Belagavi News:
ನವದೆಹಲಿ: ಮೇವು ಹಗರಣ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸುವಂತೆ ಸಿಬಿಐ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಹಲವು ವರ್ಷಗಳಿಂದ ಜಾಮೀನಿನ ಮೇಲೆ ಇರುವಲಾಳು ಪ್ರಸಾದ್ ಯಾದವ್ ಅವರ ಸ್ವಾತಂತ್ರ್ಯದಲ್ಲಿ ಈಗ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಳೆ ಅವರಿದ್ದ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೆಯಿತು. ಸಿಬಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್. ವಿ. ರಾಜು ವಾದ ಮಂಡಿಸಿದರೆ, ಲಾಲು ಪ್ರಸಾದ್ ಯಾದವ್ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.
ವಿಚಾರಣೆ ವೇಳೆ ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಿ ಸುಮಾರು ಎಂಟು ವರ್ಷಗಳು ಕಳೆದಿವೆ ಎಂದು ನ್ಯಾಯಪೀಠ ಗಮನ ಸೆಳೆದಿತು. ಈ ಹಂತದಲ್ಲಿ ಹೈಕೋರ್ಟ್ ನೀಡುವ ಜಾಮೀನು ಆದೇಶದಲ್ಲಿ ಮಧ್ಯ ಪ್ರವೇಶಿಸುವ ಉದ್ದೇಶ ತಮ್ಮದಲ್ಲ ಎಂದು ಸ್ಪಷ್ಟಪಡಿಸಿತು.
ಆದರೆ, ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಲಾಲು ಪ್ರಸಾದ್ ಯಾದವ್ ಹಾಗೂ ಸಿಬಿಐ ಸಲ್ಲಿಸಿರುವ ಮುಖ್ಯ ಮೇಲ್ಮನವಿಗಳ ವಿಚಾರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಶಿಕ್ಷೆಯನ್ನು ಪ್ರಶ್ನಿಸಿ ಲಾಲು ಪ್ರಸಾದ್ ಯಾದವ್ ಸಲ್ಲಿಸಿರುವ ಮೇಲ್ಮನವಿ ಹಾಗೂ ಶಿಕ್ಷೆ ಹೆಚ್ಚಿಸುವಂತೆ ಸಿಬಿಐ ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಸಂಬಂಧಿತ ಹೈಕೋರ್ಟ್ ಗೆ ನಿರ್ದೇಶನ ನೀಡಲಾಗಿದೆ.
ಜಾಮೀನು ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಪುನರುಚ್ಚರಿಸಿದ ಸುಪ್ರೀಂ ಕೋರ್ಟ್, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಮೇಲ್ಮನವಿಗಳ ವಿಚಾರಣೆಯನ್ನು ತ್ವರಿತಗೊಳಿಸುವುದು ಅಗತ್ಯ ಎಂದ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಸಿಬಿಐ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್. ವಿ. ರಾಜು, ಲಾಲು ಪ್ರಸಾದ್ ಯಾದವ್ ಅವರ ಶಿಕ್ಷೆಯನ್ನು ಅಮಾನತುಗೊಳಿಸುವ ಮನವಿಯನ್ನು ಈ ಹಿಂದೆ ಎರಡು ಬಾರಿ ಅರ್ಹತೆಯ ಆಧಾರದ ಮೇಲೆ ತಿರಸ್ಕರಿಸಲಾಗಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಬಳಿಕ, ಅವರು ಶಿಕ್ಷೆಯ ಶೇಕಡಾ 50ರಷ್ಟು ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂಬ ಆಧಾರದ ಮೇಲೆ ಹೈಕೋರ್ಟ್ ಜಾಮೀನು ನೀಡಿದೆ. ಆದರೆ, ಕಾರಾಗೃಹ ವಾಸದ ಅವಧಿಯ ಲೆಕ್ಕಾಚಾರದಲ್ಲೇ ತಪ್ಪಾಗಿದೆ ಎಂದು ಸಿಬಿಐ ವಾದಿಸಿತು.
ಇದಕ್ಕೆ ಪ್ರತಿವಾದಿಸಿದೆ ಹಿರಿಯ ವಕೀಲ ಕಪಿಲ್ ಸಿಬಲ್, ಲಾಲು ಪ್ರಸಾದ್ ಯಾದವ್ ಅವರು ಒಂದು ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರವೇ ಮತ್ತೊಂದು ಶಿಕ್ಷೆ ಅನುಭವಿಸಬೇಕು ಎಂಬ ಸಿಬಿಐ ವಾದವನ್ನು ತಳ್ಳಿಹಾಕಿದರು. ಜಾಮೀನು ನೀಡುವ ಸಂದರ್ಭದಲ್ಲಿ ಹೈಕೋರ್ಟ್ ತನ್ನ ನ್ಯಾಯಾಂಗ ವಿವೇಚನೆಯನ್ನು ಬಳಸಿದ್ದು, ಅದು ಕಾನೂನುಬದ್ಧವಾಗಿದೆ ಎಂದು ಅವರು ವಾದಿಸಿದರು.
ಅಲ್ಲದೆ, ಏಕಕಾಲದಲ್ಲಿ ಅಥವಾ ಸತತವಾಗಿ ಶಿಕ್ಷೆ ಅನುಭವಿಸುವ ಬಗ್ಗೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 427 ಅಂತಿಮ ತೀರ್ಪಿನ ಹಂತದಲ್ಲಿ ಮಾತ್ರ ಅನ್ವಯವಾಗುತ್ತದೆ. ಮಧ್ಯಂತರ ಜಾಮೀನು ಅಥವಾ ಶಿಕ್ಷೆ ಅಮಾನತ್ತು ವಿಚಾರದಲ್ಲಿ ಅದನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಸಿಬಲ್ ನ್ಯಾಯಪೀಠಕ್ಕೆ ವಿವರಿಸಿದರು.
ಎರಡು ಪಕ್ಷಗಳ ವಾದ ಆಲಿಸಿದ ಸುಪ್ರೀಂ ಕೋರ್ಟ್, ಜಾಮೀನು ಆದೇಶವನ್ನು ಮರುಪರಿಶೀಲಿಸುವ ಬದಲು ಬಾಕಿ ಇರುವ ಮೇಲ್ಮನವಿಗಳ ವಿಚಾರಣೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು.
ಚೈಬಾಸಾ ಖಜಾನೆ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಶಿಕ್ಷೆ ಅಮಾನತುಗೊಳಿಸಿ ಜಾರ್ಖಂಡ್ ಹೈಕೋರ್ಟ್ ನೀಡಿದ್ದ ಆದೇಶ ಸೇರಿದಂತೆ ಹಲವು ಆದೇಶಗಳನ್ನು ಸಿಬಿಐ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದೆ. ಜಾಮೀನು ನೀಡುವ ಸಂದರ್ಭದಲ್ಲಿ 'ಅರ್ಧ ಶಿಕ್ಷೆಯ ಅವಧಿ ಪೂರ್ಣಗೊಳಿಸಿದ' ತತ್ವವನ್ನು ಹೈಕೋರ್ಟ್ ತಪ್ಪಾಗಿ ಅನ್ವಯಿಸಿದೆ ಎಂದು ಸಿಬಿಐ ತನ್ನ ಅರ್ಜಿಯನ್ನು ವಾದಿಸಿದೆ.