ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ದಂಪತಿಯ ಮಗುವಿನ ಹೆಸರು ರಿವೀಲ್
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ ತಮ್ಮ ಗಂಡು ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಪರಿಣಿತಿ ಮತ್ತು ರಾಘವ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ, ಮಗನ ಒಂದು ನೋಟವಿದೆ. ತಮ್ಮ ಗಂಡು ಮಗುವನ್ನು ಸ್ವಾಗತಿಸಿದ ಒಂದು ತಿಂಗಳ ನಂತರ, ಹೆಸರನ್ನು ಬಹಿರಂಗಪಡಿಸಿದ್ದಾರೆ. ಮೊದಲ ಮಗುವಿಗೆ 'ನೀರ್' ಎಂದು ಹೆಸರಿಟ್ಟಿದ್ದಾರೆ.
ತಮ್ಮ ಮುದ್ದು ಕಂದನ ಪುಟ್ಟ ಪಾದಗಳನ್ನು ಹಿಡಿದು ಚುಂಬಿಸುತ್ತಿರುವ, ಮತ್ತೊಂದರಲ್ಲಿ ಪಾದಗಳನ್ನು ಹಿಡಿದಿರುವ ಎರಡು ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಜಕಾರಣಿ ರಾಘವ್ ಚಡ್ಡಾ ತಮ್ಮ ಗಂಡು ಮಗುವಿನ ಹೆಸರನ್ನು ಘೋಷಿಸಿದ್ದಾರೆ. ದಂಪತಿ ತಮ್ಮ ಸಂತೋಷದ ಮೂಲಕ್ಕೆ ಅರ್ಥಪೂರ್ಣ ಹೆಸರಿಟ್ಟಿದ್ದು, ಸಾಮಾಜಿಕ ಮಾಧ್ಯಮದಲ್ಲಿ, ಸುಂದರ ಫೋಟೋದೊಂದಿಗೆ ಮಗುವಿನ ಹೆಸರನ್ನು ಹಂಚಿಕೊಂಡಿದ್ದಾರೆ.
ಕಾವ್ಯಾತ್ಮಕ ಸಂಸ್ಕೃತ ಸಾಲುಗಳ ಅರ್ಥ ಹೀಗಿದೆ:
ಜಲಸ್ಯ ರೂಪಂ - ನೀರಿನ ರೂಪ ಅಥವಾ ಸ್ವಭಾವ.
ಪ್ರೇಮಸ್ಯ ಸ್ವರೂಪಂ - ಪ್ರೀತಿಯ ಸಾರ.
ತತ್ರ ಏವ ನೀರ್ - ನೀರಿನ ಅಸ್ತಿತ್ವ.
ಪರಿಣಿತಿ ಮತ್ತು ರಾಘವ್ ಇದೇ ಸಾಲಿನ ಆಗಸ್ಟ್ನಲ್ಲಿ ತಮ್ಮ ಗರ್ಭಧಾರಣೆಯನ್ನು ಘೋಷಿಸಿದರು. ಆಗ ದಂಪತಿ, "1 + 1 = 3" ನಿಂದ ಅಲಂಕರಿಸಲ್ಪಟ್ಟ ಕೇಕ್ ಮತ್ತು ಮಗುವಿನ ಹೆಜ್ಜೆಗುರುತುಗಳನ್ನು ಒಳಗೊಂಡ ಪೋಸ್ಟ್ನೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಶುಭ ಸುದ್ದಿಯನ್ನು ಹಂಚಿಕೊಂಡಿದ್ದರು.
