Belagavi News :
ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸುವ ವೈದ್ಯರನ್ನು ಗೌರವಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ವೈದ್ಯರನ್ನು ಇಂದಿಗೂ ದೇವರ ಸಮಾನರೆಂದು ಪರಿಗಣಿಸಲಾಗುತ್ತದೆ ಆದರೂ, ಇತ್ತೀಚಿನ ದಿನಗಳಲ್ಲಿ ವೈದ್ಯರ ಸಲಹೆ ಇಲ್ಲದೆ ಸ್ವಯಂ ಔಷಧಿ ಸೇವಿಸುವ ಪ್ರವೃತ್ತಿ ಹೆಚ್ಚಾಗಿರುವುದು ಆರೋಗ್ಯ ತಜ್ಞರ ಆತಂಕಕ್ಕೆ ಕಾರಣವಾಗಿದೆ.
ತಲೆನೋವು, ಜ್ವರ, ಆಸಿಡಿಟಿ, ಶೀತ, ಕೆಮ್ಮು ಅಥವಾ ದೇಹ ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸದೆ ನೇರವಾಗಿ ಮಾತ್ರ ಸೇವಿಸುವ ಅಭ್ಯಾಸ ಹಲವರಲ್ಲಿದೆ. ಆದರೆ ವೈದ್ಯರ ಪ್ರಕಾರ, ಈ ರೀತಿಯ ಸ್ವಯಂ ಚಿಕಿತ್ಸೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ವಿಶೇಷವಾಗಿ ವೈದ್ಯರ ಸಲಹೆ ಇಲ್ಲದೆ ಆ್ಯಂಟಿಬಯೋಟಿಕ್ ಔಷಧಿಗಳನ್ನು ಸೇವಿಸುವುದು ಅತ್ಯಂತ ಅಪಾಯಕಾರಿ. ಇದರಿಂದ ಆ್ಯಂಟಿಬಯೋಟಿಕ್ ಪ್ರತಿರೋಧ ಉಂಟಾಗಿ,ಮುಂದಿನ ದಿನಗಳಲ್ಲಿ ಸೋಂಕುಗಳಿಗೆ ಔಷಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡದ ಅಪಾಯ ಹೆಚ್ಚುತ್ತದೆ.
ಇದಲ್ಲದೆ, ಅತಿಯಾದ ಔಷದ ಬಳಕೆಯಿಂದ ಅಲರ್ಜಿ, ಯಕೃತ್ ಮತ್ತು ಮೂತ್ರಪಿಂಡ ಹಾನಿ, ಔಷಧಿಗಳ ಅಡ್ಡ ಪರಿಣಾಮಗಳು ಹಾಗೂ ಇತರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
ಆರೋಗ್ಯ ತಜ್ಞರು, ಯಾವುದೇ ಆರೋಗ್ಯ ಸಮಸ್ಯೆ ಮುಂದುವರೆದರೆ ಅಥವಾ ತೀವ್ರಗೊಂಡರೆ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆಯಂತೆ ಮಾತ್ರ ಔಷಧಿ ಸೇವಿಸಬೇಕು ಎಂದು ಸಲಹೆ ನೀಡುತ್ತಿದ್ದಾರೆ.
