Belagavi news:
ನವದೆಹಲಿ: ಆರು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ನಾರ್ವೆಗೆ ಆಗಮಿಸಿದ್ದು, 3ನೇ ಭಾರತ - ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ನಾರ್ವೆ ಪ್ರವಾಸದ ವೇಳೆ ನಾರ್ಡಿಕ್ ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷಿಯ ಮಾತುಕತೆ ನಡೆಸಲಿರುವ ಪ್ರಧಾನಿ, ವ್ಯಾಪಾರ, ಹೂಡಿಕೆ, ಹಸಿರು ಇಂಧನ, ತಂತ್ರಜ್ಞಾನ ಮತ್ತು ಸಂಶೋಧನಾ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ವಿಶೇಷವೆಂದರೆ, 43 ವರ್ಷಗಳ ಬಳಿಕ ಭಾರತದ ಪ್ರಧಾನಿಯೋಬ್ಬರು ನಾರ್ವೆ ಪ್ರವಾಸ ಕೈಗೊಂಡಿರುವುದು ರಾಜತಾಂತ್ರಿಕವಾಗಿ ಮಹತ್ವ ಪಡೆದಿದೆ. ಈ ವೇಳೆ ಪ್ರಧಾನಿ ಮೋದಿ, ನಾರ್ವೆಯ ರಾಜ ಕಿಂಗ್ ಹೆರಾಲ್ಡ್ V ಹಾಗೂ ರಾಣಿ ಸೋಂಜಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಅದೇ ವೇಳೆ ನಾರ್ವೇಜಿಯನ್ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರೊಂದಿಗೆ ದ್ವಿ ಪಕ್ಷಿಯ ಸಭೆ ನಡೆಸಲಿದ್ದು ಭಾರತ - ನಾರ್ವೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ. ಜೊತೆಗೆ ಭಾರತ - ನಾರ್ವೆ ವ್ಯವಹಾರ ಮತ್ತು ಸಂಶೋಧನಾ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.
ಈ ಭೇಟಿ ಮೂಲಕ ಭಾರತ ಮತ್ತು ನಾರ್ಡಿಕ್ ರಾಷ್ಟ್ರಗಳ ನಡುವಿನ ಆರ್ಥಿಕ ತಾಂತ್ರಿಕ ಮತ್ತು ಹಸಿರು ಅಭಿವೃದ್ಧಿ ಸಹಕಾರಕ್ಕೆ ಹೊಸ ವೇಗ ಸಿಗುವ ನಿರೀಕ್ಷೆ ಇದೆ.
ಭಾರತ - ನಾರ್ವೆ ಸಂಬಂಧಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಿ. ದ್ವಿಪಕ್ಷಿಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳನ್ನು ಅನ್ವೇಷಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಭೇಟಿ ಮಹತ್ವ ಪಡೆದಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಭೇಟಿಯ ಪ್ರಮುಖ ಕೇಂದ್ರೀಕರಣ ವ್ಯಾಪಾರ ಮತ್ತು ಹೂಡಿಕೆ ವಿಸ್ತರಣೆಯಾಗಿದೆ. ಭಾರತ ಮತ್ತು ನಾರ್ವೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (FTA) ಹಾಗೂ ಆರ್ಥಿಕ ಪಾಲುದಾರಿಕೆ ಒಪ್ಪಂದಗಳ ಕುರಿತು ಚರ್ಚೆ ನಡೆಯಲಿದ್ದು, ವಿಶೇಷವಾಗಿ ಸ್ವಚ್ಛ ಮತ್ತು ಹಸಿರು ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಹಾಗೂ ನೀಲಿ ಆರ್ಥಿಕತೆ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಒತ್ತು ನೀಡಲಾಗುತ್ತಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಈ ಭೇಟಿ ಮೂಲಕ ಸುಮಾರು 2.73 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ವ್ಯಾಪರ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಜೊತೆಗೆ ಭಾರತೀಯ ಬಂಡವಾಳ ಮಾರುಕಟ್ಟೆಯಲ್ಲಿ ನಾರ್ವೆಯ ಸರ್ಕಾರಿ ಪಿಂಚಣಿ ನಿಧಿಯಿಂದ ಸುಮಾರು 28 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಪ್ರೋತ್ಸಾಹಿತವಾಗುವ ಸಾಧ್ಯತೆ ಇದೆ.