ಮಗನ ಹೆಸರೇನು, ಅರ್ಥವೇನು?: ಜನಪ್ರಿಯ ದಂಪತಿ ತಮ್ಮ ಮಗನಿಗೆ 'ನೀರ್' ಎಂದು ನಾಮಕರಣ ಮಾಡಿದ್ದಾರೆ. ನೀರ್ ಹೆಸರಿನ ಸಂಸ್ಕೃತ ವಾಕ್ಯವನ್ನು ವಿವರಿಸಿದರು. "ಜಲಸ್ಯ ರೂಪಂ, ಪ್ರೇಮಸ್ಯ ಸ್ವರೂಪಂ - ತತ್ರ ಏವ ನೀರ್" ಎಂದು ಬರೆದುಕೊಂಡಿದ್ದಾರೆ. ಜೊತೆಗೆ, "ನಮ್ಮ ಹೃದಯಗಳು ಜೀವನದ ಶಾಶ್ವತ ಹನಿಯಲ್ಲಿ ಶಾಂತಿ ಕಂಡುಕೊಂಡಿವೆ. ನಾವು ಅವನಿಗೆ ನೀರ್ (Neer) - ಶುದ್ಧ, ದೈವಿಕ, ಅಪರಿಮಿತ" ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿದರು.
ವೃತ್ತಿಜೀವನ ಗಮನಿಸೋದಾದ್ರೆ, ಪರಿಣಿತಿ ಚೋಪ್ರಾ ಕೊನೆಯ ಬಾರಿಗೆ ಇಮ್ತಿಯಾಜ್ ಅಲಿ ನಿರ್ದೇಶನದ ಅಮರ್ ಸಿಂಗ್ ಚಮ್ಕಿಲಾ ಚಿತ್ರದಲ್ಲಿ ಕಾಣಿಸಿಕೊಂಡರು. ಇಲ್ಲಿ ದಿಲ್ಜಿತ್ ದೋಸಾಂಜ್ ಜೊತೆ ತೆರೆ ಹಂಚಿಕೊಂಡಿದ್ದರು.
ಪರಿಣಿತಿ, ಚಮ್ಕಿಲಾ ಅವರ ಪತ್ನಿ ಅಮರ್ಜೋತ್ ಕೌರ್ ಪಾತ್ರವನ್ನು ನಿರ್ವಹಿಸಿದ್ದರು. ನಟಿಯ ನಟನೆ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿತ್ತು. ಈ ಪಾತ್ರಕ್ಕಾಗಿ ಅವರು ತೂಕವನ್ನು ಸಹ ಹೆಚ್ಚಿಸಿಕೊಂಡಿದ್ದರು. ನಟಿಗೆ ಅನೇಕ ಪ್ರಶಸ್ತಿಗಳನ್ನೂ ಈ ಚಿತ್ರ ತಂದುಕೊಟ್ಟಿತ್ತು. ನಟಿಯ ಮುಂದಿನ ಚಿತ್ರಗಳಿನ್ನೂ ಘೋಷಣೆಯಾಗಿಲ್ಲ. ಅಭಿಮಾನಿಗಳು ಅಪ್ಡೇಟ್ಸ್ಗಾಗಿ ಎದುರು ನೋಡುತ್ತಿದ್ದಾರೆ.
ಸ್ನೇಹ ಪ್ರೀತಿಗೆ ತಿರುಗಿ 2023ರ ಮೇ ತಿಂಗಳಲ್ಲಿ ಪ್ರೇಮಪಕ್ಷಿಗಳು ನಿಶ್ಚಿತಾರ್ಥ ಮಾಡಿಕೊಂಡರು. ಅದೇ ವರ್ಷ ಸೆಪ್ಟೆಂಬರ್ 24ರಂದು ರಾಜಸ್ಥಾನದ ಉದಯಪುರದ ದಿ ಲೀಲಾ ಪ್ಯಾಲೆಸ್ನಲ್ಲಿ ನಡೆದ ಅದ್ಧೂರಿ ಸಾಂಪ್ರದಾಯಿಕ ಹಿಂದೂ ವಿವಾಹ ಸಮಾರಂಭದಲ್ಲಿ ಹಸೆಮಣೆಯೇರಿದರು.
ಇನ್ನಷ್ಟು ಓದಿರಿ :
ಮಂಗಳೂರಿನ ಐಶ್ವರ್ಯಾ ರೈ ವಿಶ್ವ ಸುಂದರಿ ಪಟ್ಟ ಗೆದ್ದು 31 ವರ್ಷ