Self medication ಅಪಾಯಕಾರಿ - ಕಾರಣಗಳು, ಅಡ್ಡ ಪರಿಣಾಮಗಳು ಮತ್ತು ವೈದ್ಯರ ಎಚ್ಚರಿಕೆ :
ಇತ್ತೀಚಿನ ದಿನಗಳಲ್ಲಿ ಸಣ್ಣ ಆರೋಗ್ಯ ಸಮಸ್ಯೆಗಳಿಗೂ ವೈದ್ಯರ ಸಲಹೆ ಇಲ್ಲದೆ ಔಷದ ಸೇವಿಸುವ ಸ್ವಯಂ ಔಷಧಿ ಪದ್ಧತಿ ಹೆಚ್ಚಾಗುತ್ತಿದ್ದು, ಇದು ಆರೋಗ್ಯಕ್ಕೆ ಗಂಭೀರ ಅಪಾಯಕಾರಿಯಾಗಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಸ್ವಯಂ ಔಷಧಿ ಸೇವನೆ ಏಕೆ ಅಪಾಯಕಾರಿ ? :
ಪ್ರತಿಯೊಂದು ಔಷಧಿಯು ನಿರ್ದಿಷ್ಟ ಕಾಯಿಲೆಗೆ ನೀಡಲಾಗುತ್ತದೆ. ಕಾರಣ ತಿಳಿಯದೆ ಪದೇಪದೇ ಔಷಧಿ ಸೇವಿಸಿದರೆ ತಾತ್ಕಾಲಿಕವಾಗಿ ಲಕ್ಷಣಗಳು ಕಡಿಮೆಯಾಗಬಹುದು. ಆದರೆ ಮೂಲ ಕಾಯಿಲೆ ಪತ್ತೆಯಾಗದೇ ಇರುವ ಸಾಧ್ಯತೆ ಇರುತ್ತದೆ. ಇದರಿಂದ ಸಮಸ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರವಾಗುವ ಅಪಾಯ ಹೆಚ್ಚುತ್ತದೆ.
ಅಡ್ಡ ಪರಿಣಾಮಗಳ ಅಪಾಯ :
ಒಬ್ಬ ವ್ಯಕ್ತಿ ಈಗಾಗಲೇ ಬೇರೆ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಬೈತರ ಸಲಹೆ ಇಲ್ಲದೆ ಹೊಸ ಔಷಧಿ ಆರಂಭಿಸುವುದು ಅಪಾಯಕಾರಿ. ಔಷಧಿಗಳ ಪರಸ್ಪರ ಕ್ರಿಯೆಯಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ಆದ್ದರಿಂದ ವೈದ್ಯರನ್ನು ಭೇಟಿಯಾದಾಗ ತಾವು ತೆಗೆದುಕೊಳ್ಳುತ್ತಿರುವ ಎಲ್ಲಾ ಔಷಧಿಗಳು, ವಿಟಮಿನ್ ಗಳು ಹಾಗೂ ಆಯುರ್ವೇದ ಅಥವಾ ಹರ್ಬಲ್ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುವುದು ಅತ್ಯಂತ ಮುಖ್ಯ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಆ್ಯಂಟಿಬಯೋಟಿಕ್ ದುರುಪಯೋಗ ಬೇಡ :
ಅಗತ್ಯವಿಲ್ಲದೆ ಅಥವಾ ವೈದ್ಯರು ಸೂಚಿಸದ ಕೋರ್ಸ್ ಪೂರ್ಣಗೊಳಿಸದೆ ಆ್ಯಂಟಿ ಬಯೋಟಿಕ್ ಸೇವಿಸುವುದು ಅತ್ಯಂತ ಅಪಾಯಕಾರಿ. ಇದರಿಂದ ಆ್ಯಂಟಿಬಯೋಟಿಕ್ ರೆಸಿಸ್ಟೆನ್ಸ್ ಉಂಟಾಗಿ, ಮುಂದಿನ ದಿನಗಳಲ್ಲಿ ಸಾಮಾನ್ಯ ಸೋಂಕುಗಳಿಗೂ ಚಿಕಿತ್ಸೆ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಏನು ಮಾಡಬೇಕು ? :
ಸಣ್ಣ ಆರೋಗ್ಯ ಸಮಸ್ಯೆಗಳಿಗೆ ತಕ್ಷಣ ಮಾತ್ರೆಗಳನ್ನು ಪರಿಹಾರ ಎಂದು ಭಾವಿಸಬಾರದು. ಸಮಸ್ಯೆ ತೀವ್ರವಾಗಿದ್ದರೆ, ಪದೇ ಪದೇ ಮರುಕಳಿಸುತ್ತಿದ್ದರೆ ಅಥವಾ ಕಡಿಮೆಯಾಗದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸರಿಯಾದ ರೋಗ ನಿರ್ಣಯ ಮತ್ತು ಸೂಕ್ತ ಚಿಕಿತ್ಸೆ ಪಡೆಯುವುದೇ ಉತ್ತಮ ಆರೋಗ್ಯದ ಮೂಲವಾಗಿದೆ.