belaagvi news :
ಬಳ್ಳಾರಿಯಲ್ಲಿ ಆಘಾತಕಾರಿ ಘಟನೆ : ಮದುವೆಯಾದ ದಿನವೇ ನವ ವಿವಾಹಿತ ವರನ ಹತ್ಯೆ
ಮದುವೆ ಹಾಗೂ ಆರಕ್ಷತೆ ಸಮಾರಂಭದಲ್ಲಿದ್ದ ಕುಟುಂಬಕ್ಕೆ ಕೆಲವೇ ಗಂಟೆಗಳಲ್ಲಿ ಬಾರಿ ಆಘಾತ ಎದುರಾಗಿದೆ. ಮದುವೆಯಾದ ದಿನವೇ ನವ ವಿವಾಹಿತ ವರನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಗರದ 29ನೇ ವಾರ್ಡ್ ನ ಬಟ್ಟಿ ಏರಿಯಾದ ಸಮತಾ ನಗರದಲ್ಲಿ ಗುರುವಾರ ನಡೆದಿದೆ.
ಮೃತನನ್ನು ನಬಿ ರಸೂಲ್ ಎಂದು ಗುರುತಿಸಲಾಗಿದೆ. ಅವರು ಬೋಟಿ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದು, ಜೊತೆಗೆ ಗಾರೆ ಕೆಲಸವನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 15 ದಿನಗಳ ಹಿಂದೆ ವಿಚ್ಛೇದನ ಪಡೆದಿದ್ದ ಮಹಿಳೆಯನ್ನು ನಬಿ ರಸೂಲ್ ಪ್ರೀತಿಸಿ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಬಳಿಕ ಇಬ್ಬರೂ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಮನೆಗೆ ಮರಳಿದ್ದು, ಎರಡು ಕುಟುಂಬಗಳ ಒಪ್ಪಿಗೆಯೊಂದಿಗೆ ಗುರುವಾರ ಮದುವೆ ಹಾಗೂ ಆರಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಆದರೆ ಮದುವೆಯ ಸಂಭ್ರಮ ಮುಗಿಯುವ ಮುನ್ನವೇ ನಡೆದ ಈ ಹತ್ಯೆ ಘಟನೆ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಹತ್ಯೆಯ ಹಿಂದಿನ ಕಾರಣ ಮತ್ತು ಆರೋಪಿಗಳ ಹತ್ಯೆಗೆ ಮುಂದಾಗಿದ್ದಾರೆ.
ಮದುವೆಯಾದ ಕೆಲವೇ ಗಂಟೆಗಳಲ್ಲಿ ವರನ ಹತ್ಯೆ:ಬಳ್ಳಾರಿಯಲ್ಲಿ ತನಿಖೆ ತೀವ್ರ
ಆರಕ್ಷತೆ ಕಾರ್ಯಕ್ರಮ ಮುಗಿದ ಬಳಿಕ ರಾತ್ರಿ ಸುಮಾರು 11:30 ರ ವೇಳೆಗೆ ಗೆಳೆಯನಿಂದ ಕರೆ ಬಂದಿದೆ ಎಂದು ಹೇಳಿ ನಬಿ ರಸೂಲ್ ಮನೆಯಿಂದ ಹೊರಟಿದ್ದರು ಎನ್ನಲಾಗಿದೆ. ಆದರೆ, ಅವರು ಮತ್ತೆ ಮನೆಗೆ ವಾಪಸ್ ಆಗಿರಲಿಲ್ಲ. ಬಳಿಕ ತಡೆ ರಾತ್ರಿ ಸುಮಾರು 2 ಗಂಟೆ ವೇಳೆಗೆ ಮನೆಯಿಂದ ಸುಮಾರು 700 ಮೀಟರ್ ದೂರದಲ್ಲಿ ರಕ್ತದ ಮಡುವಿನಲ್ಲಿಅವರ ಮೃತ ದೇಹ ಪತ್ತೆಯಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್, ಡಿವೈಎಸ್ಪಿ ಸ್ವನದಾಳ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಸ್ಥಳ ಮಹಾಜರು ನಡೆಸಿ, ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಆರೋಪಿಗಳ ಪತ್ತೆಗೆ ತನಿಕೆ ಆರಂಭಿಸಿದ್ದಾರೆ.
ನಬಿ ರಸೂಲ್ ಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಪ್ರೇಮ ವಿವಾಹದ ಹಿನ್ನೆಲೆ, ವೈಯಕ್ತಿಕ ದ್ವೇಷ ಅಥವಾ ಇತರೆ ಕಾರಣಗಳಿದೆಯೇ ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮದುವೆಯಾದ ಕೆಲವೇ ಗಂಟೆಗಳಲ್ಲಿ ನಡೆದ ಈ ಕೊಲೆ ಪ್ರಕರಣ ಬಳ್ಳಾರಿ ನಗರದಲ್ಲಿ ಸಂಚಲನ ಮೂಡಿಸಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
Also Read:
ಡಿಕೆಶಿ ಕ್ಯಾಬಿನೆಟ್ ವಿಸ್ತರಣೆ : ಹಳೆಯವರಿಗೆ ಶಾಕ್, 60% ಹೊಸ ಮುಖಗಳಿಗೆ ಸ್ಥಾನ