ್ರೆಸ್ ಹೈಕಮಾಂಡ್ ಮುಕ್ತವಾಗಿಟ್ಟಿದೆ. ಸಂಪುಟ ವಿಚಾರವಾಗಿ ನಾಳೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದು, ನ.18ರಂದು ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೂಡ ದೆಹಲಿಗೆ ಆಗಮಿಸಲಿದ್ದಾರೆ. ಹೀಗಾಗಿ ವೇಣುಗೋಪಾಲ್ ಜೊತೆ ಚರ್ಚಿಸಿದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾಜರ್ಜನ ಖರ್ಗೆ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸುವ ಸಾಧ್ಯತೆ ಇದೆ. ನಾಳಿನ ಸಭೆಯಲ್ಲಿ ಸಚಿವ ಸಂಪುಟದ ಬಗ್ಗೆ ಚರ್ಚೆಯಾಗುವ ನಿರೀಕ್ಷೆ ಇದ್ದು, ಅಂತಿಮವಾಗಿ ಸಂಪುಟ ಸ್ವರೂಪದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎನ್ನಲಾಗಿದೆ.
ರಾಹುಲ್ ಗಾಂಧಿ ಭೇಟಿಗೂ ಡಿ.ಕೆ. ಶಿವಕುಮಾರ್ ಈಗಾಗಲೇ ಸಮಯ ಕೇಳಿದ್ದಾರೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ದೆಹಲಿ ಪ್ರವಾಸ ಹಿನ್ನೆಲೆ, ಸೋಮವಾರವೂ ದೆಹಲಿಯಲ್ಲೇ ಡಿಕೆಶಿ ತಂಗಲಿದ್ದಾರೆ. ಸಂಪುಟ ಪುನಾರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದು, ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆಗೆ ಡಿಸಿಎಂ ಡಿಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಸಂಬಂಧ ರಾಹುಲ್ ಭೇಟಿಯಾಗಿ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಎನ್ನಲಾಗಿದೆ.
ಇನ್ನಷ್ಟು ಓದಿರಿ :
28 ಕೃಷ್ಣಮೃಗಗಳ ಸಾವಿನ ಕೇಸ್: ಗೊಂದಲ ಮೂಡಿಸಿರುವ ಅರಣ್ಯ ಅಧಿಕಾರಿಗಳ ಹೇಳಿಕೆ