IND vs SA: ಸೌತ್ ಆಫ್ರಿಕಾ ತಂಡಕ್ಕೆ ಮಾರಕ ವೇಗಿ ಎಂಟ್ರಿ
India vs South Africa Test: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ರೋಚಕ ಜಯ ಸಾಧಿಸಿತ್ತು. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದ ಕೊನೆಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾಗೆ 124 ರನ್ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿ ಭಾರತ ತಂಡ 30 ರನ್ಗಳಿಂದ ಸೋಲನುಭವಿಸಿತ್ತು. ಇದೀಗ ಉಭಯ ತಂಡಗಳು ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ.
ಭಾರತ ಮತ್ತು ಸೌತ್ ಆಫ್ರಿಕಾ (India vs South Africa) ನಡುವಣ ದ್ವಿತೀಯ ಟೆಸ್ಟ್ ಪಂದ್ಯವು ಶನಿವಾರದಿಂದ (ಸೆ.22) ಶುರುವಾಗಲಿದೆ. ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಸೌತ್ ಆಫ್ರಿಕಾ ತಂಡಕ್ಕೆ ಮಾರಕ ವೇಗಿ ಎಂಟ್ರಿ ಕೊಟ್ಟಿದ್ದಾರೆ.
ಇತ್ತ ಕಗಿಸೊ ರಬಾಡ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವುದು ಖಚಿತವಾಗುತ್ತಿದ್ದಂತೆ ಸೌತ್ ಆಫ್ರಿಕಾ ತಂಡವು ಲುಂಗಿ ಎನ್ಗಿಡಿಯನ್ನು ತಂಡಕ್ಕೆ ಕರೆಸಿಕೊಂಡಿದೆ. ಅದರಂತೆ ಗುವಾಹಟಿಯಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಲುಂಗಿ ಎನ್ಗಿಡಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಸೌತ್ ಆಫ್ರಿಕಾ ವೇಗಿ ಕಗಿಸೊ ರಬಾಡ ಹೊರಗುಳಿದಿದ್ದರು. ಪೆಕ್ಕೆಲುಬಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರಬಾಡ ಇದೀಗ ದ್ವಿತೀಯ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.
ಸೌತ್ ಆಫ್ರಿಕಾ ಟೆಸ್ಟ್ ತಂಡ: ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಐಡೆನ್ ಮಾರ್ಕ್ರಾಮ್, ಜುಬೇರ್ ಹಮ್ಝ, ಡೆವಾಲ್ಡ್ ಬ್ರೆವಿಸ್, ಸೆನುರಾನ್ ಮುತ್ತುಸಾಮಿ, ಕಾರ್ಬಿನ್ ಬಾಷ್, ಮಾರ್ಕೊ ಯಾನ್ಸೆನ್, ವಿಯಾನ್ ಮುಲ್ಡರ್, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ನೆ, ರಯಾನ್ ರಿಕೆಲ್ಟನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಸೈಮನ್ ಹಾರ್ಮರ್, ಲುಂಗಿ ಎನ್ಗಿಡಿ.
ಸೌತ್ ಆಫ್ರಿಕಾ ಪರ 20 ಟೆಸ್ಟ್ ಪಂದ್ಯಗಳನ್ನಾಡಿರುವ ಲುಂಗಿ ಎನ್ಗಿಡಿ ಒಟ್ಟು 58 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಲ್ಲದೆ 2025ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿ ಸೌತ್ ಆಫ್ರಿಕಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಎನ್ಗಿಡಿ ಪ್ರಮುಖ ಪಾತ್ರವಹಿಸಿದ್ದರು. ಇದಾದ ಬಳಿಕ ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಲುಂಗಿ ಎನ್ಗಿಡಿ ಇದೀಗ ಮತ್ತೆ ರೆಡ್ ಬಾಲ್ ಕ್ರಿಕೆಟ್ಗೆ ಮರಳಿದ್ದಾರೆ.
ಇನ್ನಷ್ಟು ಓದಿರಿ:
ಟೆಸ್ಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮುಶ್ಫಿಕುರ್ ರಹೀಮ್