Belagavi news:
ಬೆಂಗಳೂರು: ವಿಧ್ವಂಸಕ ಕೃತ್ಯಗಳು ಅಥವಾ ಉಗ್ರ ಚಟುವಟಿಕೆಗಳು ನಡೆದ ಸಂದರ್ಭ ತುರ್ತಾಗಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ರಾಷ್ಟ್ರೀಯ ಭದ್ರತಾ ಪಡೆ ( ಎನ್ ಎಸ್ ಜಿ) ಕಮಾಂಡೋಗಳು ನಗರ ಪೊಲೀಸರ ಸಹಕಾರದೊಂದಿಗೆ ವಿಧಾನಸೌಧ ಆವರಣದಲ್ಲಿ ಅಣಕು ಕಾರ್ಯಾಚರಣೆ ನಡೆಸಿದರು.
ಕೇಂದ್ರ ಸರ್ಕಾರದ ಸೂಚನೆಯಂತೆ ಬುಧವಾರ ಸಂಜೆ 4 ರಿಂದ ರಾತ್ರಿ 8ರವರೆಗೆ ಈ ಅಣಕು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಉಗ್ರ ಚಟುವಟಿಕೆಗಳು ನಡೆದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳು, ಭದ್ರತಾ ಸಿದ್ಧತೆ, ಕಾರ್ಯಾಚರಣೆಯ ವಿಧಾನ ಹಾಗೂ ಪರಿಶೀಲನಾ ಪ್ರಕ್ರಿಯೆಗಳನ್ನು ಈ ವೇಳೆ ಅಭ್ಯಾಸ ಮಾಡಲಾಯಿತು.
ಅಣಕು ಪ್ರದರ್ಶನದ ವೇಳೆ ಎನ್ ಎಸ್ ಜಿ ಕಮಾಂಡೋಗಳು ಹಾಗೂ ಪೊಲೀಸರು ಸಯುಕ್ತವಾಗಿ ಕಾರ್ಯನಿರ್ವಹಿಸಿ ತ್ವರಿತ ಪ್ರತಿಕ್ರಿಯೆ, ಪ್ರದೇಶ ಶೋಧನೆ ಮತ್ತು ಭದ್ರತಾ ನಿಯಂತ್ರಣ ಕ್ರಮಗಳನ್ನು ಪ್ರದೇಶಿಸಿದರು. ಭದ್ರತಾ ಪಡೆಗಳ ಸಿದ್ದತೆ ಹಾಗೂ ಸಮನ್ವಯ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶದಿಂದ ಈ ಡ್ರಿಲ್ ಆಯೋಜಿಸಲಾಗಿತ್ತು.
ಈ ರೀತಿಯ ಅಣಕು ಕಾರ್ಯಾಚರಣೆಗಳು ಭವಿಷ್ಯದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದಾಗ ಪರಿಣಾಮಕಾರಿಯಾಗಿ ಪ್ರತಿಕ್ರಿಯೆಗೆ ಸಹಾಯಕವಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಧಾನಸೌಧ ಆವರಣದಲ್ಲಿ ಭದ್ರತಾ ಸಿದ್ಧತೆಯನ್ನು ಪರೀಕ್ಷಿಸುವ ಉದ್ದೇಶದಿಂದ ಬಾಂಬ್ ಸ್ಪೋಟಿಸಿ ನಾಲ್ವರು ಭಯೋತ್ಪಾದಕರು ಒಳನುಗ್ಗುವ ಸನ್ನಿವೇಶವನ್ನು ಅಣಕು ರೂಪದಲ್ಲಿ ಸೃಷ್ಟಿಸಲಾಯಿತು. ನೈಜ ಘಟನೆಯಂತೆ ಬಿಂಬಿಸಲಾದ ಈ ಡ್ರಿಲ್ ನಲ್ಲಿ ಬಾಂಬ್ ಪತ್ತೆ ದಳ, ನಿಷ್ಕ್ರಿಯ ದಳ, ಶ್ವಾನ ದಳ, ಗರುಡಾ ಪಡೆ ಹಾಗೂ ಕ್ಷಿಪ್ರ ಕಾರ್ಯಪಡೆಗಳು ಸ್ಥಳಕ್ಕೆ ಆಗಮಿಸಿ ತೀವ್ರ ತಪಾಸಣೆ ನಡೆಸಿದವು.
ಉಗ್ರರು ಒಳನುಗ್ಗಿದಂತೆ ಭಾವಿಸಲಾದ ಕ್ಷಣದಲ್ಲಿ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರು ಹಾಗೂ ಸಿಬ್ಬಂದಿಯನ್ನು ಎನ್ ಎಸ್ ಜಿ ಪಡೆಗಳು ಸುರಕ್ಷಿತವಾಗಿ ಹೊರಗೆ ಸ್ಥಳಾಂತರಿಸಿದರು. ನಂತರ ಸಂಪೂರ್ಣ ಪ್ರದೇಶವನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದು ಶೋಧ ಕಾರ್ಯಾಚರಣೆ ನಡೆಸಿದವು.
ಈ ಅಣಕು ಕಾರ್ಯಾಚರಣೆಯ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಭದ್ರತಾ ಪಡೆಗಳ ಪ್ರತಿಕ್ರಿಯಾ ವೇಗ, ಸಮನ್ವಯ ಮತ್ತು ಕಾರ್ಯನಿರ್ಹಣ ಸಾಮರ್ಥ್ಯವನ್ನು ಪರಿಶೀಲಿಸಲಾಯಿತು. ಭವಿಷ್ಯದಲ್ಲಿ ಇಂತಹ ಯಾವುದೇ ಅಪಾಯ ಸಂಭವಿಸಿದರೆ ತಕ್ಷಣ ಕ್ರಮ ಕೈಗೊಳ್ಳಲು ಈ ತರಬೇತಿ ಸಹಾಯಕವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ ವಿಧಾನಸೌಧ ಪ್ರವೇಶಿಸುವ ಎಲ್ಲಾ ದ್ವಾರಗಳನ್ನ ಮುಚ್ಚಲಾಗಿತ್ತು . ಎನ್ಎಸ್ ಜಿ ಅಧಿಕಾರಿಗಳು ಸ್ಥಳಕ್ಕೆ ತನ್ನದೇ ಶೈಲಿಯಲ್ಲಿ ಆಪರೇಷನ್ ಕಾರ್ಯಾಚರಣೆ ಕೈಗೊಂಡಿತು. ಹೆಲಿಕಾಪ್ಟರ್ ಮೂಲಕ ಬಂದಿಳಿದ ಎನ್ ಜಿ ಎಸ್ ಸಿಬ್ಬಂದಿಯು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಒಳನುಸುಳಿದ್ದವರನ್ನು ಬಂದಿಸುವ ತಾಲೀಮು ನಡೆಸಲಾಯಿತು.
Also Read: