belagavi news :
ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಸಿನಿಮಾ ' ಟಾಕ್ಸಿಕ್ ' ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ' ತಬಾಹಿ ' ಹಾಡು ಅಭಿಮಾನಿಗಳ ಗಮನ ಸೆಳೆದಿದೆ.
' ಟಾಕ್ಸಿಕ್ ' ಸಿನಿಮಾದ ' ತಬಾಹಿ ' ಹಾಡಿಗೆ ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ " ಯೋಗರಾಜ್ ಭಟ್" ಸಾಹಿತ್ಯ ಬರೆದಿದ್ದಾರೆ. ವಿಭಿನ್ನ ಶೈಲಿಯ ಪದಗಳ ಮೂಲಕ ಹಾಡಿಗೆ ವಿಶೇಷ ಮೆರುಗು ನೀಡಿರುವ ಯೋಗರಾಜ್ ಭಟ್, ಇದೀಗ ಯಶ್ ಅವರ ಕುರಿತು ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಯಶ್ ಅವರ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಮೆಚ್ಚಿಕೊಂಡಿರುವ ಯೋಗರಾಜ್ ಭಟ್, ಯಶ್ ಕೇವಲ ನಟನಲ್ಲ, ಅವರೊಳಗೆ ಒಬ್ಬ ಕವಿಯು ಇದ್ದಾರೆ ಎಂದು ಹೇಳಿದ್ದಾರೆ. ಹಿಂದೆ ಯಶ್ ಕವಿತೆಗಳನ್ನು ಬರೆಯುತ್ತಿದ್ದರು ಎಂಬ ವಿಚಾರವನ್ನು ಅವರು ಬಹಿರಂಗಪಡಿಸಿದ್ದು, ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
' ಟಾಕ್ಸಿಕ್ ' ಸಿನಿಮಾದ ' ತಬಾಹಿ' ಹಾಡು ಬರೆದ ಅನುಭವದ ಬಗ್ಗೆ ಗೀತರಚನೆಕಾರ " ಯೋಗರಾಜ್ ಭಟ್" ಖಾಸಗಿ ಮಾಧ್ಯಮ ಒಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಸಾಹಿತ್ಯದ ಆಸಕ್ತಿಯ ಬಗ್ಗೆಯೂ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
" ಖುದ್ದು ಯಶ್ ಕೂಡ ಒಬ್ಬ ಕವಿ. ಹಿಂದೆ ಅವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಸಮಯದಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು. ಅವರ ಕೆಲವು ಕವಿತೆಗಳನ್ನು ನಾನು ಓದಿದ್ದೇನೆ" ಎಂದು ಯೋಗರಾಜ್ ಭಟ್ ಹೇಳಿದ್ದಾರೆ.
' ತಬಾಹಿ ' ಹಾಡಿನ ರಚನೆಯ ಸಂದರ್ಭದಲ್ಲೂ ಯಶ್ ಹಲವು ಮೌಲಿಕ ಸಲಹೆಗಳನ್ನು ನೀಡಿದರು ಎಂದು ಅವರು ತಿಳಿಸಿದ್ದಾರೆ. ಚಿತ್ರದ ಕಥೆ, ಪಾತ್ರ ಹಾಗೂ ಹಾಡಿನ ಭಾವನೆಗೆ ಹೊಂದುವಂತೆ ಸಾಹಿತ್ಯ ರೂಪಿಸುವಲ್ಲಿ ಯಶ್ ಅವರ ಸಲಹೆಗಳು ಸಹಕಾರಿಯಾದವು ಎಂದು ಯೋಗರಾಜ್ ಭಟ್ ಹೇಳಿದ್ದಾರೆ.
ಯಶ್ ಅಭಿನಯದ ' ಟಾಕ್ಸಿಕ್ ' ಸಿನಿಮಾದ ಹಾಡುಗಳು ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ' ತಬಾಹಿ ' ಹಾಡಿಗೆ ಸಿಕ್ಕಿರುವ ಪ್ರತಿಕ್ರಿಯೆಯೂ ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ.