ಪಿತ್ತ ನೆತ್ತಿಗೆ ಏರಿಸಿದ್ದೀರಿ ಗಿಲ್ಲಿ-ರಕ್ಷಿತಾಗೆ ಎಚ್ಚರಿಕೆ ಕೊಟ್ಟ ಸುದೀಪ್
Bigg Boss Kannada 12: ಈ ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಸಿಟ್ಟಾದರು. ಅದೂ ಹಲವು ಬಾರಿ. ನನಗೆ ಸಿಟ್ಟು ನೆತ್ತಿಗೇರಿದೆ ಎಂದು ಖುದ್ದು ಅವರೇ ಹೇಳಿದರು. ಇದಕ್ಕೆ ಹಲವು ಕಾರಣಗಳಿದ್ದವು. ಅದರಲ್ಲಿ ರಕ್ಷಿತಾ ಮತ್ತು ಗಿಲ್ಲಿ ನಟರ ಕಾರಣವೂ ಒಂದು. ರಕ್ಷಿತಾ ಮತ್ತು ಗಿಲ್ಲಿ ಸೇರಿ ಆಡಿದ ಆಟದ ಬಗ್ಗೆ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದರು. ಸುದೀಪ್ ಹೇಳಿದ್ದೇನು? ಇಲ್ಲಿದೆ ಮಾಹಿತಿ...
ವೀಕೆಂಡ್ ಎಪಿಸೋಡ್ಗಳನ್ನು ಸುದೀಪ್ (Sudeep) ಗಂಭೀರವಾಗಿ ನಡೆಸಿಕೊಡುತ್ತಾರೆ. ಸಿಟ್ಟು ಮಾಡಿಕೊಳ್ಳುವುದು ಕೂಗಾಡುವುದು, ಕಿರುಚಾಡುವುದು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಆದರೆ ಈ ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಸಿಟ್ಟಾದರು. ಅದೂ ಹಲವು ಬಾರಿ. ನನಗೆ ಸಿಟ್ಟು ನೆತ್ತಿಗೇರಿದೆ ಎಂದು ಖುದ್ದು ಅವರೇ ಹೇಳಿದರು. ಇದಕ್ಕೆ ಹಲವು ಕಾರಣಗಳಿದ್ದವು. ಅದರಲ್ಲಿ ರಕ್ಷಿತಾ ಮತ್ತು ಗಿಲ್ಲಿ ನಟರ ಕಾರಣವೂ ಒಂದು.
ನೀವು ರಘು ಅವರನ್ನು ನಾಮಿನೇಟ್ ಮಾಡಿ ಪರವಾಗಿಲ್ಲ ಆದರೆ ಅದಕ್ಕೆ ಸೂಕ್ತ ಕಾರಣ ನೀಡಿ. ನೀವು ಹೀಗೆ ಬೇರೆಯವರ ಪ್ರಭಾವಕ್ಕೆ ಸಿಕ್ಕಿ ಹೀಗೆಲ್ಲ ಆಡಿದರೆ ನೋಡುವ ಜನಕ್ಕೆ ತಪ್ಪು ಸಂದೇಶ ಹೋಗುತ್ತದೆ. ಪ್ರಭಾವಕ್ಕೆ ಒಳಗಾಗಿ ನಿಮ್ಮದೇ ತಂಡದ ಆಟವನ್ನು ಹಾಳು ಮಾಡುವುದಕ್ಕೆ ಕಾರಣವಾದರೂ ಏನು? ಏನೇ ಮಾಡಲಿ ಅದಕ್ಕೆ ಸರಿಯಾದ ಕಾರಣ ನಿಮ್ಮ ಬಳಿ ಇರಲಿ ಎಂದರು ಸುದೀಪ್.
ಗಿಲ್ಲಿ ಮತ್ತು ರಕ್ಷಿತಾ ಪರಸ್ಪರ ಬೇರೆ ತಂಡದಲ್ಲಿದ್ದರೂ ಹೊಂದಾಣಿಕೆ ಆಟವಾಡಿ ತಂಡವನ್ನು ಗೊಂದಲಕ್ಕೆ ತಳ್ಳಿದ್ದು, ಮತ್ತು ವಿನಾಕಾರಣ ರಘು ಅವರನ್ನು ನಾಮಿನೇಟ್ ಮಾಡಿದ್ದು. ಈ ಎರಡಕ್ಕೂ ಸೂಕ್ತ ಕಾರಣ ನೀಡುವಂತೆ ಸುದೀಪ್ ರಕ್ಷಿತಾ ಅವರನ್ನು ಪ್ರಶ್ನೆ ಮಾಡಿದರು. ಪ್ರತಿ ಬಾರಿಯಂತೆ ರಕ್ಷಿತಾ ಖುದ್ದು ಗೊಂದಲಕ್ಕೆ ಒಳಗಾಗಿ ಏನೇನೋ ಹೇಳಲು ಆರಂಭಿಸಿದರು. ಒಂದು ಸಂದರ್ಭದಲ್ಲಿ ಸುದೀಪ್ ಅವರನ್ನೇ, ನಿಮಗೆ ಯಾವ ಹಂತದಲ್ಲಿ ಅನ್ನಿಸಿತು ನಾನು ಗೊಂದಲ ಮಾಡುತ್ತಿದ್ದೇನೆಂದು? ಎಂದು ಪ್ರಶ್ನೆ ಮಾಡಿದರು. ಸುದೀಪ್ಗೆ ಸಿಟ್ಟು ಇನ್ನಷ್ಟು ಹೆಚ್ಚಿತು. ನನ್ನ ಪಿತ್ತ ನೆತ್ತಿಗೆ ಏರುವ ಸ್ವಲ್ಪ ಮುಂಚೆ ನನಗೆ ಹಾಗನ್ನಿಸಿತು ಎಂದರು. ಮುಂದುವರೆದು, ನಾನು ನಗುತ್ತಿದ್ದೇನೆ ಆದರೆ ಸಿಟ್ಟಿನಲ್ಲಿ ಎಂದು ಸ್ಪಷ್ಟವಾಗಿ ಹೇಳಿದರು.
ಅಂತಿಮವಾಗಿ ಇಬ್ಬರೂ ಚೆನ್ನಾಗಿ ಆಟ ಆಡುತ್ತಿದ್ದೀರಿ ಆದರೆ ಆ ಆಟದಲ್ಲಿ ಸ್ಪಷ್ಟತೆ ಇರಲಿ, ಮಾತು ಹಾಗೂ ವರ್ತನೆಗಳ ಮೇಲೆ ಲಗಾಮು ಇರಲಿ ಎಂದರು. ರಕ್ಷಿತಾ ಬಗ್ಗೆ ಮನೆಯವರು ತಪ್ಪು ಮಾಡಿದಾಗ ನಾನು ನಿಮ್ಮ ಪರ ನಿಂತಿದ್ದೆ. ಆದರೆ ಈಗ ನೀವು ತಪ್ಪು ಮಾಡಿದಾಗ ಹೇಳುವುದು ನನ್ನ ಕರ್ತವ್ಯ, ಇನ್ನೊಮ್ಮೆ ಇಂಥಹಾ ತಪ್ಪುಗಳನ್ನು ಮಾಡಬೇಡಿ’ ಎಂದರು ಕಿಚ್ಚ.
ಇನ್ನು ಗಿಲ್ಲಿ ಕುರಿತಾಗಿಯೂ ಸಹ ಇದೇ ಮಾತುಗಳನ್ನು ಹೇಳಿದರು. ಶೋನ ಪ್ರಾರಂಭದಲ್ಲಿಯೇ ಪರೋಕ್ಷವಾಗಿ ಎಚ್ಚರಿಸಿದ ಸುದೀಪ್, ‘ಅಧಿಕ ಪ್ರಸಂಗತನ ಬೇಡ’ ಎಂದು ಗಿಲ್ಲಿಗೆ ಹೇಳಿದರು. ರಕ್ಷಿತಾ ವಿಷಯ ಮಾತನಾಡುವಾಗಲೂ ಸಹ ‘ನಿಮ್ಮ ಮಾತೇ ನಿಮಗೆ ಮುಳುವಾಗುವುದು ಬೇಡ. ನೀವು ಹಾಸ್ಯ ಮಾಡುತ್ತೀರಿ, ಅದು ನಿಮ್ಮ ಸ್ವಭಾವ, ಆದರೆ ಬೇರೆಯವರ ಬಗ್ಗೆ ಮಾತನಾಡುವಾಗ ಎಚ್ಚರ ಇರಲಿ. ಲಗಾಮು ಇರಲಿ’ ಎಂದು ಎಚ್ಚರಿಕೆ ನೀಡಿದರು.
ಇನ್ನಷ್ಟು ಓದಿರಿ :
ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