belagavi news :
ಮುಖ್ಯಾಂಶಗಳು:
ಜೂನ್ 28ರಂದು ರಾಷ್ಟ್ರೀಯ ಲಸಿಕಾ ದಿನ
64.84 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವ ಗುರಿ
ಮಕ್ಕಳಿಗೆ ಲಸಿಕೆ ಹಾಕಿಸಲು ಸಚಿವ ಯುಟಿ ಖಾದರ್ ಮನವಿ
ಬೆಂಗಳೂರು: ಜೂನ್ 28 ರಂದು ರಾಷ್ಟ್ರೀಯ ಲಸಿಕಾ ದಿನವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ಆರೋಗ್ಯ ಸಚಿವ ಯು.ಟಿ ಖಾದರ್ ಮನವಿ ಮಾಡಿದ್ದಾರೆ.
ಪೋಲಿಯೋ ರೋಗ ಸಂಪೂರ್ಣವಾಗಿ ನಿರ್ಮೂಲನೆಯತ್ತ ಭಾರತ ಸಾಗುತ್ತಿದ್ದರು, ಪಾಕಿಸ್ತಾನ್ ಮತ್ತು ಅಫ್ಘಾನಿಸ್ತಾನದಲ್ಲಿ ಇನ್ನೂ ವೈರಸ್ ಸಕ್ರಿಯವಾಗಿರುವುದರಿಂದ ಭಾರತದಲ್ಲಿ ಮತ್ತೆ ರೋಗ ಹರಡುವ ಅಪಾಯವನ್ನು ತಡೆಯಲು ಲಸಿಕೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಲಸಿಕೆ ಪ್ರಮುಖ ಪಾತ್ರ ವಹಿಸುವುದರಿಂದ, ಯಾವುದೇ ಪೋಷಕರು ನಿರ್ಲಕ್ಷ್ಯ ಮಾಡದೇ ತಮ್ಮ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಭಾರತವು 140 ಕೋಟಿ ಜನಸಂಖ್ಯೆ ವೈವಿಧ್ಯಮಯ ಭೌಗೋಳಿಕ ಪರಿಸ್ಥಿತಿ ಹಾಗೂ ಹಲವು ಸವಾಲುಗಳ ನಡುವೆಯೂ ಪೋಲಿಯೋ ಮುಕ್ತ ರಾಷ್ಟ್ರವಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಾಧನೆಯಾಗಿದೆ ಎಂದು ಸಚಿವರು ಹೇಳಿದ್ದಾರೆ. ಈ ಸಾಧನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರಂತರ ಪ್ರಯತ್ನ, ಆರೋಗ್ಯ ಇಲಾಖೆಯ ಕಾರ್ಯನಿಷ್ಠೆ ಹಾಗೂ ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತರು, ಎನ್ ಜಿಒಗಳು ಮತ್ತು ಶಿಕ್ಷಣ ಇಲಾಖೆಯ ಸಮನ್ವಿತ ಶ್ರಮದಿಂದ ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೋಲಿಯೋ ನಿರ್ಮೂಲನೆಗಾಗಿ ನಡೆದ ಈ ದೀರ್ಘ ಹೋರಾಟದಲ್ಲಿ ಪ್ರತಿಯೊಬ್ಬರ ಪಾತ್ರವು ಮಹತ್ವದ್ದಾಗಿದ್ದು, ಮುಂದೆಯೂ ಇದೇ ರೀತಿಯ ಸಹಕಾರ ಹಾಗೂ ಜಾಗೃತಿಯನ್ನು ಮುಂದುವರಿಸಬೇಕಿದೆ ಎಂದು ಸಚಿವರು ಹೇಳಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಸುಮಾರು 64.84 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಸುರಕ್ಷಿತವಾಗಿಡಲು ಲಸಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯವನ್ನು ಪೋಲಿಯೋ ಮುಕ್ತವಾಗಿಯೇ ಉಳಿಸುವ ಜವಾಬ್ದಾರಿ ಸರ್ಕಾರ ಮಾತ್ರವಲ್ಲ, ಪ್ರತಿಯೊಬ್ಬ ಪೋಷಕರ ಹಾಗೂ ನಾಗರಿಕರ ಮೇಲಿದೆ ಎಂದು ಸಚಿವರು ಮನವಿ ಮಾಡಿದ್ದಾರೆ ಲಸಿಕೆ ಅಭಿಯಾನದಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
Also Read:
ಪರಿಷತ್ ಚುನಾವಣೆ ವಿವಾದ : ಬಿಜೆಪಿ ವಿರುದ್ಧ ಅಡ್ಡ ಮತದಾನ ಬಾಂಬ್ ಸಿಡಿಸಿದ ಎಸ್.ಟಿ. ಸೋಮಶೇಖರ್