ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಶೇಕಡಾ 500ರಷ್ಟು ಸುಂಕ ವಿಧಿಸುವ ಮಸೂದೆಯನ್ನು ಅಮೆರಿಕದ ಸೆನೆಟರ್ಗಳು ರೂಪಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಸಿದ್ದಾರೆ.
ಈಗಾಗಲೇ ಭಾರತದ ಮೇಲೆ ಶೇ.50ರಷ್ಟು ಸುಂಕ ಹೇರಿರುವ ಅಮೆರಿಕದ ಅಧ್ಯಕ್ಷ ಅದನ್ನು ಮತ್ತಷ್ಟು ಹೆಚ್ಚಿಸುವ ಸುಳಿವನ್ನು ಇತ್ತೀಚೆಗಷ್ಟೇ ನೀಡಿದ್ದರು. ಇದರ ಬೆನ್ನಲ್ಲೇ, ಸೆನೆಟರ್ಗಳು ಪ್ರಸ್ತಾಪಿಸಿರುವ ಆಘಾತಕಾರಿ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ರಷ್ಯಾ ನಿಯಂತ್ರಿಸಲು ಬೇರೆ ದೇಶಗಳಿಗೆ ಬರೆ: ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸೆನೆಟರ್ ಲಿಂಡ್ಸೆ ಗ್ರಹಾಂ, "ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಆಸ್ತಿ, ಪ್ರಾಣ ಹಾನಿ ವಿಪರೀತವಾಗಿದೆ. ಇದಕ್ಕೆ ಕೊನೆ ಹಾಡಬೇಕಿದೆ. ಆದರೆ, ಭಾರತ, ಚೀನಾ, ಬ್ರೆಜಿಲ್ ಸೇರಿದಂತೆ ಇತರ ರಾಷ್ಟ್ರಗಳು ರಷ್ಯಾದಿಂದ ಅಗ್ಗದ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತಿವೆ. ಇದರಿಂದ ರಷ್ಯಾಕ್ಕೆ ಹಣದ ಮೂಲ ಹೆಚ್ಚಾಗಿ, ಯುದ್ಧದಾಹವೂ ಮೆರೆಯುತ್ತಿದೆ" ಎಂದಿದ್ದಾರೆ.
"ಹೀಗಾಗಿ, ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳನ್ನು ನಿರ್ಬಂಧಿಸಲು, ಅವುಗಳ ಮೇಲೆ ಶೇಕಡ 500 ರಷ್ಟು ಸುಂಕ ವಿಧಿಸುವ ಮಸೂದೆಯನ್ನು ಪರಿಚಯಿಸಲಾಗುವುದು. ಇದು ಭಾರತ, ಚೀನಾ, ಬ್ರೆಜಿಲ್ನಂತಹ ರಾಷ್ಟ್ರಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿದೆ" ಎಂದು ಹೇಳಿದ್ದಾರೆ.
"ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರ ಯುದ್ಧದಾಹದಿಂದ ಉಕ್ರೇನ್ನಲ್ಲಿ ಮುಗ್ಧರು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ 'ಇಂಧನ'ವಾಗಿರುವ ರಾಷ್ಟ್ರಗಳನ್ನು ನಿಯಂತ್ರಿಸಬೇಕಿದೆ. ಮುಂದಿನ ವಾರ ಮಸೂದೆ ಮಂಡಿಸಿ, ಮತದಾನಕ್ಕೆ ಹಾಕಲಾಗುವುದು" ಎಂದು ತಿಳಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರೆಸಿದರೆ, ಭಾರತ ಮತ್ತಷ್ಟು ಸುಂಕದ ಹೊರೆಗೆ ಒಳಗಾಗಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಬೆದರಿಕೆ ಹಾಕಿದ್ದರು. ಈ ವಿಚಾರದಲ್ಲಿ ನನಗೆ ಬೇಸರವಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿಗೆ ಗೊತ್ತು ಎಂದು ಹೇಳಿದ್ದರು.
ಪ್ರಧಾನಿ ಮೋದಿ ಒಳ್ಳೆಯ ಮನುಷ್ಯ. ನಾನು ಖುಷಿಯಾಗಿಲ್ಲ ಎಂಬುದು ಅವರಿಗೆ ಗೊತ್ತಿದೆ. ಅವರು ನನ್ನನ್ನು ಸಂತೋಷವಾಗಿರಿಸುವುದು ಮುಖ್ಯ. ಅವರು ರಷ್ಯಾದೊಂದಿಗೆ ವ್ಯಾಪಾರ ಮಾಡಬಹುದು. ಆದರೆ, ನಾವು ಅವರ ಮೇಲೆ ಸುಂಕ ಹೆಚ್ಚಿಸುತ್ತೇವೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು.ರಷ್ಯಾ ಅಗ್ಗದ ದರದಲ್ಲಿ ನೀಡುವ ತೈಲವನ್ನು ಭಾರೀ ಪ್ರಮಾಣದಲ್ಲಿ ಖರೀದಿಸಿದ್ದ ಭಾರತ, ಅಮೆರಿಕದ ಸುಂಕದೇಟಿನ ಬಳಿಕ ತೀವ್ರ ಪ್ರಮಾಣದಲ್ಲಿ ಇಳಿಕೆ ಮಾಡಿದೆ. ಶೇ.25ರಷ್ಟು ವ್ಯಾಪಾರ ಸುಂಕದ ಜತೆಗೆ ರಷ್ಯಾ ತೈಲ ಖರೀದಿಸಿದ್ದಕ್ಕೆ ಶಿಕ್ಷೆಯಾಗಿ ಶೇ.25 ರಷ್ಟು ಹೆಚ್ಚುವರಿ ಸುಂಕ ಸೇರಿ ಶೇ.50ರಷ್ಟು ಟ್ಯಾರಿಫ್ ಅನ್ನು ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿದ್ದಾರೆ.
ಅಮೆರಿಕದಲ್ಲಿನ ಭಾರತೀಯ ರಾಯಭಾರಿ ವಿನಯ್ ಕ್ವಾತ್ರಾ ಅವರು ರಷ್ಯಾದ ತೈಲ ಖರೀದಿಯನ್ನು ತಗ್ಗಿಸಿದ ಬಗ್ಗೆ ಶ್ವೇತಭವನಕ್ಕೆ ಮಾಹಿತಿ ನೀಡಿದ್ದರು. ಆದಾಗ್ಯೂ ಸುಂಕ ಇಳಿಸುವ ಬಗ್ಗೆ ಅಮೆರಿಕ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಇನ್ನಷ್ಟು ಓದಿರಿ:
ಇರಾನ್ನಲ್ಲಿ ಫೋನ್, ಇಂಟರ್ನೆಟ್ ಸಂಪರ್ಕ ಕಡಿತ