ಧೂಮ್ ಸಿನಿಮಾ ಪ್ರೇರಣೆ, ಶ್ರೀಮಂತರ ಮನೆಗಳೇ ಟಾರ್ಗೆಟ್ಬೆ
ಧೂಮ್ ಸಿನಿಮಾ ಪ್ರೇರಣೆಯಿಂದ 1.2 ಕೆಜಿ ಚಿನ್ನ ಕದ್ದಿದ್ದ ಕಳ್ಳನನ್ನು ಬೆಳಗಾವಿಯಲ್ಲಿ ಬಂಧಿಸಲಾಗಿದೆ. ಲೈಟ್ಕಲರ್ ಚೇಂಜ್ ಆಗುವ ಬೈಕ್ ಬಳಸಿ ಪೊಲೀಸರನ್ನು ಯಾಮಾರಿಸಲು ಈತ ಯತ್ನಿಸಿದ್ದ. ಒಟ್ಟು 22 ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತ, ಕದ್ದ ಚಿನ್ನ ಮಾರಿ ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ಚಿನ್ನಾಭರಣ, ವಾಹನಗಳು ಸೇರಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಆರೋಪಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ:
ಧೂಮ್-1 ಸಿನಿಮಾ ನಟ ಜಾನ್ ಅಬ್ರಾಹಂ ನಟನೆಯಿಂದ ಪ್ರೇರಣೆಗೊಂಡು 1.2 ಕೆಜಿ ಚಿನ್ನ ಕದ್ದ ಕಳ್ಳ ಅರೆಸ್ಟ್ ಆಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮಹಾಂತೇಶ ನಗರದ ನಿವಾಸಿ ಸುರೇಶ ನಾಯಕ (32) ಬಂಧಿತ ಆರೋಪಿಯಾಗಿದ್ದು, ಕಾರು ಮತ್ತು ಬೈಕ್ಗಳು ಸೇರಿ ಒಂದೂವರೆ ಲಕ್ಷ ಹಣ ಮತ್ತು ಕೆಜಿಗಟ್ಟಲೆ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಕರಣ ಬೆನ್ನುಬಿದ್ದ ಪೊಲೀಸರಿಗೆ ತನಿಖೆ ವೇಳೆ ಶಾಕಿಂಗ್ ವಿಚಾರ ಗೊತ್ತಾಗಿದೆ. ನಟ ಜಾನ್ ಅಬ್ರಾಹಂರ ಪಕ್ಕಾ ಅಭಿಮಾನಿ ಆಗಿರುವ ಸುರೇಶ ನಾಯಕ, ಕಳ್ಳತನಕ್ಕೆ ಪಲ್ಸರ್ ಬೈಕ್ ಬಳಸುತ್ತಿದ್ದ. ಶ್ರೀಮಂತರ ಮನೆಗೆ ಕನ್ನ ಹಾಕೋದು, ಐಷಾರಾಮಿ ಜೀವನ ನಡೆಸೋದೆ ಈತನ ಕಾಯಕವಾಗಿತ್ತು. ಕದ್ದ ಚಿನ್ನಾಭರಣ ಮಾರಿ ಬಂದ ಹಣದಿಂದ ಗೋವಾದಲ್ಲಿ ಮಜಾ ಮಾಡ್ತಿದ್ದ. ಮೊಬೈಲ್ ಕೂಡ ಹೊಂದಿರದ ಈತ, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಬೈಕ್ ಮಾಡಿಫೈ ಮಾಡಿದ್ದ. ಹತ್ತು ನಿಮಿಷಕ್ಕೊಮ್ಮೆ ಬೈಕ್ ಲೈಟ್ ಕಲರ್ ಚೇಂಜ್ ಆಗುವ ರೀತಿ ಅದನ್ನು ರೆಡಿಮಾಡಿಸಿಕೊಂಡಿದ್ದ. 14 ದಿನಗಳ ಕಾಲ ರಾಷ್ಟ್ರೀಯ ಹೆದ್ದಾರಿಯ ಎಲ್ಲ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿರುವ ಪೊಲೀಸರು, ಸುರೇಶ ನಾಯಕ ಧರಿಸುವ ಶೂ, ಜಾಕೆಟ್ ಮತ್ತು ರೆಡ್ ಕ್ಯಾಪ್ ಆಧರಿಸಿ ಬಂಧಿಸಿದ್ದಾರೆ.
ಕದ್ದ ಚಿನ್ನವನ್ನು ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಮಾರಲೆಂದು ಸುರೇಶ್ ಹೊರಟಿದ್ದ ವೇಳೆ, ಮಹೀಂದ್ರಾ ಥಾರ್ ವಾಹನದಲ್ಲಿದ್ದ ಗೋಲ್ಡ್ ಸಮೇತ ಹಿಡಿದಿದ್ದಾರೆ. ಸುರೇಶ ನಾಯಕ ವಿರುದ್ಧ ಒಟ್ಟು 22 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಥಾರ್ ವಾಹನ, ಕವಾಸಕಿ, ಪಲ್ಸರ್ ಬೈಕ್ಗಳು, ಒಂದೂವರೆ ಲಕ್ಷ ಹಣ ಹಾಗೂ ಕೆಜಿಗಟ್ಟಲೆ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯ ಖ್ಯಾತ ವೈದ್ಯ ಡಾ.ಸುರೇಶ ದುಗ್ಗಾಣಿ ಸಹೋದರ ವಿಶ್ವನಾಥ ಅವರ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿನ ಮನೆಯಲ್ಲಿ ಕಳ್ಳತನ ನಡೆದಿದ್ದು, ಅಕ್ಟೋಬರ್ 23ರಂದು ಯಮಕನಮರಡಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಕುಟುಂಬ ಸಮೇತ ವಿಶ್ವನಾಥ ದುಗ್ಗಾಣಿ ಅಕ್ಟೋಬರ್ 16ರಂದು ಬೆಂಗಳೂರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದನ್ನು ಒಂದು ವಾರ ಗಮನಿಸಿದ್ದ ಆರೋಪಿ ಸುರೇಶ, ಅಕ್ಟೋಬರ್ 22ರ ರಾತ್ರಿ ವಿಶ್ವನಾಥ್ ಮನೆಗೆ ನುಗ್ಗಿ ಕೋಟ್ಯಂತರ ರೂ. ಮೌಲ್ಯದ ಚಿನ್ನ ಕದ್ದಿದ್ದ. ಒಂದೇ ಗಂಟೆಯಲ್ಲಿ ಮನೆಯಲ್ಲಿದ್ದ 1,250 ಗ್ರಾಂ ಚಿನ್ನ, ಎಂಟೂವರೆ ಕೆಜಿ ಬೆಳ್ಳಿ, ಒಂದೂವರೆ ಲಕ್ಷ ನಗದು ದೋಚಿ ಎಸ್ಕೇಪ್ ಆಗಿದ್ದ.
ಇನ್ನಷ್ಟು ಓದಿರಿ :
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಸಿಪಿಐ(ಎಂ)ನಿಂದ ಚುನಾವಣಾ ಅಖಾಡಕ್ಕಿಳಿದ ಮೂವರು ಸಹೋದರಿಯರು