BELAGAVI NEWS:
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ' ಚಿನ್ನಾರಿ ಮುತ್ತ' ಖ್ಯಾತಿಯ ವಿಜಯ್ ರಾಘವೇಂದ್ರ ಅವರು ಒಂದರ ಹಿಂದೊಂದರಂತೆ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ' ರಿಪ್ಪನ್ ಸ್ವಾಮಿ', ' ರಾಕ್ಷಸ' ವೆಬ್ ಸರಣಿ ಬಳಿಕ ಇದೀಗ ಅವರ ಹಲವು ಹೊಸ ಪ್ರಾಜೆಕ್ಟ್ ಗಳು ಸೆಟ್ಟೇರಿದ್ದು, ' ಮಹಾನ್' ಚಿತ್ರವು ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ.
ಶೀರ್ಷಿಕೆ, ಕಥಾಹಂದರ ಹಾಗೂ ತಾರಾಬಳಗದ ಕಾರಣದಿಂದಲೇ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಖತ್ ಚರ್ಚೆಗೆ ಕಾರಣವಾಗಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪಿ.ಸಿ. ಶೇಖರ್ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಇದೀಗ ಈ ಚಿತ್ರಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಎಂಟ್ರಿಯಾಗಿದ್ದು, ಸಿನಿಮಾ ಸುತ್ತಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಚಿತ್ರರಸಿಕರ ಗಮನ ಸೆಳೆಯುತ್ತಿದೆ.
'ಮಾಸ್ ಲೀಡರ್' ಚಿತ್ರದ ನಂತರ ಬಹಳ ವರ್ಷಗಳ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಒಂದೇ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ಈ ಮೂಲಕ ಈ ಸಂಬಂಧಿಕರು ಸಜ್ಜಾಗಿದ್ದಾರೆ.
' ಮಹಾನ್' ಚಿತ್ರವು ರೈತರ ಕುರಿತಾದ ಕಥಾಹಂದರವನ್ನು ಹೊಂದಿದ್ದು, ಇಲ್ಲಿ ಬರುವ ಪ್ರತಿಯೊಂದು ಪಾತ್ರವೂ ಕಥೆಗೆ ಸಮಾನವಾಗಿ ಮಹತ್ವದ್ದಾಗಿರುತ್ತದೆ. ಕುಟುಂಬದಲ್ಲಿ ತಂದೆ-ತಾಯಿ ಹೇಗೆ ತಪ್ಪುಗಳನ್ನು ಸರಿಪಡಿಸಿ ದಾರಿ ತೋರಿಸುತ್ತಾರೋ, ಅದೇ ರೀತಿಯಲ್ಲಿ ಸಮಾಜದಲ್ಲಿ ಉಂಟಾಗುವ ತೊಂದರೆಗಳನ್ನು ಸರಿಪಡಿಸಲು ' ಮಹಾನ್' ವ್ಯಕ್ತಿಯೊಬ್ಬರ ಅಗತ್ಯವಿರುತ್ತದೆ ಎಂಬ ಆಳವಾದ ಸಂದೇಶದೊಂದಿಗೆ ಈ ಚಿತ್ರ ರೂಪುಗೊಂಡಿದೆ.
ಈ ಚಿತ್ರದಲ್ಲಿ ಆ "ಮಹಾನ್ " ವ್ಯಕ್ತಿಯ ಪಾತ್ರದಲ್ಲಿ ಡಾ.ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದು, ಅವರು ಹಿರಿಯ ವಕೀಲರಾಗಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಈ ಪಾತ್ರ ಕಥೆಯಲ್ಲಿ ಅತ್ಯಂತ ನಿರ್ಣಾಯಕವಾಗಿದ್ದು, ಸಮಾಜದ ನ್ಯಾಯ ಮತ್ತು ಸತ್ಯದ ಪರ ನಿಲ್ಲುವ ಶಕ್ತಿಶಾಲಿ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ.
