ವಿಮಾನ ಕಾರ್ಯಾಚರಣೆ ಅಡಚಣೆ ಎದುರಿಸಿದ್ದ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಇದೀಗ ಜನವರಿ 1ರಿಂದ ಜಾರಿಗೆ ಬರುವಂತೆ ಪೈಲಟ್ಗಳಿಗೆ ನೀಡುವ ಭತ್ಯೆಯನ್ನು 2,000 ರೂ.ವರೆಗೆ ಏರಿಸಿದೆ ಎಂದು ಮೂಲಗಳು ತಿಳಿಸಿವೆ. ಹಿಂದೆ ದೇಶೀಯ ಲೇಓವರ್ ಭತ್ಯೆಯಾಗಿ 2,000 ರೂ.ಗಳನ್ನು ಪಡೆಯುತ್ತಿದ್ದ ಕ್ಯಾಪ್ಟನ್ಗೆ ಈಗ 3,000 ರೂ. ಸಿಗಲಿದೆ. ಫಸ್ಟ್ ಆಫೀಸರ್ನ ಹಿಂದಿನ ಭತ್ಯೆ 1,000 ರೂ.ಗಳಿಂದ 1,500 ರೂ.ಗಳಿಗೆ ಏರಿಕೆಯಾಗಲಿದೆ ಎಂದು ಮೂಲಗಳು ಹೇಳಿವೆ.
ರಾತ್ರಿ ಕಾರ್ಯಾಚರಣೆಗಳಿಗೆ ಹೆಚ್ಚಿನ ಪೈಲಟ್ಗಳನ್ನು ನಿಯೋಜಿಸುವ ಅಗತ್ಯವಿರುವ ಹೊಸ ನಿಯಮಗಳ ಹಿನ್ನೆಲೆಯಲ್ಲಿ ಇಂಡಿಗೋ ಪೈಲಟ್ಗಳಿಗೆ ನೀಡಲಾಗುವ ಹೆಚ್ಚಿನ ಭತ್ಯೆಗಳನ್ನು ಪರಿಷ್ಕರಿಸಿದೆ. ಈ ಹೆಚ್ಚಳ ವಿವಿಧ ಭತ್ಯೆಗಳ ವಿಭಾಗಕ್ಕೆ ಸಂಬಂಧಿಸಿದಂತೆ ಅಂದರೆ ದೇಶೀಯ ಲೇಓವರ್, ಡೆಡ್ಹೆಡ್ ಮತ್ತು ನೈಟ್ ಸೇರಿದಂತೆ 25 ರೂ.ಗಳಿಂದ 2,000 ರೂ.ಗಳವರೆಗಿನ ಹೆಚ್ಚಳ ಇರುತ್ತದೆ. ಹಾಗೆಯೇ ಪೈಲಟ್ಗಳು ಟೈಲ್ ಸ್ವಾಪ್ ಭತ್ಯೆಗೂ ಅರ್ಹರಾಗಿರುತ್ತಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸಾಮಾನ್ಯವಾಗಿ, ಟೈಲ್ ಸ್ವಾಪ್ಗಳು ಎಂದರೆ, ನಿಗದಿತ ವಿಮಾನವನ್ನು ಬೇರೆ ವಿಮಾನದೊಂದಿಗೆ ಬದಲಾಯಿಸುವುದು. ಈ ಮುನ್ನ ಟೈಲ್ ಸ್ವಾಪ್ ಭತ್ಯೆಯನ್ನು ನೀಡುತ್ತಿರಲಿಲ್ಲ. ಆದರೆ, ಜನವರಿ 1ರಿಂದ ಈ ಭತ್ಯೆಯೂ ಸಿಗಲಿದೆ. ಈ ಕುರಿತು ಇಂಡಿಗೋ ಯಾವುದೇ ಹೇಳಿಕೆ ನೀಡಿಲ್ಲ.
ಹಾರಾಟದ ಸಮಯದಲ್ಲಿ ಊಟದ ಭತ್ಯೆಯನ್ನು ಕ್ಯಾಪ್ಟನ್ಗಳಿಗೆ 500 ರೂ.ಗಳಿಂದ 1,000 ರೂ.ಗಳಿಗೆ ಹೆಚ್ಚಿಸಲಾಗಿದೆ. ನವೆಂಬರ್ನಲ್ಲಿ ಎರಡನೇ ಹಂತದ ಎಫ್ಡಿಟಿಎಲ್ ಮಾನದಂಡಗಳನ್ನು ಜಾರಿಗೆ ತಂದ ನಂತರ ಪೈಲಟ್ಗಳಿಗೆ ಕಡಿತಗೊಳಿಸಲಾದ ಭತ್ಯೆಯ ಶೇ.25ರಷ್ಟು ಮಾತ್ರ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿದೆ.
24 ಗಂಟೆಗಳ ಕಾಲಮಿತಿಯ ನಂತರ ಪ್ರತಿ ಗಂಟೆಗೆ, ಕ್ಯಾಪ್ಟನ್ ಈ ಹಿಂದೆ 100 ರೂ. ಪಡೆಯುತ್ತಿದ್ದು, ಇದೀಗ 150 ರೂ. ಸಿಗಲಿದೆ. ಅದೇ ರೀತಿ, ಫಸ್ಟ್ ಆಫೀಸರ್ 50 ರೂ. ಬದಲಿಗೆ 75 ರೂ. ಪಡೆಯಲಿದ್ದಾರೆ. ಕ್ಯಾಪ್ಟನ್ ಮತ್ತು ಫಸ್ಟ್ ಆಫೀಸರ್ ರಾತ್ರಿ ಭತ್ಯೆಯನ್ನು ಕ್ರಮವಾಗಿ 2,000 ಮತ್ತು 1,000 ರೂ.ಗಳಿಗೆ ಏರಿಸಲಾಗಿದೆ.
ಇಂಡಿಗೋ ವಿಮಾನದ ಹಾರಾಟದಲ್ಲಿ ಅಡಚಣೆ ಉಂಟಾದ ನಂತರ ಇದೀಗ ವಿಮಾನಯಾನ ಸಂಸ್ಥೆ 5,085 ಪೈಲಟ್ಗಳು ನೇಮಕ ಮಾಡಿಕೊಂಡಿದೆ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಡಿಸೆಂಬರ್ 8ರಂದು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದರು.