belagavi news :
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಸಂಪೂರ್ಣವಾಗಿ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ. ಸರ್ಕಾರವು ಯಾರಿಗೂ ಯಾವುದೇ ನಿರ್ದೇಶನ ನೀಡಿಲ್ಲ. ಚುನಾವಣಾ ಆಯೋಗದ ಮನವಿಯಂತೆ ಅಗತ್ಯ ಸಿಬ್ಬಂದಿಯನ್ನು ಮಾತ್ರ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮನೆ ಮನೆಗೆ ತೆರಳಿ ಎಣಿಕೆ ನಮೂನೆಗಳನ್ನು ವಿತರಿಸಿ, ಮತದಾರರಿಂದ ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸುವ ಜವಾಬ್ದಾರಿ ಬೂತ್ ಮಟ್ಟದ ಅಧಿಕಾರಿಗಳ ಮೇಲಿದೆ ಎಂದು ಅವರು ಹೇಳಿದರು.
ಒಂದೇ ವೇಳೆ ಬಿ.ಎಲ್.ಒ ಗಳು ಮನೆಗಳಿಗೆ ತೆರಳದೆ ಒಂದೇ ಸ್ಥಳದಲ್ಲಿ ಕುಳಿತು ಅರ್ಜಿಗಳನ್ನು ವಿತರಿಸುತ್ತಿದ್ದರೆ, ಅದು ಅವರ ವೈಯಕ್ತಿಕ ಲೋಪವಾಗಿದ್ದು, ನಿಯಮ ಉಲ್ಲಂಘನೆಯಾಗುತ್ತದೆ. ಇಂತಹ ಪ್ರಕರಣಗಳು ಕಂಡು ಬಂದರೆ ಚುನಾವಣಾ ಆಯೋಗ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪರಮೇಶ್ವರ ಆಗ್ರಹಿಸಿದರು.
ಮುಂದುವರೆದು ಮಾತನಾಡಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಇತರೆ ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಜಾರಿ ಆಗಿದೆ ಎಂಬುದನ್ನು ಬಿಜೆಪಿ ಮುಖಂಡರು ಪರಿಶೀಲಿಸಿ ಎಂದು ಹೇಳಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲಗಳಿದ್ದರೂ ಅದರಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಚುನಾವಣಾ ಆಯೋಗವು ಒಂದು ತಿಂಗಳೊಳಗೆ ಎಸ್.ಐ.ಆರ್ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಸಿಬ್ಬಂದಿಯನ್ನು ಕೋರಿದು, ಅದರಂತೆ ರಾಜ್ಯ ಸರ್ಕಾರ ಸಿಬ್ಬಂದಿಯನ್ನು ಒದಗಿಸಿದೆ. ಇದನ್ನು ಹೊರತುಪಡಿಸಿ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಎಸ್.ಐ.ಆರ್ ಪ್ರಕ್ರಿಯೆಗೆ ಸಂಬಂಧಿಸಿದ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರೆ, ಅದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಆಯೋಗದ ಜವಾಬ್ದಾರಿ. ಈ ವಿಚಾರದಲ್ಲಿಯೂ ರಾಜ್ಯ ಸರ್ಕಾರದ ಪಾತ್ರ ಇಲ್ಲ ಎಂದು ಪರಮೇಶ್ವರ್ ಪುನರುಚ್ಚರಿಸಿದರು.
ಇದೆ ವೇಳೆ, ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಕುರಿತು ಪ್ರತಿಕ್ರಿಯಿಸಿದವರು, ಮುಖ್ಯಮಂತ್ರಿ ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸೂಕ್ತ ಸಮಯದಲ್ಲಿ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಮಸೀದಿಗಳಲ್ಲಿ ಎಸ್ಐಆರ್ ಅರ್ಜಿಗಳನ್ನು ಭರ್ತಿ ಮಾಡಲಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಪರಮೇಶ್ವರ್, ಬೂತ್ ಮಟ್ಟದ ಅಧಿಕಾರಿಗಳು ತಮ್ಮ ಜವಾಬ್ದಾರಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನಿಯಮ ಉಲ್ಲಂಘನೆ ನಡೆದಿದ್ದರೆ ಅದರ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಚುನಾವಣಾ ಆಯೋಗದ ಹೊಣೆ ಎಂದು ಹೇಳಿದರು.
ಇದೇ ವೇಳೆ, ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕುರಿತು ಮಾತನಾಡಿದ ಅವರು, ಯೋಜನೆಗೆ ಈಗಾಗಲೇ 900ಕೋಟಿ ರೂಪಾಯಿ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಸಾಕಷ್ಟು ಪ್ರಮಾಣದ ಕಾಮಗಾರಿಗಳು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು. ಈ ಹಂತದಲ್ಲಿ ಯೋಜನೆಯನ್ನು ಸ್ಥಗಿತಗೊಳಿಸುವ ಪ್ರಶ್ನೆ ಇಲ್ಲ. ಸರ್ಕಾರ ಯೋಜನೆಗಳನ್ನು ಮುಂದುವರೆಸಲಿದೆ ಎಂದು ಸ್ಪಷ್ಟಪಡಿಸಿದರು.
ಯೋಜನೆ ಜಾರಿಯಿಂದ ಯಾವುದೇ ಜಿಲ್ಲೆಯ ಹಿತಾಸಕ್ತಿಗೆ ಧಕ್ಕೆಯಾಗಿಲ್ಲ ಎಂದು ಹೇಳಿದ ಪರಮೇಶ್ವರ, "ಕುಣಿಗಲ್ ಯಾವ ಜಿಲ್ಲೆಯಲ್ಲಿದೆ ಎಂಬುವುದು ಅವರಿಗೂ ಗೊತ್ತಿದೆ" ಎಂದು ಪ್ರತಿಕ್ರಿಯಿಸಿದರು. ಹೇಮಾವತಿ ಲಿಂಕ್ ಕೆನಾಲ್ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದ್ದು, ಕಾಮಗಾರಿಗಳನ್ನು ನಿಗದಿ ಯೋಜನೆಯಂತೆ ಮುಂದುವರಿಸಲಾಗುವುದು ಎಂದರು.