ಈ ಕುರಿತು ಮಾತನಾಡಿದ ನಿರ್ದೇಶಕ ಪಿ.ಸಿ. ಶೇಖರ್, " ಪ್ರತಿ ನಿರ್ದೇಶಕರಿಗೂ ಶಿವರಾಜ್ ಕುಮಾರ್ ಅವರೊಂದಿಗೆ ಸಿನಿಮಾ ಮಾಡುವ ಆಸೆ ಇರುತ್ತದೆ. ನನಗೂ ಅದು ಬಹುಕಾಲದ ಕನಸು. ಈಗ ಆ ಅವಕಾಶ ದೊರೆತಿದ್ದು, ಅತ್ಯಂತ ಸಂತೋಷ ತಂದಿದೆ. ಅವರ ಅಭಿನಯ ಮತ್ತು ಉಪಸ್ಥಿತಿ ನಿರ್ಮಾಪಕ ಪ್ರಕಾಶ್ ಬುದ್ದೂರು ಅವರಿಗೂ ಸಂತೋಷ ನೀಡಿದೆ. ಇಡೀ ಚಿತ್ರತಂಡದ ಪರವಾಗಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು" ಎಂದು ತಿಳಿಸಿದ್ದಾರೆ.
ಯಾರು 'ಮಹಾನ್?' ಎಂಬ ಪ್ರಶ್ನೆಗೆ ನಿರ್ದೇಶಕರು ಚಿತ್ರದ ಕಥಾಹಂದರದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ, ನಿರ್ದೇಶಕ ಪಿ.ಸಿ. ಶೇಖರ್ ಅವರು, "ಇಲ್ಲಿ 'ಮಹಾನ್' ಎಂದರೆ ರೈತ. ರೈತರ ಬವಣೆಗಳನ್ನು ತಿಳಿಸುವ ಕಥೆ ನಮ್ಮದು. ದೇಶವನ್ನು ಕಾಯುವ ಸೈನಿಕರು ಎಷ್ಟು ಮುಖ್ಯವೋ, ಅದೇ ರೀತಿ ರೈತರು ಕೂಡ ಮುಖ್ಯ" ಎಂದು ಹೇಳಿದ್ದಾರೆ.
ಈ ಚಿತ್ರದಲ್ಲಿ ರೈತರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಅವರ ಪರವಾಗಿ ಧ್ವನಿ ಎತ್ತುವ ಪಾತ್ರದಲ್ಲಿ ನಟ ವಿಜಯ್ ರಾಘವೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ರೈತನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಬಹುತಾರಾಗಣದ ಈ ಚಿತ್ರದಲ್ಲಿ ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ, ಕಿರಣ್ ಶ್ರೀನಿವಾಸ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸುತ್ತಿದ್ದಾರೆ. ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಈ ಚಿತ್ರ ಇದೇ ವರ್ಷ ತೆರೆಗೆ ಬರಲು ಸಜ್ಜಾಗುತ್ತಿದೆ. ಬಲಿಷ್ಠ ತಾರಾಬಳಗದ ಕಾರಣ ಸಿನಿಮಾ ಸುತ್ತಲಿನ ಕುತೂಹಲ ದಿನೇದಿನೇ ಹೆಚ್ಚುತ್ತಿದೆ.
ಇನ್ನೂ, ಇತ್ತೀಚೆಗೆ ರಾಮ್ ಚರಣ್ ಅವರ ' ಪೆದ್ದಿ ' ಚಿತ್ರದಲಿ ಕಾಣಿಸಿಕೊಂಡಿದ ಶಿವರಾಜ್ ಕುಮಾರ್ , ' 666 ಆಪರೇಷನ್ ಡ್ರೀಮ್ ಥಿಯೇಟರ್ ', ' ಬೇಲ್ ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸುತ್ತಿದ್ದು, ಅವುಗಳ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.