ಈ ಬೆಳವಣಿಗೆಗಳು ಭಾರತ - ನಾರ್ವೆ ಆರ್ಥಿಕ ಸಂಬಂಧಗಳಿಗೆ ಹೊಸ ಬಲ ನೀಡುವ ಜೊತೆಗೆ ಹಸಿರು ಅಭಿವೃದ್ಧಿ ಮತ್ತು ಜಾಗತಿಕ ಸಹಕಾರದತ್ತ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.
3ನೇ ಭಾರತ - ನಾರ್ಡಿಕ್ ಸಂಘ ಸಭೆ ಮೇ 19ರಂದು ನಾರ್ವೆಯ ರಾಜಧಾನಿ ಒಸ್ಲೋದಲ್ಲಿ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾರ್ಡಿಕ್ ರಾಷ್ಟ್ರಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರೆ, ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫೆಡರಿಕ್ಸೆನ್ , ಫಿನ್ಲ್ಯಾಂಡ್ ಪ್ರಧಾನಿ ಪೆಟ್ಟೇರಿ ಓರ್ಪೊ, ಐಸ್ಲ್ಯಾಂಡ್ ಪ್ರಧಾನಿ ಕ್ರಿಸ್ಟ್ರುನ್ ಪ್ರಾಸ್ಟಾಡೊಟ್ಟಿರ್ ಹಾಗೂ ಸ್ವೀಡನ್ ಪ್ರಧಾನಿ ಉಲ್ಪ್ ಕ್ರಿಸ್ಟರ್ಸನ್ ಶೃಂಗಸಭೆಯಲ್ಲಿ ಉಪಸ್ಥಿತರಿರುವರು .
ಈ ಶೃಂಗಸಭೆಯಲ್ಲಿ ಭಾರತ ಮತ್ತು ನಾರ್ಡಿಕ್ ರಾಷ್ಟ್ರಗಳ ನಡುವಿನ ದ್ವಿ ಪಕ್ಷಿಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ. ವಿಶೇಷವಾಗಿ ತಂತ್ರಜ್ಞಾನ, ನಾವಿನ್ಯತೆ, ಹಸಿರು ಪರಿವರ್ತನೆ, ನವೀಕರಿಸಬಹುದಾದ ಇಂಧನ, ಸುಸ್ಥಿರ ಅಭಿವೃದ್ಧಿ, ರಕ್ಷಣಾ ಸಹಕಾರ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಪಾಲುದಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಸಿರು ಆರ್ಥಿಕತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ - ನಾರ್ಡಿಕ್ ಸಹಕಾರ ಹೊಸ ಅವಕಾಶಗಳನ್ನು ತೆರೆದಿಡುವ ನಿರೀಕ್ಷೆ ಇದೆ. ಜೊತೆಗೆ ಈ ಭೇಟಿ ಭಾರತ ಮತ್ತು ನಾರ್ಡಿಕ್ ದೇಶಗಳ ನಡುವಿನ ವ್ಯಾಪಾರ ಹಾಗೂ ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಸಹಕಾರಿಯಾಗಲಿದೆ.
Also Read:
ವಿಕ್ಕಿ ಶೆಟ್ಟಿ ಹೆಸರು ಹೇಳಿ ಉದ್ಯಮಿಗೆ ಬೆದರಿಕೆ: ಬೆಂಗಳೂರಿನಲ್ಲಿ ಪೊಲೀಸ್ ತನಿಖೆ ಆರಂಭ